ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್‌: ನಾಲ್ವರ ಬಂಧನ

ಉದ್ಯಮಿ, ಅರ್ಚಕರನ್ನು ಬಲೆಗೆ ಬೀಳಿಸಿಕೊಂಡು ಹಣ ವಸೂಲಿ
Last Updated 25 ಜುಲೈ 2019, 19:49 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಹೆಬ್ರಿಯಲ್ಲಿ ಹನಿಟ್ರಾಪ್‌ ಪ್ರಕರಣ ಬಯಲಿಗೆ ಬಂದಿದ್ದು ಗುರುವಾರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಿರಣ್‌ ಅಲಿಯಾಸ್ ಶಶಾಂಕ್ ಶೆಟ್ಟಿ, ಮಂಜುನಾಥ್ ಹಾಗೂ ಇಬ್ಬರು ಮಹಿಳೆಯರು ಬಂಧಿತರು. ಆರೋಪಿಗಳಿಂದ ಒಂದು ಡಸ್ಟರ್ ಕಾರು, ಬೈಕ್‌, ₹ 26000 ನಗದು, ಮೊಬೈಲ್ ಕ್ಯಾಮೆರಾ ಅಳವಡಿಸಿದ್ದ ವ್ಯಾನಿಟಿ ಬ್ಯಾಕ್‌, 7 ಮೊಬೈಲ್‌, ಚಾಕು, ತಲವಾರು ವಶಕ್ಕೆ ಪಡೆಯಲಾಗಿದೆ.‌

ನಗರದ ಉದ್ಯಮಿಗಳು, ಜ್ಯೋತಿಷಿಗಳು ಹಾಗೂ ಅರ್ಚಕರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದ ತಂಡ ಮಹಿಳೆಯ ಮೈಮುಟ್ಟುವ ವಿಡಿಯೋವನ್ನು ಚಿತ್ರೀಕರಿಸಿ, ಬಳಿಕ ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಬಯಲಿಗೆ ಬಂದಿದ್ದು ಹೇಗೆ?

ಜುಲೈ 18ರಂದು ಹೆಬ್ರಿಯ ದೇವಸ್ಥಾನವೊಂದರ ಅರ್ಚಕನ ಬಳಿ ತೆರಳಿದ್ದ ಬಂಧಿತ ಮಹಿಳೆಯು ಜ್ಯೋತಿಷ್ಯ ಹೇಳುವಂತೆ ಬಲವಂತ ಮಾಡಿ ಸಲುಗೆ ಬೆಳೆಸಿಕೊಂಡಿದ್ದಳು. ಬಳಿಕ ಎದೆಯ ಭಾಗದಲ್ಲಿ ಸರ್ಪಸುತ್ತು ಆಗಿರಬಹುದು, ಮುಟ್ಟಿ ಪರೀಕ್ಷಿಸುವಂತೆ ಪ್ರಚೋದಿಸಿದ್ದಳು. ನಂತರ ವ್ಯಾನಿಟಿ ಬ್ಯಾಗ್‌ನಲ್ಲಿ ಅಳವಡಿಸಿದ್ದ ಕ್ಯಾಮೆರಾ ಬಳಸಿಕೊಂಡು ಮೈಮುಟ್ಟುವ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು.

ಬಳಿಕ ಜುಲೈ 19ರಂದು ಆರೋಪಿಗಳಾದ ಕಿರಣ್‌ ಹಾಗೂ ಮಂಜುನಾಥ್‌ ಅರ್ಚಕನಿಗೆ ವಿಡಿಯೋ ತೋರಿಸಿ ₹ 40 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೆದರಿದ ಅರ್ಚಕ ₹ 80,000 ಕೊಟ್ಟು ಕಳಿಸಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಹಿಂದೆಯೂ ಬ್ಲಾಕ್‌ಮೇಲ್‌:

ಆರೋಪಿಗಳು ಹಿಂದೆಯೂ ಹಲವು ಸಲ ಹನಿಟ್ರ್ಯಾಪ್‌ ಮಾಡಿರುವುದು ತನಿಖೆ ವೇಳೆ ಬಯಲಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ ವೈದ್ಯರೊಬ್ಬರಿಗೆ ಮೈಮುಟ್ಟಿ ಪರೀಕ್ಷೆ ಮಾಡುವಂತೆ ಪ್ರೇರೇಪಿಸಿ ವಿಡಿಯೋ ಚಿತ್ರೀಕರಿಸಿ ಹಣ ವಸೂಲಿ ಮಾಡಲಾಗಿದೆ.

ಕುಂದಾಪುರ ತಾಲ್ಲೂಕಿನ ಜನ್ನಾಡಿಯಲ್ಲಿ ಉದ್ಯಮಿಯಿಂದ ₹ 1.50 ಲಕ್ಷ, ಹೊಸಂಗಡಿಯಲ್ಲಿ ಜ್ಯೋತಿಷಿಯಿಂದ ₹ 3 ಲಕ್ಷ ಪಡೆಯಲಾಗಿದೆ. ಈ ಹಣವನ್ನು ಆರೋಪಿಗಳು ಖರ್ಚು ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.

ಬಲೆಗೆ ಬಿದ್ದಿದ್ದು ಹೇಗೆ?

ಅರ್ಚಕನ ದೂರಿನ ಮೇರೆಗೆ ಕಾರ್ಕಳ ಸಿಪಿಐ ಹಾಲಮೂರ್ತಿ ರಾವ್‌ ಹಾಗೂ ಹೆಬ್ರಿ ಪಿಎಸ್‌ಐ ಮಹಾಬಲ ಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಮೊದಲಿಗೆ ಹೆಬ್ರಿ ತಾಲ್ಲೂಕಿನ ಬೀಳಿಂಜೆ ಗ್ರಾಮದಲ್ಲಿ ಮಹಿಳೆಯನ್ನು ಬಂಧಿಸಿದ್ದಾರೆ. ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಕಿರಣ್‌, ಮಂಜುನಾಥ್ ಹಾಗೂ ಮತ್ತೊಬ್ಬಳು ಮಹಿಳೆ ಜತೆ ಸೇರಿಕೊಂಡು ಹನಿಟ್ರ್ಯಾಪ್‌ ಮಾಡುತ್ತಿರುವುದು ಬಯಲಾಗಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಜೇಶ್ ಕೊಕ್ಕರ್ಣೆ, ಪ್ರವೀಣ್ ಶೆಟ್ಟಿ, ಸುರೇಂದ್ರ ಶೆಟ್ಟಿ, ದಿನೇಶ್‌, ದಾಮೋದರ್, ಉಲ್ಲಾಸ್‌, ಹಾಲೇಶಪ್ಪ, ಜ್ಯೋತಿ, ಜಯಲಕ್ಷ್ಮಿ, ಸತೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT