ಭಾನುವಾರ, ಜೂನ್ 26, 2022
22 °C
ಅರ್ಧಕ್ಕೆ ನಿಂತಿರುವ ಪಡುಕುಡೂರು ಶಿವಪುರ ಸೂರಿಮಣ್ಣು ಸಂಪರ್ಕ ರಸ್ತೆ

ಹೆಬ್ರಿ: ಅರಣ್ಯ ಕಾನೂನು ತೊಡಕು; ಅರ್ಧಕ್ಕೆ ನಿಂತ ಗ್ರಾಮೀಣ ರಸ್ತೆಗಳು

ಸುಕುಮಾರ್‌ ಮುನಿಯಾಲ್‌ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ನಗರಗಳು ಅಭಿವೃದ್ಧಿಯ ನಾಗಾಲೋಟದಲ್ಲಿದ್ದರೆ ಜಿಲ್ಲೆಯ ಕಾಡಂಚಿನ ಗ್ರಾಮಗಳು ಇಂದಿಗೂ ಮೂಲಸೌಕರ್ಯಗಳ ಸಮಸ್ಯೆಯಿಂದ ನರಳುತ್ತಿವೆ. ಹಲವು ಗ್ರಾಮಗಳು ಇಂದಿಗೂ ಡಾಂಬಾರ್ ರಸ್ತೆಯ ದರ್ಶನ ಪಡೆದಿಲ್ಲ. ಮೊಬೈಲ್ ನೆಟ್‌ವರ್ಕ್‌ ಸಿಗುವುದಿಲ್ಲ. ಬಸ್‌ಗಳು ಸಂಚರಿಸುವುದಿಲ್ಲ. ಈ ಸಮಸ್ಯೆಗಳ ಜತೆಗೆ ಅರಣ್ಯ ಕಾನೂನುಗಳು ಕೂಡ ಕಾಡಂಚಿನ ಗ್ರಾಮಗಳ ಅಭಿವೃದ್ಧಿಗೆ ತೊಡಕಾಗಿವೆ ಎಂಬ ಆರೋಪಗಳು ಸ್ಥಳೀಯ ನಿವಾಸಿಗಳದ್ದು.

ಹೆಬ್ರಿ ತಾಲ್ಲೂಕಿನ ವರಂಗ ಪಡುಕುಡೂರು ಶಿವಪುರಕ್ಕೆ ಸಂಪರ್ಕ ಕಲ್ಪಿಸುವ ಸೂರಿಮಣ್ಣು ರಸ್ತೆ ಕಾಮಗಾರಿ ಅರಣ್ಯ ಕಾನೂನುಗಳ ತೊಡಕಿನಿಂದ ಅರ್ಧಕ್ಕೆ ನಿಂತಿದೆ. ತೀರಾ ಕುಗ್ರಾಮ ಎನಿಸಿಕೊಂಡಿರುವ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರಿಮಣ್ಣು ರಸ್ತೆಗೆ ಕಾಂಕ್ರೀಟ್‌ ಹಾಕಬೇಕು ಎಂಬುದು ಇಲ್ಲಿನ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿತ್ತು. ಅದರಂತೆ ಈಚೆಗೆ ಕಾಂಕ್ರೀಟ್‌ ರಸ್ತೆ ಕೂಡ ಮಂಜೂರಾಯಿತು.

‘ನಮ್ಮ ಗ್ರಾಮ ನಮ್ಮ ರಸ್ತೆ-ಗಾಂಧಿ ಪಥ’ ಯೋಜನೆಯಡಿ ₹ 5 ಕೋಟಿ ವೆಚ್ಚದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ ಕಾರ್ಯ ಆರಂಭವಾಯಿತು. ಆದರೆ, ಅರಣ್ಯ ಇಲಾಖೆ ಕಾನೂನುಗಳ ತೊಡಕಿನಿಂದ ಕಾಮಗಾರಿ ಅರ್ಧಕ್ಕೆ ಸ್ಥಗಿತವಾಗಿದೆ. ಕಾಮಗಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಅಡ್ಡಿಪಡಿಸಿದ್ದು, ಸ್ಥಗಿತವಾಗಿದೆ.

ದಶಕಗಳ ಬೇಡಿಕೆ ಈಡೇರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಗ್ರಾಮಸ್ಥರಿಗೆ ಮತ್ತೆ ನಿರಾಶೆಯಾಗಿದೆ. ಅಪೂರ್ಣ ಕಾಮಗಾರಿಯಿಂದ ಹೊಂಡಗುಂಡಿಗಳಿರುವ ಮಣ್ಣಿನ ರಸ್ತೆಯಲ್ಲೇ ಗ್ರಾಮಸ್ಥರು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸೂರಿ ಮಣ್ಣು ರಸ್ತೆ ಮಾತ್ರವಲ್ಲ, ಅರಣ್ಯ ಕಾನೂನುಗಳ ಅಡ್ಡಿಯಿಂದ ಕಾಡಂಚಿನ ಹಲವು ಗ್ರಾಮಗಳಿಗೆ ಸಂಪರ್ಕ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಜಿಲ್ಲೆಯ ಹಲವೆಡೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳ ಅಭಿವೃದ್ಧಿ, ಹೊಸ ರಸ್ತೆಗಳ ನಿರ್ಮಾಣ, ಮಣ್ಣಿನ ರಸ್ತೆಗಳಿಗೆ ಕಾಂಕ್ರೀಟ್ ಹಾಗೂ ಡಾಂಬಾರು ಹಾಕುವ ಕಾರ್ಯ ನಡೆಯುತ್ತಿದೆ. ಬಹುತೇಕ ಕಾಮಗಾರಿಗಳು ಅರಣ್ಯ ಕಾನೂನುಗಳ ತೊಡಕಿನಿಂದ ಅರ್ಧಕ್ಕೆ ನಿಂತಿವೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರಾದ ರಾಘವೇಂದ್ರ.

ನಗರ, ಪಟ್ಟಣ ವ್ಯಾಪ್ತಿಗೊಳಪಡುವ ಮುಖ್ಯ ರಸ್ತೆಗಳಿಗೆ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೊಳಪಟ್ಟ ರಸ್ತೆಗಳಿಗೆ ಒಂದು ಕಾನೂನು, ಹಳ್ಳಿಯ ಒಳ ರಸ್ತೆಗಳಿಗೆ ಮತ್ತೊಂದು ಕಾನೂನು, ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯ ರಸ್ತೆಗಳಿಗೆ ಇನ್ನೊಂದು ಕಾನೂನು ಎಂದು ಸಾರ್ವಜನಿಕರು ಟೀಕಿಸುತ್ತಿದ್ದಾರೆ. ಗುತ್ತಿಗೆದಾರ ರಸ್ತೆ ಕಾಮಗಾರಿ ಆರಂಭಿಸಿದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ನಿಯಮಗಳ ನೆಪವೊಡ್ಡಿ ಅಡ್ಡಿಪಡಿಸುತ್ತಾರೆ. ಅರಣ್ಯ ಇಲಾಖೆ ಪರವಾನಗಿ ಪಡೆದು ರಸ್ತೆ ಮಾಡಿ ಎಂದು ಕೆಲಸ ನಿಲ್ಲಿಸುತ್ತಾರೆ ಎಂದು ದೂರುತ್ತಾರೆ ಗ್ರಾಮದ ರಾಜಶೇಖರ್.

ಅರಣ್ಯ ಇಲಾಖೆ ಮೇಲೆ ಕಾಡಂಚಿನ ಗ್ರಾಮಸ್ಥರಿಗೆ ಬೇಸರ ಹುಟ್ಟಿಕೊಂಡಿದೆ. ಅಭಿವೃದ್ಧಿಗೆ ಅಡ್ಡಿ ಮಾಡುತ್ತಾರೆ ಎಂದು ದೂರುತ್ತಾರೆ. ಗ್ರಾಮ ಸಭೆ, ಜನಸಂಪರ್ಕ ಸಭೆ, ಗ್ರಾಮವಾಸ್ತವ್ಯ, ಪೊಲೀಸ್ ಜನಸಂಪರ್ಕ ಸಭೆಯಲ್ಲಿ ಕಾಡಂಚಿನ ರಸ್ತೆಗಳ ಅಭಿವೃದ್ಧಿಗೆ ಅರಣ್ಯ ಇಲಾಖೆಯ ತೊಡಕಿನ ಬಗ್ಗೆ ನಿರಂತರವಾಗಿ ದೂರು ಸಲ್ಲಿಸಿದರೂ ಬಗೆಹರಿದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.

ಅರಣ್ಯ ಇಲಾಖೆ ಆಕ್ಷೇಪಗಳಿಂದ ಉತ್ತಮ ರಸ್ತೆಗಳನ್ನು ಮಾಡಲಾಗುತ್ತಿಲ್ಲ. ಸರಿಯಾಗಿ ಕಾಲುವೆ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಸಂಚಾರಕ್ಕೆ ಕಷ್ಟವಾಗುವಂತೆ ರಸ್ತೆಗಳನ್ನು ತಿರುವು ಮುರುವು ಮಾಡಬೇಕಾಗಿದೆ. ಎರಡು ವಾಹನಗಳು ಎದುರಾದರೆ, ಮರಗಳಿಗೆ ತಾಗಿಯೇ ವಾಹನಗಳು ಸಂಚರಿಸಬೇಕಾಗಿದೆ ಎನ್ನುತ್ತಾರೆ ಗುತ್ತಿಗೆದಾರರೊಬ್ಬರು.

ಅರಣ್ಯ ನಾಶ, ಪ್ರಾಣಿಬೇಟೆ, ಅರಣ್ಯ ಅತಿಕ್ರಮಣದ ವಿರುದ್ಧ ಅರಣ್ಯ ಇಲಾಖೆ ಕಠಿಣ ಕ್ರಮ ಜರುಗಿಸಲಿ. ಕನಿಷ್ಠ ಕಾಡಂಚಿನ ಗ್ರಾಮಗಳಿಗೆ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವಾಗ, ಮಾನವೀಯತೆ ನೆಲೆಯಲ್ಲಿ ಅವಕಾಶ ಕೊಡಬೇಕು ಎಂದು ಆಗ್ರಹಿಸುತ್ತಾರೆ ಗ್ರಾಮಸ್ಥರು.

ಶಿವಪುರ ಗ್ರಾಮದ ಕೆಳ ಖಜಾನೆ ರಸ್ತೆ ವಿಸ್ತರಣೆ ಮಾಡಲು ಕಾನೂನುಗಳ ಅಡ್ಡಿಯಿಂದ ರಸ್ತೆಯನ್ನು ಬಹಳ ಕಿರಿದಾಗಿ ನಿರ್ಮಿಸಲಾಗಿದೆ. ಹೀಗೆ ಹಲವು ರಸ್ತೆಗಳ ಕಾಮಗಾರಿ ಸ್ಥಗಿತವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಸ್ಥಳೀಯರು.

‘ಅಭಿವೃದ್ಧಿಗೆ ಸಹಕರಿಸಿ’

ಅರಣ್ಯ ಇಲಾಖೆ ಕೂಡ ಅಭಿವೃದ್ಧಿ ಕಾಮಗಾರಿಗಳಿಗೆ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೊಂದಿಗೆ ಕೈಜೋಡಿಸಿ ಕಾಡಂಚಿನ ಗ್ರಾಮಗಳಲ್ಲಿ ಸಮರ್ಪಕ ರಸ್ತೆಗಳ ನಿರ್ಮಾಣಕ್ಕೆ ಸಹಕರಿಸಬೇಕು. ಆದರೆ, ಅರಣ್ಯ ಇಲಾಖೆಯ ಅಡ್ಡಿಯಿಂದಾಗಿ ಗ್ರಾಮದಲ್ಲಿ ರಸ್ತೆಗಳ ಕಾಮಗಾರಿ ಕೆಲಸ ಪೂರ್ಣವಾಗುತ್ತಿಲ್ಲ ಎಂದು ಸ್ಥಳೀಯ ಮುಖಂಡ ಹುಣ್ಸೆಯಡಿ ಸುರೇಶ ಶೆಟ್ಟಿ ಹೇಳಿದರು.

‘ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ ಇಲ್ಲ’

‘ರಸ್ತೆಗಳ ನಿರ್ಮಾಣ ಸಹಿತ ಅಭಿವೃದ್ಧಿ ಕಾರ್ಯಕ್ಕೆ ಅರಣ್ಯ ಯಾವುದೇ ಅಡ್ಡಿ ಮಾಡುತ್ತಿಲ್ಲ. ಅರಣ್ಯ ಇಲಾಖೆಯ ನಿಯಮದಂತೆ ಪರವಾನಗಿ ಪಡೆದು ಮಾಡಿದರೆ ಯಾವೂದೇ ಸಮಸ್ಯೆ  ಎದುರಾಗುವುದಿಲ್ಲ. ರಸ್ತೆಗಳ ನಿರ್ಮಾಣಕ್ಕೆ ಹಲವು ನಿಯಮಗಳಿದ್ದು, ಪಾಲಿಸಬೇಕಾಗಿರುವುದು ಅತ್ಯಗತ್ಯ’ ಎಂದು ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು