ಬುಧವಾರ, ಜನವರಿ 19, 2022
23 °C

ಉಡುಪಿ: ತೆಗ್ಗರ್ಸೆಯಲ್ಲಿ ಅಪರೂಪದ ವೀರಗಲ್ಲು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಬೈಂದೂರು ತಾಲ್ಲೂಕಿನ ತೆಗ್ಗರ್ಸೆಯಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದ ವಿಜಯನಗರ ಕಾಲದ ಅಪರೂಪದ ವೀರಗಲ್ಲನ್ನು ಶಿರ್ವದ ಎಂ.ಎಸ್.ಆರ್.ಎಸ್ ಕಾಲೇಜಿನ ಪುರಾತತ್ವ ವಿಭಾಗದ ವಿದ್ಯಾರ್ಥಿಗಳು ಪ್ರೊ.ಟಿ. ಮುರುಗೇಶಿ ಅವರ ಮಾರ್ಗದರ್ಶನ ಹಾಗೂ ತೆಗ್ಗರ್ಸೆ ಟಿ. ನಾರಾಯಣ ಹೆಗ್ಡೆ ಕುಟುಂಬದವರ ಸಹಕಾರದೊಂದಿಗೆ ಹೊರತೆಗೆದು ಸಂಶೋಧಿಸಿದ್ದಾರೆ.

5 ಅಡಿ ಎತ್ತರದ ವೀರಗಲ್ಲು ಆಯತಾಕಾರದಲ್ಲಿದ್ದು ನಾಲ್ಕು ಚಿತ್ರಪಟ್ಟಿಕೆಗಳನ್ನು ಒಳಗೊಂಡಿದೆ. ಕೆಳಗಿನ ಪಟ್ಟಿಕೆಯಲ್ಲಿ ಇಬ್ಬರು ವೀರರು ಕೈಯಲ್ಲಿ ಖಡ್ಗ ಮತ್ತು ಗುರಾಣಿಗಳನ್ನು ಹಿಡಿದು ಎದುರು ಬದುರಾಗಿ ನಿಂತಿದ್ದಾರೆ. ಹಿಂದೆ ಇಬ್ಬರು ಸೇವಕರು ನಿಂತಿರುವಂತೆ ಚಿತ್ರಿಸಲಾಗಿದೆ. ಎರಡು ಪಟ್ಟಿಕೆಗಳಲ್ಲಿಯೂ ಚಿತ್ರಗಳು ಪುನರಾವರ್ತನೆಯಾಗಿವೆ.

ಮೊದಲ ಚಿತ್ರಪಟ್ಟಿಕೆಯ ಮಧ್ಯದಲ್ಲಿ ಶಿವಲಿಂಗ, ಎಡಬದಿಯಲ್ಲಿ ಕುಳಿತ ಭಂಗಿಯಲ್ಲಿರುವ ನಂದಿ ಮತ್ತು ಬಲಬದಿಯಲ್ಲಿ ನಿಂತಿರುವ ವ್ಯಕ್ತಿಯ ಚಿತ್ರ ಇದೆ. ಮಧ್ಯದಲ್ಲಿ ಸಿಂಹ ಲಾಂಛನವಿದೆ. ಪ್ರತಿ ಚಿತ್ರಪಟ್ಟಿಕೆಯನ್ನು ಅಡ್ಡ ಪಟ್ಟಿಕೆಗಳ ಮೂಲಕ ಪ್ರತ್ಯೇಕಿಸಲಾಗಿದೆ. ಶಿವಲಿಂಗದ ಚಿತ್ರಪಟ್ಟಿಕೆಯ ಕೆಳಗಿನ ಅಡ್ಡಪಟ್ಟಿಯ ಮೇಲೆ ಎರಡು ಸಾಲಿನಲ್ಲಿ ಬರೆದ ಶಾಸನವಿದ್ದು, ಕೆಲವು ಅಕ್ಷರಗಳನ್ನು ಗುರುತಿಸಲು ಸಾದ್ಯವಾಗಿದೆ. ಅ, ಸ, ಗ, ತ, ಅಕ್ಷರಗಳು ಸ್ಪಷ್ಟವಾಗಿ ವಿಜಯನಗರದ ಶೈಲಿಯಲ್ಲಿದ್ದು, ವಿಜಯನಗರ ಕಾಲದ ಶಾಸನವೆಂದು ನಿರ್ಧರಿಸಬಹುದಾಗಿದೆ.

ವೀರಗಲ್ಲಿನ ಮಹತ್ವ: ವೀರಗಲ್ಲಿನ ನಾಲ್ಕು ಚಿತ್ರಪಟ್ಟಿಕೆಗಳಲ್ಲಿ ಮರಣ ಹೊಂದಿದ ವೀರರ ತಲೆ ದಿರಿಸು ಮತ್ತು ಮುಖದ ಭಾವಗಳನ್ನು ಚಿತ್ರಿಸಲಾಗಿದೆ.  ಎಡಭಾಗದಲ್ಲಿರುವ ವೀರರ ತಲೆದಿರಿಸು ಮತ್ತು ಮುಖಭಾವಗಳು ಮೂರು ಚಿತ್ರಪಟ್ಟಿಕೆಗಳಲ್ಲಿ ಭಿನ್ನ ಭಿನ್ನವಾಗಿವೆ. ಇದರಿಂದ, ವೀರರು ಖಡ್ಗ ಯುದ್ದದಲ್ಲಿ ಸೆಣೆಸಿ ಮರಣ ಹೊಂದಿದ್ದಾರೆ ಎನ್ನುವುದು ಸ್ಫಷ್ಟವಾಗುತ್ತದೆ.

ವೀರಗಲ್ಲು ಪತ್ತೆಗೆ ವಿದ್ಯಾರ್ಥಿಗಳಾದ ಗಣೇಶ್, ಶ್ರೇಯಸ್ ಮತ್ತು ಗೌತಮ್ ಶ್ರಮಿಸಿದ್ದಾರೆ ಎಂದು ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು