ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಿಲಗೊಳ್ಳದ ಹಿಜಾಬ್ ಪಟ್ಟು: ಭವಿಷ್ಯಕ್ಕೆ ಪೆಟ್ಟು

ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿ ಪರೀಕ್ಷೆಗೆ ಗೈರು
Last Updated 22 ಏಪ್ರಿಲ್ 2022, 13:20 IST
ಅಕ್ಷರ ಗಾತ್ರ

ಉಡುಪಿ: ಹಿಜಾಬ್ ಧರಿಸಿಯೇ ಪಿಯುಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಮುಸ್ಲಿಂ ವಿದ್ಯಾರ್ಥಿನಿಯರ ಒತ್ತಾಯಕ್ಕೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಮಣಿಯದ ಪರಿಣಾಮ ಹಿಜಾಬ್‌ಗಾಗಿ ಹೋರಾಟ ನಡೆಸುತ್ತಿರುವ ಆಲಿಯಾ ಅಸಾದಿ ಹಾಗೂ ರೇಶಮ್‌ ಪರೀಕ್ಷೆ ಬರೆಯುವ ಅವಕಾಶವನ್ನು ಕಳೆದುಕೊಂಡರು.

ಶುಕ್ರವಾರ ಬೆಳಿಗ್ಗೆ 10.15ಕ್ಕೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬಿಸಿನೆಸ್‌ ಸ್ಟಡೀಸ್‌ ವಿಷಯದ ಪರೀಕ್ಷೆ ನಿಗದಿಯಾಗಿತ್ತು. ಗುರುವಾರದವರೆಗೂ ಹಿಜಾಬ್ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲು ಪ್ರವೇಶಪತ್ರ ಪಡೆದುಕೊಂಡಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಪರೀಕ್ಷೆ ಆರಂಭವಾಗಲು ಕೆಲವೇ ನಿಮಿಷಗಳು ಬಾಕಿ ಇರುವಾಗ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬಂದ ಆಲಿಯಾ ಅಸಾದಿ ಹಾಗೂ ರೇಶಮ್‌ ಪ್ರವೇಶ ಪತ್ರ ಪಡೆದುಕೊಂಡರು.

ಬಳಿಕ ಪರೀಕ್ಷಾ ಬರೆಯಲು ನಿಗದಿಯಾಗಿದ್ದ ವಿದ್ಯೋದಯ ಪದವಿಪೂರ್ವ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಕಾಲೇಜು ಪ್ರಾಂಶುಪಾಲರನ್ನು ಒತ್ತಾಯಿಸಿದರು. ಹೈಕೋರ್ಟ್‌ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಹಾಗಾಗಿ, ಅನುಮತಿ ಕೊಡಲು ಸಾಧ್ಯವಿಲ್ಲ ಎಂದು ಪ್ರಾಂಶುಪಾಲರು ತಿಳಿಸಿದರು.

ಸುಮಾರು ಅರ್ಧತಾಸಿನವರೆಗೂ ಕಾಲೇಜಿನಲ್ಲಿ ಸಂಧಾನ ಮಾತುಕತೆಗಳು ನಡೆದರೂ ಫಲಪ್ರದವಾಗಲಿಲ್ಲ. ನ್ಯಾಯಾಲಯ ಹಾಗೂ ಸರ್ಕಾರದ ಆದೇದಂತೆ ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯುವಂತೆ ತಹಶೀಲ್ದಾರ್, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮಾಡಿದ ಮನವಿಗೆ ವಿದ್ಯಾರ್ಥಿನಿಯರಿಂದ ಸ್ಪಂದನ ಸಿಗಲಿಲ್ಲ. ‌ಪಟ್ಟು ಸಡಿಸಲಿಲ್ಲ.

10.45‌ಕ್ಕೆ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಅವಧಿ ಮುಕ್ತಾಯವಾಗುತ್ತಿದ್ದಂತೆ ಬೆಲ್‌ ಬಾರಿಸಲಾಯಿತು. ತಕ್ಷಣ ಅಲ್ಲಿದ್ದ ಸಿಬ್ಬಂದಿ ಪರೀಕ್ಷಾ ಕೇಂದ್ರದಿಂದ ಹೊರನಡೆಯುವಂತೆ ವಿದ್ಯಾರ್ಥಿನಿಯರಿಗೆ ಸೂಚನೆ ನೀಡಿದರು.

ಅಧಿಕಾರಿಗಳ ನಡೆಯಿಂದ ಬೇಸರಗೊಂಡ ಆಲಿಯಾ ಅಸಾದಿ ಹಾಗೂ ರೇಶಮ್‌ ಪರೀಕ್ಷಾ ಕೇಂದ್ರದಿಂದ ಹೊರನಡೆದರು. ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡದೆ ಆಟೋದಲ್ಲಿ ಕುಳಿತು ಮನೆಗೆ ತೆರಳಿದರು.

ಶಾಸಕ ರಘುಪತಿ ಭಟ್‌ ಖಂಡನೆ:

ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದ ವಿದ್ಯಾರ್ಥಿನಿಯರ ನಡೆಯನ್ನು ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ಖಂಡಿಸಿದ್ದಾರೆ. ಪ್ರವೇಶ ಪತ್ರ ಪಡೆಯುವಾಗ ಹಿಜಾಬ್ ಬಿಚ್ಚಿಟ್ಟ ವಿದ್ಯಾರ್ಥಿನಿಯ‌‌ರು, ಪರೀಕ್ಷೆ ಬರೆಯಲು ಮಾತ್ರ ಹಿಜಾಬ್‌ ಬೇಕು ಎಂದು ಪಟ್ಟುಹಿಡಿಯುವ ಮೂಲಕ ಹೈಕೋರ್ಟ್‌ ಆದೇಶವನ್ನು ಧಿಕ್ಕರಿಸಿದ್ದಾರೆ. ವಿದ್ಯಾರ್ಥಿನಿಯರು ನ್ಯಾಯಾಲಯಕ್ಕಿಂತ ದೊಡ್ಡವರೇ ಎಂದು ಕಿಡಿಕಾರಿದರು.

ಶನಿವಾರ ವಿಜ್ಞಾನ ವಿಷಯದ ಪರೀಕ್ಷೆ ಇದ್ದು, ಹಿಜಾಬ್‌ಗಾಗಿ ಕಾನೂನು ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರು ಪರೀಕ್ಷಾ ಕೇಂದ್ರದೊಳಗೆ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯಡಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಶಾಸಕರು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದರು.

ಆರು ವಿದ್ಯಾರ್ಥಿನಿಯರಿಂದ ಪರೀಕ್ಷೆ ಬರೆಯುತ್ತಿರುವ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೋಷಕರು ಒತ್ತಡ ಹಾಕುತ್ತಿದ್ದಾರೆ. ಸಮಾಜದ ಶಾಂತಿ ಕದಡುವ ಉದ್ದೇಶ ಹೊಂದಿರುವ ಹಿಜಾಬ್ ಪರವಾದ ವಿದ್ಯಾರ್ಥಿನಿಯರ ಬಗ್ಗೆ ಸಹಾನುಭೂತಿ ತೋರುವುದಿಲ್ಲ ಎಂದು ಶಾಸಕರು ತಿಳಿಸಿದರು.

141 ವಿದ್ಯಾರ್ಥಿಗಳು ಗೈರು

ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವಾದ ಶುಕ್ರವಾರ ಜಿಲ್ಲೆಯಾದ್ಯಂತ 141 ವಿದ್ಯಾರ್ಥಿಗಳು ಗೈರಾಗಿದ್ದಾರೆ. ವಾಣಿಜ್ಯ ವಿಭಾಗದ ಬುಸಿನೆಸ್ ಸ್ಟಡೀಸ್ ವಿಷಯದಲ್ಲಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದ 8134 ವಿದ್ಯಾರ್ಥಿಗಳ ಪೈಕಿ 7993 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಲಾಜಿಕ್ ವಿಷಯಲ್ಲಿ ನೋಂದಾಯಿಸಿಕೊಂಡಿದ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪರಿಶೀಲನೆ

ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಶುಕ್ರವಾರ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ಭೇಟಿನೀಡಿ ಪರೀಶಿಲಿಸಿದರು. ಈ ಸಂದರ್ಭ ಮಾತನಾಡಿ, ಪರೀಕ್ಷೆ ಆರಂಭವಾಗುವ ಕೊನೆಯ ಕ್ಷಣದವರೆಗೂ ಪ್ರವೇಶ ಪತ್ರ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪರೀಕ್ಷೆಯ ನಂತರ ಬಳಿಕ ಎಷ್ಟು ಮಂದಿ ಹಾಜರಾಗಿದ್ದಾರೆ, ಗೈರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಲಿದೆ. ಏ.22ರಿಂದ ಮೇ 18ರವರೆಗೆ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, 28 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಸುಗಮವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT