ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರಲ್ಲಿ ಕೇಸರಿ ಶಾಲು ಧರಿಸಿ ಕಾಲೇಜಿಗೆ ವಿದ್ಯಾರ್ಥಿಗಳ ಮೆರವಣಿಗೆ

ಆರ್.ಎನ್. ಶೆಟ್ಟಿ ಕಾಲೇಜಿಗೆ ರಜೆ
Last Updated 5 ಫೆಬ್ರುವರಿ 2022, 16:34 IST
ಅಕ್ಷರ ಗಾತ್ರ

ಕುಂದಾಪುರ: ಕುಂದಾಪುರ ತಾಲ್ಲೂಕಿನ ಹಲವು ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಸಂಘರ್ಷ ಶನಿವಾರವೂ ಮುಂದುವರಿದಿದ್ದು ಪರಿಸ್ಥಿತಿಯ ಉದ್ವಿಗ್ನತೆ ಕಡಿಮೆ ಮಾಡಲು ಕುಂದಾಪುರ ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಆರ್‌.ಎನ್‌.ಶೆಟ್ಟಿ ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿತ್ತು.

ಆರ್‌.ಎನ್‌.ಶೆಟ್ಟಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿದ ಕ್ರಮಕ್ಕೆ ಆಕ್ಷೇಪಿಸಿ ಕಾಲೇಜಿನ ಇತರ ವಿದ್ಯಾರ್ಥಿಗಳು ಕೇಸರಿಶಾಲು ಧರಿಸಿ ಘೋಷಣೆ ಕೂಗಿದರು. ಪರಿಸ್ಥಿತಿ ಗಂಭೀರತೆ ಅರಿತ ಕಾಲೇಜು ಆಡಳಿತ ಮಂಡಳಿ ಕಾಲೇಜಿಗೆ ರಜೆ ಘೋಷಿತು.

ಕೇಸರಿ ಶಾಲಿನ ಮೆರವಣಿಗೆ:

ಆರ್‌.ಎನ್‌.ಶೆಟ್ಟಿ ಕಾಲೇಜು ಹಾಗೂ ಭಂಡಾರ್ಕರ್ಸ್‌ ಕಾಲೇಜು ವಿದ್ಯಾರ್ಥಿಗಳು ಕುಂದೇಶ್ವರ ದೇವಸ್ಥಾನದ ಮುಖ ಮಂಟಪದಿಂದ ಶಾಸ್ತ್ರಿ ಸರ್ಕಲ್‌ವರೆಗೆ ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆದರು. ಜೈ ಶಿವಾಜಿ, ಜೈ ಭವಾನಿ, ಜೈ ಶ್ರೀರಾಮ್ ಘೋಷಣೆ ಕೂಗಿದರು. ಆರ್‌.ಎನ್‌.ಶೆಟ್ಟಿ ಕಾಲೇಜು ಮುಂಭಾಗದಲ್ಲಿ ವಿದ್ಯಾರ್ಥಿನಿಯರು ‘ಹಿಜಾಬ್ ನಮ್ಮ ಹಕ್ಕು’ ಎಂದು ಘೋಷಣೆ ಕೂಗಿದರು.

ಮೆರವಣಿಗೆ ಮುಗಿಸಿ ಬಂದ ಭಂಡಾರ್ಕರ್ಸ್‌ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಕೇಸರಿ ಶಾಲು, ಮೊಬೈಲ್ ಇಲ್ಲದೆ ಒಳ ಬರುವಂತೆ ಸೂಚಿಸಿದರು. ಅದರಂತೆ ವಿದ್ಯಾರ್ಥಿಗಳು ತರಗತಿಗೆ ತೆರಳಿದರು.

ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ನಿರಾಕರಿಸಿದ್ದನ್ನು ಖಂಡಿಸಿ ವಿದ್ಯಾರ್ಥಿನಿಯರು ಕಾಲೇಜು ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ರಜೆ ಘೋಷಣೆ:

ಬೈಂದೂರು ತಾಲ್ಲೂಕಿನ ನಾವುಂದ ಹಾಗೂ ಖಂಬದಕೋಣೆ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಶನಿವಾರ ರಜೆ ನೀಡಲಾಗಿತ್ತು. ಬೈಂದೂರು, ಗಂಗೊಳ್ಳಿ, ವಂಡ್ಸೆ ಹಾಗೂ ಶಿರೂರು ಪದವಿಪೂರ್ವ ಕಾಲೇಜುಗಳಲ್ಲಿ ತರಗತಿಗಳು ನಡೆದವು. ಗಂಗೊಳ್ಳಿ ಎಸ್‌.ವಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಮಿತಿ ಹಾಗೂ ಆಡಳಿತ ಮಂಡಳಿಯ ಸಭೆ ನಡೆಸಿ ಕಾಲೇಜಿನಲ್ಲಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಹಿಜಾಬ್ ಧರಿಸಿ ಬಂದರೆ ಪ್ರವೇಶ ನೀಡದಿರುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಯಿತು.

ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಸೂಚನೆಯಂತೆ ಶಾಲಾಭಿವೃದ್ಧಿ ಸಮಿತಿ ಸಭೆ ನಡೆದಿದ್ದು, ಕಾಲೇಜು ಸಮವಸ್ತ್ರ ಹೊರತುಪಡಿಸಿ ಬೇರೆ ವಸ್ತ್ರ ಸಂಹಿತೆಗೆ ಅವಕಾಶ ನೀಡದಂತೆ ತೀರ್ಮಾನ ತೆಗೆದುಕೊಳ್ಳಲಾಯಿತು. ಹಿಜಾಬ್ ಹಾಗೂ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ಆವರಣದೊಳಗೆ ಕೂರಲು ಪ್ರತ್ಯೇಕ ವ್ಯವಸ್ಥೆ ಮಾಡಲು ನಿರ್ಧರಿಸಲಾಯಿತು.

‘ಕಾಂಗ್ರೆಸ್‌ ಪಕ್ಷದ್ದು ಎರಡುನಾಲಗೆ’

‘ಮಹದಾಯಿ ಜಲ ವಿವಾದದ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷ ಎರಡು ನಾಲಗೆ ಹೊಂದಿದೆ. ಮಹದಾಯಿ ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಆದರೆ, ಗೋವಾದಿಂದ ನೀರು ಬಿಡುವುದಿಲ್ಲ ಎಂದು ಕಾಂಗ್ರೆಸ್‌ ಪಕ್ಷದ ಅಲ್ಲಿನ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಅದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಡುಗಡೆ ಮಾಡಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT