ಮಂಗಳವಾರ, ಆಗಸ್ಟ್ 20, 2019
21 °C
ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಉಡುಪಿ: ರೆಡ್‌ ಅಲರ್ಟ್‌ ಘೋಷಣೆ, ಮಳೆ ಹೆಚ್ಚಾದರೆ ಎನ್‌ಡಿಆರ್‌ಎಫ್‌ ನೆರವು

Published:
Updated:
Prajavani

ಉಡುಪಿ: ಜಿಲ್ಲೆಯಲ್ಲಿ ಆ.7ರಿಂದ 8ರಂದು 210 ಮಿ.ಮೀಗಿಂತ ಹೆಚ್ಚು ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಮುದ್ರ ಪ್ರಕ್ಷುಬ್ಧಗೊಂಡಿರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರ ಹಾಗೂ ನದಿಗಳಲ್ಲಿ ಮೀನುಗಾರಿಕೆಗೆ ತೆರಳಬಾರದು. ಸಾರ್ವಜನಿಕರು ಹಾಗೂ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು ಎಂದು ಡಿಸಿ ಸೂಚನೆ ನೀಡಿದ್ದಾರೆ.

ಮುಂಜಾಗೃತ ಕ್ರಮವಾಗಿ ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿರಬೇಕು. ಮೊಬೈಲ್, ಕಚೇರಿಯ ದೂರವಾಣಿ ಚಾಲನೆಯಲ್ಲಿರಬೇಕು. ವಾಹನ ಸೇರಿದಂತೆ ತುರ್ತು ನೆರವಿಗೆ ಬೇಕಾದ ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಬೇಕು ಎಂದು ಡಿಸಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ರಜೆ ನೀಡುವ ಅಧಿಕಾರ ತಹಶೀಲ್ದಾರ್‌ಗಳಿಗೆ: ಆ.7ರಂದು ಶಾಲಾ ಕಾಲೇಜು, ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ. 8 ಹಾಗೂ 9ರಂದು ಪರಿಸ್ಥಿತಿ ನೋಡಿಕೊಂಡು ರಜೆ ಘೋಷಿಸುವ ಅಧಿಕಾರವನ್ನು ತಹಶೀಲ್ದಾರ್‌ ಹಾಗೂ ಬಿಇಒಗಳಿಗೆ ನೀಡಲಾಗಿದೆ ಎಂದು ಡಸಿ ತಿಳಿಸಿದರು.

ಶಾಲೆಗಳಿಗೆ ರಜೆ ಘೋಷಣೆ ವಿಚಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಎನ್‌ಡಿಆರ್‌ಎಫ್‌ ಸಿಬ್ಬಂದಿ ಬಳಕೆ: ಮಳೆಯ ಪ್ರಮಾಣ ಹೆಚ್ಚಾದರೆ ತುರ್ತು ನೆರವಿಗೆ ಎನ್‌ಡಿಆರ್‌ಎಫ್‌ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು. ಎನ್‌ಡಿಆರ್‌ಎಫ್ ತಂಡ ಸುರತ್ಕಲ್‌ನಲ್ಲಿ ಬೀಡುಬಿಟ್ಟಿದ್ದು, ಅಗತ್ಯಬಿದ್ದರೆ ತಕ್ಷಣ ಕರೆಸಿಕೊಳ್ಳಲಾಗುವುದು ಎಂದು ಡಿಸಿ ತಿಳಿಸಿದರು.

ಉಚ್ಚಿಲ, ಬಡಾ ಸೇರಿದಂತೆ ಹಲವೆಡೆ ಕಡಲ್ಕೊರೆತ ತಡೆಗೆ ಕ್ರಮ ಕೈಗೊಳ್ಳಲಾಗಿದೆ. ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು. 

Post Comments (+)