ಗುರುವಾರ , ಜುಲೈ 29, 2021
24 °C
ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ರವೀಂದ್ರನಾಥ್ ಶಾನುಭಾಗ್‌

ಗಲ್ಫ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕರಾವಳಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಗಲ್ಫ್‌ನ ಕತಾರ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವವರು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಸಂಪರ್ಕಿಸಿ ಸಹಾಯಕ್ಕೆ ಮನವಿ ಮಾಡುತ್ತಿದ್ದಾರೆ. ಸರ್ಕಾರ ಅವರ ನೆರವಿಗೆ ಧಾವಿಸಬೇಕು ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್‌ ಶಾನುಭಾಗ್ ತಿಳಿಸಿದ್ದಾರೆ.

ಬಹರೈನ್‌ನಲ್ಲಿರುವ ಪ್ರತಿಷ್ಠಾನದ ಕಾರ್ಯಕರ್ತರಾದ ನವೀನ್ ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವಕರ ತಂಡ ತೊಂದರೆಗೊಳಗಾದವರ ನೆರವಿಗೆ ನಿಂತಿದ್ದು, ಪಾಸ್‌ಪೋರ್ಟ್ ನಂಬರ್, ವಿಳಾಸ, ವೀಸಾ ಹಾಗೂ ಎಂಪ್ಲಾಯ್‌ಮೆಂಟ್ ವಿವರ ಸಂಗ್ರಹಿಸಿ ಪ್ರತಿಷ್ಠಾನದ ಕಚೇರಿಗೆ ಕಳಿಸುತ್ತಿದ್ದಾರೆ.

ಎಲ್ಲ ವಿವರಗಳನ್ನು ದುಬೈ, ರಿಯಾದ್, ಕತಾರ್ ಹಾಗೂ ಇತರೆ ಭಾರತೀಯ ರಾಯಭಾರಿ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯಕ್ಕೂ ತಲುಪಿಸಲಾಗಿದೆ. ಇವರೆಲ್ಲರನ್ನೂ ಶೀಘ್ರ ಭಾರತಕ್ಕೆ ಕರೆತರುವುದಾಗಿ ರಾಯಭಾರ ಕಚೇರಿ ಆಶ್ವಾಸನೆ ನೀಡಿದೆ ಎಂದು ರವೀಂದ್ರ ನಾಥ್ ಶಾನುಭಾಗ್ ತಿಳಿಸಿದ್ದಾರೆ.

ವೆಬ್‌ಸೈಟ್‌ನಲ್ಲಿ ನೋಂದಣಿ: ಕೊರೊನಾ ಲಾಕ್‌ಡೌನ್‌ ಸಂಕಷ್ಟದಿಂದ ನೂರಾರು ಕಾರ್ಮಿಕರು ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಅವರೆಲ್ಲರೂ ಭಾರತೀಯ ರಾಯಭಾರ ಕಚೇರಿಗಳಲ್ಲಿ ನೋಂದಣಿಗೆ ಸರತಿಯಲ್ಲಿ ಕಾಯುತ್ತಿದ್ದಾರೆ.

ಕೇರಳ, ಆಂಧ್ರ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯ ತಮ್ಮವರನ್ನು ಕರೆಸಿಕೊಳ್ಳಲು ವಿಮಾನಗಳ ವ್ಯವಸ್ಥೆ ಮಾಡಿವೆ. ಆದರೆ, ಕರ್ನಾಟಕ ಸರ್ಕಾರದ ಅಧಿಕಾರಿಗಳು ಸಹಕಾರ ನೀಡುತ್ತಿಲ್ಲ ಎಂದು ಕಾರ್ಕಳದ ಭಾಸ್ಕರ ಬಂಗೇರ, ಪಾದೂರಿನ ರಘುನಾಥ ಕುಂದರ್, ಬೆಳ್ವೆಯ ಪ್ರವೀಣ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಶಾನುಭಾಗ್ ತಿಳಿಸಿದ್ದಾರೆ.‌

ಕತಾರ್‌ನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದ ಭಾಸ್ಕರ ಬಂಗೇರ್ ಅವರು ಉದ್ಯೋಗವಿಲ್ಲದೆ, ಹಣವೂ ಇಲ್ಲದೆ  ಕುಟುಂಬವನ್ನು ಸಂಪರ್ಕಿಸಲೂ ಸಾಧ್ಯವಾಗುತ್ತಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲಿರುವ ಹೆಚ್ಚಿನ ಕಾರ್ಮಿಕರು ಅವಿದ್ಯಾವಂತರಾಗಿದ್ದು, ಜಾಲತಾಣ ಬಳಕೆ ಅಥವಾ ಇಮೇಲ್‌ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.

ಅಸಹಾಯಕರ ನೆರವಿಗೆ ಗಲ್ಫ್‌ನಲ್ಲಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಕಾರ್ಯಕರ್ತರು ಸೇರಿ ತುಳುನಾಡ ಗಲ್ಫ್ ಸಮಿತಿ ರಚಿಸಿದ್ದಾರೆ. ಗುರುಪುರದ ಮಳಲಿಮಟ್ಟಿಯ ನವೀನ್ ಪೂಜಾರಿ ನೇತೃತ್ವದಲ್ಲಿ ಕಾಜಿಲದ ರಾಜೇಶ್ ಸುವರ್ಣ (ಸೌದಿ ಅರೆಬೀಯ), ಜಯರಾಜ್ ಭಂಡಾರಿ (ಬಹರೈನ್), ಬಜ್ಪೆಯ ನಿತಿನ್ ಕುಮಾರ್ (ಕತಾರ್), ಗಂಗೊಳ್ಳಿಯ ಮಹಮ್ಮದ್ ಅಜಮ್ (ಸೌದಿ ಅರೆಬೀಯ), ಗಂಜಿಮಠದ ಯೋಗೇಶ್‌ (ದುಬೈ) ಸಮಿತಿಯ ಸ್ವಯಂಸೇವಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಂಕಷ್ಟಕ್ಕೊಳಗಾಗಿರುವವರು ತುರ್ತು ನೆರವಿಗೆ ಮೊಬೈಲ್‌ ನಂಬರ್‌, ಪಾಸ್‌ಪೋರ್ಟ್, ವಿಳಾಸ, ವೀಸಾ ವಿವರಗಳನ್ನು ನವೀನ್ ಪೂಜಾರಿ ಅವರನ್ನು (97332010859) ಸಂಪರ್ಕಿಸಬಹುದು. ಕಾನೂನು ಬಾಹಿರವಾಗಿ ಗಲ್ಫ್ ಸೇರಿದವರೂ ಸಂಪರ್ಕಿಸುತ್ತಿದ್ದಾರೆ. ಅವರಲ್ಲಿ ಕಾನೂನುಬದ್ಧ ವೀಸಾ ಇಲ್ಲ. ಅವರಿಗೆ ಯಾವ ರೀತಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ರವೀಂದ್ರ ನಾಥ್‌ ಶಾನುಭಾಗ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.