ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಆರೋಗ್ಯ ಸೇವೆ ಬಂದ್‌: ಬಡ ರೋಗಿಗಳಿಗೆ ಸಿಗದ ಚಿಕಿತ್ಸೆ

3 ತಿಂಗಳ ಬಾಕಿ ವೇತನಕ್ಕಾಗಿ ಬಿಆರ್‌ಎಸ್‌ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಪ್ರತಿಭಟನೆ
Last Updated 21 ಫೆಬ್ರುವರಿ 2022, 13:02 IST
ಅಕ್ಷರ ಗಾತ್ರ

ಉಡುಪಿ: ಬಾಕಿ ವೇತನಕ್ಕಾಗಿ ಒತ್ತಾಯಿಸಿ ನಗರದ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿ ಸೋಮವಾರ ಹೊರರೋಗಿಗಳ ವಿಭಾಗ ಹಾಗೂ ಒಳರೋಗಿಗಳ ವಿಭಾಗದ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಯಲ್ಲಿ 153 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಮೂರು ತಿಂಗಳಿಂದ ವೇತನ ನೀಡಿಲ್ಲ. ಇಎಸ್‌ಐ, ಪಿಎಫ್ ವಂತಿಗೆಯನ್ನೂ ಕಟ್ಟಿಲ್ಲ. ಕಳೆದ 2 ವರ್ಷಗಳಿಂದ ವೇತನ ಸಮಸ್ಯೆಯಿದ್ದು, ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನ ಸಿಕ್ಕಿಲ್ಲ. ಮತ್ತೆ ಪ್ರಯೋಜನವಾಗಿಲ್ಲ ಎಂದು ಡಾ.ಸ್ವರ್ಣಲತಾ ಅಸಮಾಧಾನ ವ್ಯಕ್ತಪಡಿಸಿದರು.

35 ಕಿ.ಮೀ ದೂರದಿಂದ ಬಿ.ಆರ್.ಎಸ್‌ ಆಸ್ಪತ್ರೆಗೆ ಬಂದಿದ್ದೇವೆ. ಆದರೆ, ಆಸ್ಪತ್ರೆಯಲ್ಲಿ ಯಾವುದೇ ಆರೋಗ್ಯ ಸೇವೆ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗೆ ಬರುವುದು ಬಡವರು ಹಾಗೂ ಮಧ್ಯಮ ವರ್ಗದವರಾಗಿದ್ದು, ಆರೋಗ್ಯ ಸೇವೆಯೇ ನಿಂತು ಹೋದರೆ ಪರಿಸ್ಥಿತಿ ಗಂಭೀರವಾಗಲಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕು ಎಂದು ನಡೂರಿನ ಅಶೋಕ್ ಕುಲಾಲ್‌ ಒತ್ತಾಯಿಸಿದರು.

ಹೆರಿಗೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಲು ಬಂದಿದ್ದೇನೆ. ಮುಷ್ಕರದ ಕಾರಣ ನೀಡಿ ಸಿಬ್ಬಂದಿ ಚಿಕಿತ್ಸೆ ನೀಡುತ್ತಿಲ್ಲ. ಮಕ್ಕಳನ್ನೂ ಜತೆಯಲ್ಲಿ ಕರೆತಂದಿದ್ದೇನೆ. ಏನು ಮಾಡುವುದು ತೋಚುತ್ತಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗುವಷ್ಟು ಸ್ಥಿತಿವಂತರಲ್ಲ ಎಂದು ಗರ್ಭಿಣಿ ರೂಪ ಅಳಲು ತೋಡಿಕೊಂಡರು.

ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್ ಮಾತನಾಡಿ, ಬಿ.ಆರ್‌. ಶೆಟ್ಟಿ ಆಸ್ಪತ್ರೆಯಲ್ಲಿ ಹಲವು ತಿಂಗಳುಗಳಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಜನಪ್ರತಿನಿಧಿಗಳು ಕೂಡಲೇ ಸಮಸ್ಯೆ ಬಗೆಹರಿಸಬೇಕು. ಮೂರು ದಿನದೊಳಗೆ ಸಿಬ್ಬಂದಿಗೆ ವೇತನ ನೀಡದಿದ್ದರೆ ಆಸ್ಪತ್ರೆ ಎದುರು ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಹಲವು ಬಾರಿ ಪ್ರತಿಭಟನೆ:

ಆಸ್ಪತ್ರೆಯಲ್ಲಿ ಕಳೆದ ಎರಡು ವರ್ಷಗಳಿಂದಲೂ ವೇತನ ಪಾವತಿ ಸಮಸ್ಯೆ ಇದ್ದು, ಸಿಬ್ಬಂದಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಕಳೆದ ಆಗಸ್ಟ್‌ನಲ್ಲಿ ಸಿಬ್ಬಂದಿ ಪ್ರತಿಭಟನೆಗಿಳಿದಾಗ ಬಾಕಿ ವೇತನ ಪಾವತಿಗೆ ಸುವರ್ಣ ಆರೋಗ್ಯ ಟ್ರಸ್ಟ್‌ನಿಂದ ₹ 50 ಲಕ್ಷ ನೀಡಲಾಗಿತ್ತು. ಇದೀಗ ಮತ್ತೆ ಸಮಸ್ಯೆ ಸೃಷ್ಟಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT