ಉಡುಪಿ: ಹೋಟೆಲ್ ಮೇಲೆ ದಾಳಿ ಪ್ರಕರಣ; ಮೂವರ ಬಂಧನ

ಉಡುಪಿ: ಹಿಜಾಬ್ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ ಹಾಜ್ರಾ ಶಿಫಾ ಪೋಷಕರ ಹೋಟೆಲ್ ಮೇಲೆ ದಾಳಿ ನಡೆಸಿ, ಶಿಫಾ ಸಹೋದರನ ಮೇಲೆ ಹಲ್ಲೆ ನಡೆಸಿದ್ದ ಮೂವರು ಆರೋಪಿಗಳನ್ನು ಮಲ್ಪೆ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಮಲ್ಪೆಯ ಮಂಜು ಸಾಲಿಯನ್ ಅಲಿಯಾಸ್ ಮನೋಜ್, ದೀಪಕ್ ಸಾಲ್ಯಾನ್ ಹಾಗೂ ಸನಿಲ್ ರಾಜ್ ಬಂಧಿತರಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವಿವರ
ಸೋಮವಾರ ರಾತ್ರಿ 9ರ ಸುಮಾರಿಗೆ 50ಕ್ಕೂ ಹೆಚ್ಚು ಜನರಿದ್ದ ಗುಂಪು ಮಲ್ಪೆಯ ಬಿಸ್ಮಿಲ್ಲಾ ಹೋಟೆಲ್ಗೆ ನುಗ್ಗಿ ಕಿಟಕಿ ಗಾಜುಗಳನ್ನು ಒಡೆದು, ಶಿಫಾಳ ಸಹೋದರ ಸೈಫ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಗಾಯಗೊಂಡಿದ್ದ ಸೈಫ್ಗೆ ನಗರದ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗುತ್ತಿದೆ.
ಉಡುಪಿ: ಹಿಜಾಬ್ ವಿದ್ಯಾರ್ಥಿನಿಯ ಪೋಷಕರ ಹೋಟೆಲ್ ಮೇಲೆ ದಾಳಿ, ಸಹೋದರನ ಮೇಲೆ ಹಲ್ಲೆ
ದಾಳಿ ಹಾಗೂ ಹಲ್ಲೆಯ ಹಿಂದೆ ಶಾಸಕ ರಘುಪತಿ ಭಟ್ ಕೈವಾಡವಿರುವ ಶಂಕೆಯಿದ್ದು, ತನಿಖೆ ನಡೆಸಿ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಜಿಲ್ಲಾ ಘಟಕದ ಅಧ್ಯಕ್ಷ ಅಕ್ರಂ ಅಸೀಲ್ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿನಿ ಟ್ವೀಟ್
'ಹಿಜಾಬ್ಗಾಗಿ ಹೋರಾಟ ನಡೆಸಿದ್ದಕ್ಕೆ ಕಿಡಿಗೇಡಿಗಳು ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ. ಹೋಟೆಲ್ ಧ್ವಂಸಗೊಳಿಸಿದ್ದಾರೆ. ಹಕ್ಕಿಗಾಗಿ ಧನಿ ಎತ್ತುವುದು ತಪ್ಪೇ? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಪೊಲೀಸರು ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಹಿಜಾಬ್ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿ ಹಾಜ್ರಾ ಶಿಫಾ ಟ್ವೀಟ್ ಮಾಡಿದ್ದರು. ಹಿಜಾಬ್ಗಾಗಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರೂ ಶಿಫಾಗೆ ಬೆಂಬಲ ಸೂಚಿಸಿ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಕಠಿಣ ಕ್ರಮಕ್ಕೆ ಎಸ್ಡಿಪಿಐ ಒತ್ತಾಯ
ಸಂಘ ಪರಿವಾರದ ಗೂಂಡಾಗಳು ಹೈದರ್ ಅವರ ಹೋಟೆಲ್ ಮೇಲೆ ದಾಳಿ ನಡೆಸಿ, ಶಿಫಾಳ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಖಂಡನೀಯ. ಕೃತ್ಯದಲ್ಲಿ ಭಾಗಿಯಾದವರನ್ನು ಬಂಧಿಸಬೇಕು, ದಾಳಿಯ ಹಿಂದಿರುವ ಬಿಜೆಪಿ ನಾಯಕರನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್ಡಿಪಿಐ ಒತ್ತಾಯಿಸಿದೆ.
ವೈಯಕ್ತಿಕ ದ್ವೇಷದ ದಾಳಿ
ಹೋಟೆಲ್ ಮೇಲಿನ ದಾಳಿಗೆ ಹಾಗೂ ಸೈಫ್ ಎಂಬಾತನ ಮೇಲೆ ನಡೆದ ಹಲ್ಲೆಗೆ ವೈಯಕ್ತಿಕ ದ್ವೇಷ ಕಾರಣ ಇರಬಹುದು. ಹಿಜಾಬ್ ವಿಚಾರವಾಗಿ ನಡೆದ ದಾಳಿಯಲ್ಲ. ಸಧ್ಯ ಅಧಿವೇಶನದಲ್ಲಿ ಭಾಗವಹಿಸಿದ್ದು, ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಶಾಸಕ ಕೆ.ರಘುಪತಿ ಭಟ್ ‘ಪತ್ರಿಕೆ’ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹಿಜಾಬ್ ಪ್ರಕರಣವನ್ನು ಈ ವಾರವೇ ವಿಲೇವಾರಿ ಮಾಡಲು ಇಚ್ಛಿಸಿದ್ದೇವೆ: ಹೈಕೋರ್ಟ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.