ಹಿರಿಯಡ್ಕ: ಪೆರ್ಡೂರಿನ ಅನಂತಪದ್ಮನಾಭ ದೇವಾಲಯದ ನಾಗಬನ, ವಾಸ್ತು ಪರಿಧಿಗೆ ಧಕ್ಕೆ ಆಗದಂತೆ ಪೆರ್ಡೂರು ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169ಎಗೆ ಬದಲಿ ಮಾರ್ಗ ಸೂಚಿಸುವಂತೆ ಹೈಕೋರ್ಟ್ ಆದೇಶ ನೀಡಿದೆ.
ಈಗಾಗಲೇ ಮಲ್ಪೆ–ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಪೆರ್ಡೂರು ಭಾಗದಲ್ಲಿ ದೇವಸ್ಥಾನಕ್ಕೆ ತಾಗಿಕೊಂಡು ಪೆರ್ಡೂರು ಪೇಟೆಯಲ್ಲಿ ಹೆದ್ದಾರಿ ಹಾದು ಹೋಗುವ ನಕಾಶೆ ತಯಾರಾಗಿತ್ತು. ಈ ಬಗ್ಗೆ ಸ್ಥಳೀಯರಾದ ರಂಜಿತ್ ಪ್ರಭು, ದೇವಸ್ಥಾನದ ಆಡಳಿತ ಕೋರ್ಟ್ ಮೊರೆ ಹೋಗಿದ್ದರು.
ದೇವಸ್ಥಾನದ ಪರ ವಾದ ಮಂಡಿಸಿದ ವಕೀಲ ಕೇತನ್ ಕುಮಾರ್ ಬಂಗೇರ, ಹೆದ್ದಾರಿ ಅಗಲಗೊಳಿಸುವ ಕಾಮಗಾರಿಯಿಂದ ಪೆರ್ಡೂರಿನ ಐತಿಹಾಸಿಕ, ಪ್ರಾಚೀನ ಅನಂತ ಪದ್ಮನಾಭ ದೇವಾಲಯದ ರಥಬೀದಿ, ನಾಗಬನ ಜಾಗದಲ್ಲಿಯೇ ಹೆದ್ದಾರಿ ಬರಲಿದ್ದು, ಇದರಿಂದ ತೊಂದರೆ ಆಗಲಿದೆ. ದೇವಾಲಯ ಮೂಲ ಸ್ವರೂಪ ಕಳೆದುಕೊಂಡು ವಾಸ್ತುವಿಗೆ ಧಕ್ಕೆ ಅಗಲಿದೆ ಎಂದು ತಿಳಿಸಿದ್ದರು.
ಬದಲಿ ಮಾರ್ಗಕ್ಕೆ ಹೈಕೋರ್ಟ್ ಸೂಚನೆ: ಪುರಾತನ ಇತಿಹಾಸ ಇರುವ ದೇವಸ್ಥಾನಗಳನ್ನು ತೊಂದರೆಯಾಗದಂತೆ ರಕ್ಷಿಸಬೇಕು. ಈ ಬಗ್ಗೆ ಹೆದ್ದಾರಿ ಇಲಾಖೆ ಪರಿಶೀಲನೆ ನಡೆಸಿ ಬದಲಿ ಮಾರ್ಗ ಸೂಚಿಸಬೇಕು. ರಸ್ತೆ ವಿಸ್ತರಣೆ ಅಥವಾ ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡುವಾಗ ದೇವಾಲಯ ಸಹಿತ ಧಾರ್ಮಿಕ ಕಟ್ಟಡಗಳಿಗೆ ಧಕ್ಕೆ ಆಗುವುದಾದರೆ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ಪ್ರಾಧಿಕಾರ ಪರ್ಯಾಯ ಮಾರ್ಗಗಳನ್ನು ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹಾಗಾಗಿ ಈ ಪ್ರಕರಣದಲ್ಲೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ಜನರಿಗೆ ಸಮಸ್ಯೆ ಆಗದಂತೆ ಬದಲಿ ಮಾರ್ಗ ಸೂಚಿಸಿ ಎಂದು ನ್ಯಾಯಾಧೀಶರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪರ ವಕೀಲರಿಗೆ ಮೌಖಿಕ ಆದೇಶ ನೀಡಿದ್ದಾರೆ.
ಕೆರೆ ಕುಸಿತದ ಭೀತಿ: ಪೆರ್ಡೂರು ಪೇಟೆಯಲ್ಲಿ ಹೆದ್ದಾರಿ ಹಾದು ಹೋದರೆ ದೇವಸ್ಥಾನಕ್ಕೆ ಹೊಂದಿಕೊಂಡಂತೆ ರಸ್ತೆ ಹೋಗುವುದರಿಂದ ಘನ ವಾಹನಗಳು ಸಂಚರಿಸಿ ಕೆರೆಯ ದಡ ಕುಸಿಯುವ ಭೀತಿ ಇದೆ. ಇದರಿಂದ ಪುರಾತನ ಇತಿಹಾಸ ಇರುವ ಕೆರೆ, ವಾಸ್ತುವಿಗೆ ಧಕ್ಕೆ ಆಗಲಿದೆ.
ಪುರಾತನ ದೇವಸ್ಥಾನ: ಉಡುಪಿ ಕೃಷ್ಣ ಮಠದಂತೆ ವಿಶೇಷ ವಾಸ್ತುವಿನಿಂದ ನಿರ್ಮಾಣಗೊಂಡಿರುವ ಪೆರ್ಡೂರು ಕದಳಿಪ್ರಿಯ ಅನಂತ ಪದ್ಮನಾಭ ದೇವಸ್ಥಾನ ವಿಶೇಷ ಸಾನಿಧ್ಯ ಶಕ್ತಿ ಹೊಂದಿದೆ. ದೇವಸ್ಥಾನದ ಸುತ್ತಲಿನ ರಥಬೀದಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಸಾಗಿ ಬರುತ್ತದೆ. ಕ್ರಮೇಣ ಇದೇ ರಸ್ತೆಯಲ್ಲಿ ವಾಹನ ಸಂಚರಿಸಿ ಮುಖ್ಯ ರಸ್ತೆಯಾಗಿದೆ. ಪುರಾತನ ದೇವಸ್ಥಾನ ಜೀರ್ಣೋದ್ಧಾರ ಆಗದೆ ಹೆಂಚಿನ ಚಾವಣಿ ಒಳಗೆ ನೀರು ಬರುತ್ತಿದೆ. ಮೂಲ ವಾಸ್ತು ಸ್ವರೂಪ ಉಳಿಸಿಕೊಂಡು ಜೀರ್ಣೋದ್ಧಾರ ಮಾಡಬೇಕಾಗಿರುವುದರಿಂದ, ರಸ್ತೆ ವಿಸ್ತರಣೆ ಯಿಂದಾಗುವ ಸಮಸ್ಯೆಯಿಂದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬದಲಿ ಮಾರ್ಗ ಸೂಚನೆ: ಪೆರ್ಡೂರು ಮೇಲ್ಪಟ್ಟೆಯಿಂದ ದೇವಸ್ಥಾನದ ಎದುರು ಮಾರ್ಗವಾಗಿ ಪೆರ್ಡೂರು ಸಂಚಾರಿ ಆರೋಗ್ಯ ಘಟಕ ಸಮೀಪ ಸಂಪರ್ಕಿಸುವ ಪರ್ಯಾಯ ಮಾರ್ಗವನ್ನು ಸ್ಥಳೀಯರು ಪರಿಶೀಲಿಸಿ ಸೂಚನೆ ನೀಡಿದ್ದಾರೆ. ಈ ಮಾರ್ಗದಲ್ಲೂ ದೇವಸ್ಥಾನದ ಶೇಕಡ 80ರಷ್ಟು ಜಾಗ ರಸ್ತೆಗೆ ಹೋಗುತ್ತದೆ. ಆದರೆ ದೇವಸ್ಥಾನದ ವಾಸ್ತುವಿಗೆ, ದೇವಸ್ಥಾನಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈಗ ದೇವಸ್ಥಾನದ ರಥಬೀದಿ ಸುತ್ತ ಅನೇಕ ವರ್ಷಗಳಿಂದ ಅಂಗಡಿಗಳು ಇದ್ದು, ಪ್ರತಿ ವರ್ಷ ದೇವಸ್ಥಾನಕ್ಕೆ ನಿಗದಿತ ಮೊತ್ತ ಪಾವತಿ ಮಾಡುತ್ತಿದ್ದಾರೆ.
ವಾಸ್ತು ಉಳಿಸುವಲ್ಲಿ ಎಲ್ಲರೂ ಕೈಜೋಡಿಸಿ
ದೇವಸ್ಥಾನದ ವಾಸ್ತು ಮೂಲ ಸ್ವರೂಪ ಉಳಿಸುವಲ್ಲಿ ಪೆರ್ಡೂರಿನ ಭಕ್ತರು ಗ್ರಾಮಸ್ಥರೆಲ್ಲರೂ ಕೈಜೋಡಿಸಬೇಕು. ಹೈಕೋರ್ಟ್ ನ್ಯಾಯಾಧೀಶರು ಪುರಾತನ ದೇವಸ್ಥಾನದ ವಾಸ್ತು ಮೂಲ ಸ್ವರೂಪ ಉಳಿಸುವಲ್ಲಿ ದೇವಸ್ಥಾನದ ಪರ ಅಭಿಪ್ರಾಯ ವ್ಯಕ್ತಪಡಿಸಿರುವುದು ಭಕ್ತಾರಿಗೆ ಸ್ಥಳೀಯರಿಗೆ ಸಂತೋಷ ತಂದಿದೆ ಎಂದು ಸ್ಥಳೀಯರಾದ ರಂಜಿತ್ ಪ್ರಭು ತಿಳಿಸಿದರು.
- ಬೈಪಾಸ್ ಶೀಘ್ರ ಮಾಡಿ
ಪೆರ್ಡೂರು ದೇವಸ್ಥಾನ ಈ ಭಾಗದ ಪ್ರಮುಖ ಧಾರ್ಮಿಕ ಕೇಂದ್ರ. ಜಾತ್ರಾ ಮಹೋತ್ಸವ ಸಂದರ್ಭ ದೊಡ್ಡ ರಥ ಸೇರಿದಂತೆ ವರ್ಷದಲ್ಲಿ ಸುಮಾರು 16 ಬಾರಿ ರಥೋತ್ಸವದ ಸಂದರ್ಭದಲ್ಲಿ ರಥ ಸುತ್ತು ಬರುತ್ತದೆ. ಸಂಕ್ರಮಣ ಉತ್ಸವ ರಥೋತ್ಸವ ಕೃಷ್ಣಾಷ್ಟಮಿ ಗಣೇಶೋತ್ಸವ ಮೊದಲಾದ ಕಾರ್ಯಕ್ರಮಗಳಿಗೆ ಜಿಲ್ಲೆ ಹೊರಜಿಲ್ಲೆಗಳಿಂದ ಸಹಸ್ರಾರು ಜನರು ಸೇರುತ್ತಾರೆ. ಒಂದು ವೇಳೆ ದೇವಸ್ಥಾನಕ್ಕೆ ತಾಗಿಕೊಂಡೇ ಹೆದ್ದಾರಿ ಹಾದು ಹೋದರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಆಗುಂಬೆ ಘಾಟಿ ಅಗಲೀಕರಣವಾಗಿ ಘನ ವಾಹನಗಳ ಸಂಚಾರ ಆರಂಭವಾದರೆ ವಾಹನ ದಟ್ಟಣೆ ಹೆಚ್ಚಾಗಿ ಪೆರ್ಡೂರು ಪೇಟೆಯಲ್ಲಿ ಟ್ರಾಫಿಕ್ ಜಾಮ್ ಆಗಿ ಆ ಬಳಿಕ ಬೈಪಾಸ್ ನಿರ್ಮಾಣ ಮಾಡುವ ಬದಲು ಈಗಾಗಲೇ ಸ್ಥಳೀಯರು ಸೂಚಿಸಿದ ಮಾರ್ಗದಲ್ಲಿ ರಸ್ತೆ ನಿರ್ಮಾಣ ಮಾಡಿದರೆ ಮುಂದಾಗುವ ಸಮಸ್ಯೆಗೆ ಮುಕ್ತಿ ದೊರೆತಂತಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.