ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಭಿಕ್ಷೆಗೆ ಬರುವರೇ ಮಠಾಧೀಶರು?

Last Updated 31 ಮಾರ್ಚ್ 2018, 5:57 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹಲವು ಮಠಾಧೀಶರು ಅಭ್ಯರ್ಥಿಗಳಾಗುವ ಹಂಬಲ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಲಿಂಗಾಯತ ಮತ್ತು ವೀರಶೈವ ಬಣಗಳ ಮಠಾಧೀಶರು ತೆರೆಯ ಮರೆಯಲ್ಲೇ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲು ಸಜ್ಜಾಗುತ್ತಿದ್ದಾರೆ.

‘ಶಿವಾಚಾರ್ಯರಲ್ಲಿ ಜಂಗಮರು, ಐನೋರು, ಸ್ವಾಮಿಗಳು, ಆರಾಧ್ಯರು ಹಾಗೂ ಆಚಾರ್ಯರು ಬಹುತೇಕ ಬಿಜೆಪಿ ಪರ ಮತ ಯಾಚಿಸುವ ಸಿದ್ಧತೆ
ನಡೆಸುತ್ತಿದ್ದರೆ ವಿರಕ್ತ ಮಠಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಬೆಂಬಲಿಸುವಂತೆ ಮಠದ ಪಡಸಾಲೆಗಳಲ್ಲಿ ಪ್ರಚಾರ ನಡೆಸಲಿದ್ದಾರೆ‘ ಎಂದು ಮೂಲಗಳು ತಿಳಿಸಿವೆ.

‘ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ನಡೆಸಿದ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು’ ಎಂದು ಇತ್ತೀಚೆಗಷ್ಟೇ ರಂಭಾಪುರಿಯ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದ್ದರು. ಇದಕ್ಕೆ ಮಾತೆ ಮಹಾದೇವಿ ಲಿಂಗಾಯತ ಮತದಾರರು
ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸುವಂತೆ ಕರೆ ನೀಡಿದ್ದರು.

ವೀರಶೈವ ಪ್ರತಿಪಾದಕ ಶಿವಾಚಾರ್ಯರ ಪರವಾಗಿ ದುಡಿಯುತ್ತಿರುವ ‘ಜಗದ್ಗುರು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆ’, ‘ಅಖಿಲ ಭಾರತ ಬೇಡ ಜಂಗಮ ಸಂಸ್ಥೆ’, ‘ಅಖಿಲ ಭಾರತ ಶಿವಾಚಾರ್ಯ ಧರ್ಮ ಸಂಸ್ಥೆ’, ‘ಡಾ.ಬಿ.ಆರ್.ಅಂಬೇಡ್ಕರ್ ಬೇಡ–ಜಂಗಮ ಸಂಸ್ಥೆ’, ‘ಅಖಿಲ ಕರ್ನಾಟಕ ಜಂಗಮ ಅಭಿವೃದ್ಧಿ ಸಂಸ್ಥೆ’, ‘ಅಖಿಲ ಭಾರತ ವೀರ ಮಾಹೇಶ್ವರ ಸಂಸ್ಥೆ’, ಶ್ರೀಮದ್ ವೀರಶೈವ ಸದ್ಬೋಧನಾ ಸಂಸ್ಥೆ ಹಾಗೂ ಅಖಿಲ ಕರ್ನಾಟಕ ಅರ್ಚಕರ, ಪುರೋಹಿತರ ಸಂಘ’ಗಳು ಬಿಜೆಪಿ ಪರ ಪ್ರಚಾರಕ್ಕೆ ಕಾರ್ಯೋನ್ಮುಖವಾಗಿವೆ ಎಂದು ತಿಳಿದು ಬಂದಿದೆ.

ಇದಕ್ಕೆ ಪ್ರತಿಯಾಗಿ ವಿರಕ್ತ ಮಠಾಧೀಶರನ್ನೂ ಮತಭಿಕ್ಷೆಗೆ ಅಣಿಗೊಳಿಸಲು ಕಾಂಗ್ರೆಸ್‌ ಪ್ರತಿತಂತ್ರ ವನ್ನು ಹೆಣೆದಿದೆ.

‘ಮೊದಲು ವೀರಶೈವರು ಯಾವ ಸೂತ್ರ ರೂಪಿಸುತ್ತಾರೊ ಅದನ್ನು ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು’ ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘3ರಂದು ನಿರ್ಣಯ ಕೈಗೊಳ್ಳುತ್ತೇವೆ’

‘ಬಾಗಲಕೋಟೆ ಜಿಲ್ಲೆಯ ಬದಾಮಿ ಸಮೀಪದ ಶಿವಯೋಗ ಮಂದಿರ ಕೇಂದ್ರದಲ್ಲಿ ಏಪ್ರಿಲ್‌ ಮೂರರಂದು ಸುಮಾರು 200ಕ್ಕೂ ಹೆಚ್ಚು ವೀರಶೈವ ಸ್ವಾಮಿಗಳು ಸೇರಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಈ ಕುರಿತಂತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಶಿವಯೋಗ ಮಂದಿರದ ಸಂಗನ ಬಸವ ಸ್ವಾಮೀಜಿ ತಿಳಿಸಿದರು.

‘ಅಂದು ಶಿವಯೋಗ ಮಂದಿರಕ್ಕೆ ಅಮಿತ್‌ ಶಾ ಬರುತ್ತಿದ್ದಾರೆ. ಶಾ ಅವರು ಬರುವುದಕ್ಕೂ ಮುನ್ನ ಮಠಾಧೀಶರು ಬಿಜೆಪಿಗೆ ಬೆಂಬಲಿಸುವ ಮತ್ತು ಪ್ರಚಾರ ನಡೆಸುವ ಬಗ್ಗೆ ಚರ್ಚಿಸಲಿ ದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT