ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭ ಕೊರಳಿನ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ

ಅರ್ಥಪೂರ್ಣ ಮಹಿಳಾ ದಿನ ಆಚರಣೆಗೆ ಮಣಿಪಾಲ ಸ್ತ್ರೀರೋಗ ತಜ್ಞರ ಸಂಘ ನಿರ್ಧಾರ
Last Updated 4 ಮಾರ್ಚ್ 2021, 15:44 IST
ಅಕ್ಷರ ಗಾತ್ರ

ಉಡುಪಿ: ವಿಶ್ವ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಜಿಲ್ಲೆಯಾದ್ಯಂತ ಮಾರ್ಚ್‌ 6ರಿಂದ 8ರವರೆಗೆ ಗರ್ಭ ಕೊರಳಿನ ಕ್ಯಾನ್ಸರ್‌ ಪತ್ತೆಗೆ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಮಣಿಪಾಲ ಸ್ತ್ರೀರೋಗ ತಜ್ಞರ ಸಂಘದಿಂದ ಅಧ್ಯಕ್ಷ ಡಾ.ಕೃಷ್ಣಾನಂದ ಮಲ್ಯ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ತ್ರೀರೋಗ ತಜ್ಞರ ಸಂಘ ದೇಶದಾದ್ಯಂತ 258 ಶಾಖೆಗಳನ್ನು ಹೊಂದಿದ್ದು, ಜಿಲ್ಲೆಯಲ್ಲೂ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಸ್ತ್ರೀ ರೋಗ ತಜ್ಞ ವೈದ್ಯರು ಸಂಘದ ಸದಸ್ಯರಾಗಿದ್ದು, ಜಿಲ್ಲೆಯ ಆಯ್ದ ಆಸ್ಪತ್ರೆಗಳಲ್ಲಿ ಮೂರು ದಿನ ಉಚಿತವಾಗಿ ಗರ್ಭ ಕೊರಳಿನ ಕ್ಯಾನ್ಸರ್ ಪತ್ತೆ ಶಿಬಿರ ಆಯೋಜಿಸಲಾಗಿದೆ. ಮಹಿಳೆಯರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಮಹಿಳೆಯರಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ ಪೈಕಿ ಗರ್ಭಕೊರಳಿನ ಕ್ಯಾನ್ಸರ್ ಕೂಡ ಒಂದಾಗಿದ್ದು, ಪ್ರತಿ ವರ್ಷ 1.23 ಲಕ್ಷ ಮಹಿಳೆಯರು ರೋಗಕ್ಕೆ ತುತ್ತಾಗುತ್ತಿದ್ದಾರೆ. 74,000 ಮಹಿಳೆಯರು ರೋಗದಿಂದ ಮೃತಪಡುತ್ತಿದ್ದಾರೆ. ಆರಂಭಿಕ ಹಂತದಲ್ಲಿ ರೋಗ ಪತ್ತೆಯ ಮೂಲಕ ಗರ್ಭ ಕೊರಳಿನ ಕ್ಯಾನ್ಸರ್ ತಡೆಯಬಹುದಾಗಿದೆ ಎಂದು ಕೃಷ್ಣಾನಂದ ಮಲ್ಯ ಮಾಹಿತಿ ನೀಡಿದರು.

ಗರ್ಭ ಕೊರಳಿನ ಕ್ಯಾನ್ಸರ್ ಪತ್ತೆಗೆ ಪ್ಯಾಪ್‌ಸ್ಮಿಯರ್ ಪರಿಣಾಮಕಾರಿ ಪರೀಕ್ಷೆಯಾಗಿದ್ದು, ಸಂಘದಿಂದ ಉಚಿತವಾಗಿ ಮಾಡಲಾಗುವುದು. ಈ ಪರೀಕ್ಷೆಯಲ್ಲಿ ಕ್ಯಾನ್ಸರ್ ಪೂರ್ವ ಹಂತದಲ್ಲಿಯೇ ಗರ್ಭ ಕೊರಳಿನಲ್ಲಿರುವ ಕ್ಯಾನ್ಸರ್ ಜೀವಕೋಶಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಚಿಕಿತ್ಸೆಯನ್ನೂ ಪಡೆದು ಸಂಪೂರ್ಣವಾಗಿ ಗುಣಮುಖರಾಗಬಹುದು. 25 ರಿಂದ 60 ವರ್ಷದವರೆಗಿನ ಮಹಿಳೆಯರು ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎಂದು ಸಂಘದ ಕಾರ್ಯದರ್ಶಿ ರಾಜಲಕ್ಷ್ಮಿ ತಿಳಿಸಿದರು.

ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳದವರು, ಬಿಳಿಸ್ರಾವದ ಮುಟ್ಟಿನ ಸಮಸ್ಯೆ ಇರುವವರು, ಹಲವು ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವವರು ಅಗತ್ಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆ ವೇಳೆ ಕ್ಯಾನ್ಸರ್ ಜೀವಕೋಶಗಳು ಪತ್ತೆಯಾದರೆ, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂಬ ವಿವರ ಹಾಗೂ ಚಿಕಿತ್ಸಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಸಂಘದ ಸದಸ್ಯತ್ವ ಪಡೆದಿರುವ ವೈದ್ಯರು ಕರ್ತವ್ಯ ನಿರ್ವಹಿಸುವ ಆಸ್ಪತ್ರೆಗಳಲ್ಲಿ ಶಿಬಿರ ನಡೆಯುತ್ತಿದೆ. ಸಾರ್ವಜನಿಕರು ಸ್ತ್ರೀರೋಗ ತಜ್ಞರ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT