ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ: ಕುದುರೆ ಸವಾರಿಯಲ್ಲಿ ಜಾಗೃತಿ ಯಾತ್ರೆ

ಕೇರಳದ ಮಲಪ್ಪುರಂನಿಂದ ಕಾಶ್ಮೀರಕ್ಕೆ ಪಯಣ
Last Updated 26 ನವೆಂಬರ್ 2022, 4:58 IST
ಅಕ್ಷರ ಗಾತ್ರ

ಕುಂದಾಪುರ: ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಅನಿಯಮಿತ ಬಳಕೆ, ಸಾಮಾಜಿಕ ಜಾಲತಾಣಗಳ ಪ್ರಚೋದನಾತ್ಮಕ ಸಂಗತಿಗಳು, ಮರೆಯಾಗುತ್ತಿರುವ ಕೂಡು ಕುಟುಂಬ ಕಲ್ಪನೆಗಳು, ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಖಿನ್ನತೆ, ಆತ್ಮಹತ್ಯೆಯ ಕುರಿತು ಅರಿವು ಮೂಡಿಸಲು ಕೇರಳದ ಮಲಪ್ಪುರಂ ಜಿಲ್ಲೆಯಿಂದ ಕಾಶ್ಮೀರಕ್ಕೆ ಇಬ್ಬರು ಯುವಕರು ಕುದುರೆ ಸವಾರಿಯ ಮೂಲಕ ಜಾಗೃತಿ ಯಾತ್ರೆ ಮಾಡುತ್ತಿದ್ದಾರೆ.

ಒಂದು ತಿಂಗಳ ಹಿಂದೆ ಮಲಪ್ಪುರಂ ಜಿಲ್ಲೆ ಮಂಜರಿಯಿಂದ ಕುದುರೆ ಸವಾರಿ ಆರಂಭಿಸಿದ ಸುಹೇಲ್ ಹಾಗೂ ಹೈದರ್ ಮೀನುಗಾರಿಕಾ ವೃತ್ತಿಯಲ್ಲಿರುವ ಯುವಕರು. ಬಿ.ಎ ಪದವೀಧರರಾಗಿರುವ ಇಬ್ಬರಿಗೂ, ಯುವ ಸಮುದಾಯ ಸಣ್ಣ ಸಣ್ಣ ಕಾರಣಗಳಿಗಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರಕ್ಕೆ ಮುಂದಾಗುತ್ತಿರುವ ಸಂಗತಿ ಕಾಡಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ತಮ್ಮದೇ ಕೊಡುಗೆ ನೀಡುವ ನಿಟ್ಟಿನಲ್ಲಿ, ‘ಸಾರಾ’ ಮತ್ತು ‘ಅಬ್ಬು’ ಕುದುರೆಗಳ ಸವಾರಿ ಮೂಲಕ ಜಾಗೃತಿ ಮೂಡಿಸುತ್ತಿರುವ ಇವರು ಪಟ್ಟಣಕ್ಕೆ ಭೇಟಿ ನೀಡಿದ್ದಾರೆ.

ಬೆಳಿಗ್ಗೆ 4 ರಿಂದ 10ರವರೆಗೆ ಹಾಗೂ ಸಂಜೆ 5ರಿಂದ 10ಗಂಟೆವರೆಗೆ ಸಂಚಾರ ಮಾಡುವ ಕುದುರೆಗಳು, ದಿನಕ್ಕೆ 15ರಿಂದ 40 ಕಿ.ಮೀ ದೂರವನ್ನು ಕ್ರಮಿಸುತ್ತವೆ. ದಾರಿಯಲ್ಲಿ ಸಿಗುವ ಹುಲ್ಲು ಹಾಗೂ ಸ್ಥಳೀಯರು ನೀಡುವ ಆಹಾರಗಳು ಕುದುರೆಗಳ ಹೊಟ್ಟೆಯನ್ನು ತುಂಬಿಸುತ್ತವೆ.

ವಿದ್ಯಾರ್ಥಿಗಳ ಭೇಟಿ: ಪ್ರಯಾಣ ಹೋಗುವ ದಾರಿಯಲ್ಲಿ ಸಿಗುವ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಯುವಕರು, ಖಿನ್ನತೆ ದೂರ ಮಾಡುವ ಮಾರ್ಗೋಪಾಯಗಳನ್ನು ತಿಳಿಸಿ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಕ್ರೀಡೆ ಹಾಗೂ ವ್ಯಾಯಾಮದ ಅಗತ್ಯ ತಿಳಿಸಿ, ಆಸಕ್ತಿ ಇರುವ ಮಕ್ಕಳಿಗೆ ಕುದುರೆ ಸವಾರಿಯ ತರಬೇತಿ ನೀಡುತ್ತಾರೆ.

‘ನಾವು ಕುದುರೆ ಸವಾರಿ ಪ್ರಿಯರು. ಕುದುರೆ ಸವಾರಿ ಪರಿಸರ ಸ್ನೇಹಿ ಸಾಧನವಾಗಿದೆ. ಮಕ್ಕಳಲ್ಲಿ ಅತಿಯಾದ ಮೊಬೈಲ್ ಬಳಕೆಯಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳನ್ನು ನಿಯಂತ್ರಿಸಲು ಕುದುರೆ ಸವಾರಿಯಂತಹ ಮಾನಸಿಕ ದೃಢತೆಗೆ ಕಾರಣವಾಗುವ ಕ್ರೀಡೆ ಹಾಗೂ ವ್ಯಾಯಾಮಗಳಿಗೆ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕು ಎನ್ನುತ್ತಾರೆ ಸುಹೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT