ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿಥಿ ಉಪನ್ಯಾಸಕರಿಗೆ ಸಿಕ್ಕಿದ್ದು ಸಂಕ್ರಾಂತಿ ಸಿಹಿಯಲ್ಲ ಕಹಿ’

ಸೇವಾ ಭದ್ರತೆ ಸೇರಿದಂತೆ ಬೇಡಿಕೆಗಳು ಈಡೇರುವವರೆಗೂ ಹೋರಾಟ
Last Updated 15 ಜನವರಿ 2022, 16:12 IST
ಅಕ್ಷರ ಗಾತ್ರ

ಉಡುಪಿ: ರಾಜ್ಯ ಸರ್ಕಾರ ಮಕರ ಸಂಕ್ರಾಂತಿಗೆ ಅತಿಥಿ ಉಪನ್ಯಾಸಕರಿಗೆ ನೀಡಿದ್ದು ಸಿಹಿಯಲ್ಲ ಕಹಿ ಎಂದು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷೆ ಡಾ.ಶಾಹಿದಾ ಜಹಾನ್ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಿ ಎಂಬುದು ಪ್ರಮುಖ ಬೇಡಿಕೆಯಾಗಿತ್ತು. ಆದರೆ, ಸರ್ಕಾರ ಮುಖ್ಯ ಬೇಡಿಕೆಯನ್ನು ಈಡೇರಿಸದೆ, ಸಾವಿರಾರು ಅತಿಥಿ ಉಪನ್ಯಾಸಕರನ್ನು ನಿರುದ್ಯೋಗಿಗಳನ್ನಾಗಿ ಮಾಡಲು ಹೊರಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಧಾರದಿಂದಾಗಿ ರಾಜ್ಯದಲ್ಲಿರುವ 14,500 ಅತಿಥಿ ಉಪನ್ಯಾಸಕರಲ್ಲಿ 7,250 ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಒಬ್ಬರ ಸಂಬಳವನ್ನು ಕಿತ್ತು ಮತ್ತೊಬ್ಬರಿಗೆ ನೀಡುವ ಕೆಲಸಕ್ಕೆ ಕೈಹಾಕಿದೆ. ಯುಜಿಸಿ ನಿಗದಿಪಡಿಸಿದ ಅರ್ಹತೆ (ನೆಟ್‌, ಪಿಎಚ್‌ಡಿ) ಹೊಂದಿರುವ ಹಾಗೂ ಹೆಚ್ಚು ಅನುಭವ ಹೊಂದಿರುವ ಅತಿಥಿ ಉಪನ್ಯಾಸರಿಗೆ ಮಾತ್ರ ವೇತನ ಹೆಚ್ಚಾಗಲಿದೆ. ಕಡಿಮೆ ಅನುಭವ ಹೊಂದಿರುವ ಹಾಗೂ ಯುಜಿಸಿ ನಿಗದಿಪಡಿಸಿದ ಅರ್ಹತೆ ಇಲ್ಲದ ಅತಿಥಿ ಉಪನ್ಯಾಸಕರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದರು.

ಅತಿಥಿ ಉಪನ್ಯಾಸಕರ ಕಾರ್ಯಭಾರವನ್ನು 8 ಗಂಟೆಯಿಂದ 15 ಗಂಟೆಗೆ ಹೆಚ್ಚಿಸಿರುವುದರಿಂದ ಸಹಜವಾಗಿ ಶೇ 50ರಷ್ಟು ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಳ್ಳಲಿದ್ದಾರೆ. ಜತೆಗೆ, ವರ್ಷದಲ್ಲಿ 10 ತಿಂಗಳು ಮಾತ್ರ ವೇತನ ನೀಡಲು ನಿರ್ಧರಿಸಲಾಗಿದ್ದು, 2 ತಿಂಗಳು ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಶಾಹಿದಾ ಜಹಾನ್ ಪ್ರಶ್ನಿಸಿದರು.

ಕುಂದಾಪುರ ತಾಲ್ಲೂಕು ಘಟಕದ ಅಧ್ಯಕ್ಷ ಮಣಿಕಂಠ ಮಾತನಾಡಿ, ರಾಜ್ಯದಲ್ಲಿ 4500 ಅತಿಥಿ ಉಪನ್ಯಾಸಕರು ಮಾತ್ರ ಯುಜಿಸಿ ಅರ್ಹತೆ ಪಡೆದಿದ್ದಾರೆ. 9,500 ಮಂದಿ ಅರ್ಹತೆ ಪಡೆದಿಲ್ಲ. ಯುಜಿಸಿ ನಿಗದಿಪಡಿಸಿದ ಅರ್ಹತೆ ಪಡೆಯದ ನೂರಾರು ಅತಿಥಿ ಉಪನ್ಯಾಸಕರು 10ರಿಂದ 20 ವರ್ಷಗಳಿಂದ ದುಡಿಯುತ್ತಿದ್ದು ಅವರೆಲ್ಲರೂ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದರು.

ಸರ್ಕಾರ ಎಲ್ಲ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು, ನೇಮಕಾತಿಯಲ್ಲಿ ಕೃಪಾಂಕ ನೀಡಬೇಕು, ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಯಲಿದೆ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಸೋಮವಾರದಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲಿದ್ದು, ಬೇಡಿಕೆ ಈಡೇರುವವರೆಗೂ ಅರ್ಜಿ ಹಾಕದಿರಲು ನಿರ್ಧರಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸುಜಾತಾ, ವಿನಯಚಂದ್ರ, ಗುರುರಾಜ್, ವೇದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT