ಭಾನುವಾರ, ಅಕ್ಟೋಬರ್ 25, 2020
27 °C
ಲಕ್ಷ್ಮಣ ಶೆಟ್ಟಿಗಾರ್ ಅವರ ನೆರವಿಗೆ ನಿಂತ ಸಚಿವೆ ಸ್ಮೃತಿ ಇರಾನಿ

ಉಡುಪಿ: ನೇಕಾರನ ಕಷ್ಟಕ್ಕೆ ಸ್ಪಂದನೆ, ಹರಿದುಬಂತು ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ನೆರೆಗೆ ಸಿಲುಕಿ ಬದುಕಿಗೆ ಆಧಾರವಾಗಿದ್ದ ಕೈಮಗ್ಗ ಹಾಳಾಗಿ ಸಂಕಷ್ಟಕ್ಕೆ ಸಿಲುಕಿದ್ದ ಕಟಪಾಡಿ ಮಟ್ಟುವಿನ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಬೆಂಗಳೂರಿನ ನೇಕಾರರ ಸೇವಾ ಕೇಂದ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚಿದ್ದಾರೆ.

ಈಚೆಗೆ ಲಕ್ಷ್ಮಣ ಶೆಟ್ಟಿಗಾರ್ ಅವರು ಪತ್ನಿ ಜತೆ ನೆರೆ ನೀರಿನಲ್ಲಿ ಅಸಹಾಯಕ ಸ್ಥಿತಿಯಲ್ಲಿ ನಿಂತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸುದ್ದಿಯಾಗಿತ್ತು. ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೂಡ ಸುದ್ದಿಯನ್ನು ಗಮನಿಸಿ, ನೆರವಿಗೆ ಧಾವಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದರಂತೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕ ಶಿವಶಂಕರ್, ಲಕ್ಷ್ಮಣ ಶೆಟ್ಟಿಗಾರ್‌ ನಿವಾಸಕ್ಕೆ ಭೇಟಿನೀಡಿ ತುರ್ತು ಆರ್ಥಿಕ ನೆರವು ನೀಡಿದರು. ವೀವರ್ಸ್ ಸರ್ವಿಸ್ ಸೆಂಟರ್ ಅಧಿಕಾರಿಗಳಾದ ಜವಹರ್ ಹಾಗೂ ತುಳಸಿ ರಾಮ್ ಮಗ್ಗದ ಮನೆ ಹಾಗೂ ಬದಲಿ ಸಲಕರಣೆಗೆ ನೆರವು ಮಂಜೂರು ಮಾಡಿದರು.

ಬಿಜೆಪಿ ಯುವ ಮೋರ್ಚಾ ಸೇರಿದಂತೆ ಹಲವು ಸಂಘಟನೆಗಳು ನೆರವು ನೀಡಿವೆ. ವೈಯಕ್ತಿಕವಾಗಿಯೂ ಹಲವರು ಖಾತೆಗೆ ಹಣ ಹಾಕಿದ್ದಾರೆ ಎಂದು ಪುತ್ರ ಗೋಪಾಲ್ ಶೆಟ್ಟಿಗಾರ್ ಮಾಹಿತಿ ನೀಡಿದರು.

ಮಳೆಗೆ ಹಾಳಾಗಿರುವ ಮಗ್ಗವನ್ನು ದುರಸ್ತಿಗೊಳಿಸಿ, ಹಾನಿಗೊಳಗಾಗಿರುವ ಮನೆಯನ್ನು ರಿಪೇರಿ ಮಾಡಿಸುವುದಾಗಿ ತಿಳಿಸಿದ ಗೋಪಾಲ್ ಶೆಟ್ಟಿಗಾರ್, ಕಷ್ಟಕ್ಕೆ ಸ್ಪಂದಿಸಿದ್ದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

5 ದಶಕಗಳಿಂದ ಕಾಯಕ: 72 ವರ್ಷದ ಲಕ್ಷ್ಮಣ ಶೆಟ್ಟಿಗಾರ್ ಯಕ್ಷಗಾನಕ್ಕೆ ಬಳಸುವ ವಿಶಿಷ್ಟ ಸೀರೆಗಳನ್ನು ಮಗ್ಗದಲ್ಲಿ ನೇಯ್ಯುವ ಕೆಲವೇ ನೇಕಾರರಲ್ಲಿ ಒಬ್ಬರಾಗಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಕುಲಕಸುಬು ತೊರೆಯದೆ 5 ದಶಕಗಳಿಂದಲೂ ನೇಕಾರ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು