ಶುಕ್ರವಾರ, ಆಗಸ್ಟ್ 19, 2022
25 °C
ಕಾಮಗಾರಿ ವಿಳಂಬಕ್ಕೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅಸಮಾಧಾನ

‘ವರ್ಷಾಂತ್ಯಕ್ಕೆ ಹೆದ್ದಾರಿ ಕಾಮಗಾರಿ ಪೂರ್ಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದೆ, ತವರಿಗೆ ಮರಳಿದ್ದ ಕಾರ್ಮಿಕರು ಬರುತ್ತಿದ್ದಾರೆ. ಆದರೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಹಾಗೂ 169 ಎ ಕಾಮಗಾರಿ ಪ್ರಗತಿ ಕುರಿತು ಸಭೆ ನಡೆಸಿದ ಅವರು, ಕುಂದಾಪುರದ ಮೇಲ್ಸೇತುವೆ ಕಾಮಗಾರಿ ಮೂರು‌ಕೈ ಬಳಿಯ ಅಂಡರ್‌ಪಾಸ್ ಕಾಮಗಾರಿ, ಪಡುಬಿದ್ರಿಯ ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ಸಾರ್ವಜನಿಕರಿಂದ ಪದೇಪದೇ ದೂರು, ಮನವಿಗಳು ಸಲ್ಲಿಕೆಯಾಗುತ್ತಿವೆ. ಎರಡೂ ಕಾಮಗಾರಿಗಳನ್ನು ಶೀಘ್ರ ಮುಗಿಸಿ, ಸಾರ್ವಜನಿಕರ ಬಳಕೆಗೆ ರಸ್ತೆಗಳು ಮುಕ್ತವಾಗಬೇಕು ಎಂದು ನಿರ್ದೇಶನ ನೀಡಿದರು.

ಇದಕ್ಕೆ ಉತ್ತರಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ, ನವೆಂಬರ್ ಅಂತ್ಯದೊಳಗೆ ಕುಂದಾಪುರ ಮೇಲ್ಸೇತುವೆ ಕಾಮಗಾರಿ, ಡಿಸೆಂಬರ್ ಅಂತ್ಯಕ್ಕೆ ಮೂರುಕೈ ಅಂಡರ್ ಪಾಸ್ ಹಾಗೂ ಪಡುಬಿದ್ರಿ ಸೇತುವೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುತಿಸಲಾಗಿರುವ 32 ಬ್ಲಾಕ್ ಸ್ಪಾಟ್‌ಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು. ಬೀದಿ ದೀಪಗಳನ್ನು ದುರಸ್ತಿಗೊಳಿಸಬೇಕು. ಪರ್ಕಳ ಸೇರಿದಂತೆ ಹೆದ್ದಾರಿಯಲ್ಲಿರುವ ಅಪಾಯಕಾರಿ ಪಾಟ್ ಹೋಲ್‌ಗಳನ್ನು ಮುಚ್ಚಬೇಕು ಎಂದು ಸೂಚನೆ ನೀಡಿದರು.

ಇಂದ್ರಾಳಿಯ ರೈಲ್ವೆ ಬ್ರಿಡ್ಜ್‌ ಕಾಮಗಾರಿ ವಿನ್ಯಾಸವನ್ನು ಐಐಟಿ ಮದ್ರಾಸ್‌ ಸಂಸ್ಥೆಗೆ ಪರಿಶೀಲನೆಗೆ ಕಳುಹಿಸಲಾಗಿತ್ತು. ಅಲ್ಲಿಂದ ಬಂದ ವಿನ್ಯಾಸವನ್ನು ಮುಂಬೈನ ಕೊಂಕಣ ರೈಲ್ವೆ ಕಚೇರಿಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ಕೂಡಲೇ ಕಂಪೋಸಿಟ್ ಸ್ಟೀಲ್ ಬ್ರಿಡ್ಜ್‌ ಕಾಮಗಾರಿ ಆರಂಭಿಸಲಾಗುವುದು. ಏಪ್ರಿಲ್‌ 2021ರೊಳಗೆ ಹೆದ್ದಾರಿ 169 ‘ಎ’ ಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು ಮುಕ್ತಾಯಗೊಳಿಸುವುದಾಗಿ ಅಧಿಕಾರಿಗಳು ಉತ್ತರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ರಾಜು, ತಹಸೀಲ್ದಾರ್‌ಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.