ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಹೆಚ್ಚು ಬಾರಿ ಗೆಲುವು ದಾಖಲಿಸಿದವರು

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ವಿಜಯಯಾತ್ರೆ ಇತಿಹಾಸ
Last Updated 5 ಏಪ್ರಿಲ್ 2018, 12:02 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯ ಇತಿಹಾಸದಲ್ಲಿ ಇದುವರೆಗೂ ಸೊರಬದ ಎಸ್‌. ಬಂಗಾರಪ್ಪ ಹಾಗೂ ಶಿಕಾರಿಪುರದ ಬಿ.ಎಸ್. ಯಡಿಯೂರಪ್ಪ ಅತಿ ಹೆಚ್ಚು ಬಾರಿ (ಏಳು ಬಾರಿ) ಶಾಸಕರಾಗಿ ಆಯ್ಕೆಯಾದ ರಾಜಕಾರಣಿಗಳು.ದಿವಂಗತ ಎಸ್‌. ಬಂಗಾರಪ್ಪ ಅವರು ಮೊದಲ ಬಾರಿ ಸೊರಬ ವಿಧಾನಸಭಾ ಕ್ಷೇತ್ರದಿಂದ 1967ರಲ್ಲಿ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲೇ ವಿಜಯಮಾಲೆ ಧರಿಸಿದ್ದರು. ನಂತರ 1972, 78, 83, 85, 89, 94ರಲ್ಲಿ ಸತತ ಗೆಲುವು ಸಾಧಿಸುವ ಮೂಲಕ ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದರು. ಸತತ ಏಳು ಬಾರಿ ನಿರಂತರ ಗೆಲವು ಪಡೆದ ಜಿಲ್ಲೆಯ ಏಕೈಕ ರಾಜಕಾರಣಿ ಅವರೊಬ್ಬರೇ.ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಬಿ.ಎಸ್. ಯಡಿಯೂರಪ್ಪ ಅವರು ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಮಧ್ಯೆ ಒಂದು ಬಾರಿ ಸೋಲು ಅನುಭವಿಸಿದ್ದರು. 1983ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು, ನಂತರ 1985, 1989, 1994ರ ಚುನಾವಣೆಯಲ್ಲಿ ಸತತವಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಕಾಂಗ್ರೆಸ್‌ನ ಮಹಾಲಿಂಗಪ್ಪ ಅವರು ಯಡಿಯೂರಪ್ಪ ಗೆಲುವಿನ ಓಟಕ್ಕೆ ತಡೆ ಹಾಕಿದ್ದರು. ಮತ್ತೆ 2004, 2008 ಹಾಗೂ 2013ರ ಚುನಾವಣೆಯಲ್ಲಿ ಮತ್ತೆ ಗೆಲುವಿನ ಓಟ ಮುಂದುವರಿಸಿದ್ದರು.

6 ಬಾರಿ ಶಾಸಕರಾದವರು: ಶಿವಮೊಗ್ಗ ಗ್ರಾಮಾಂತರ (ಹಿಂದಿನ ಹೊಳೆಹೊನ್ನೂರು ಸೇರಿ) ಕ್ಷೇತ್ರದಲ್ಲಿ ಐದು ಬಾರಿ ಹಾಗೂ ಶಿಕಾರಿಪುರದಲ್ಲಿ ಒಂದು ಬಾರಿ ಗೆಲುವು ದಾಖಲಿಸಿದವರು ಜಿ. ಬಸವಣ್ಯಪ್ಪ. 1967ರಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದ ಅವರು ನಂತರ ಮೀಸಲಾತಿ ಕಾರಣಕ್ಕಾಗಿ ಹೊಳೆಹೊನ್ನೂರು ಕ್ಷೇತ್ರಕ್ಕೆ ವಲಸೆ ಬಂದಿದ್ದರು. 1978, 1983, 1985ರಲ್ಲಿ ಸತತ ಮೂರು ಗೆಲುವು ಪಡೆದರು. 1989, 1999ರಲ್ಲಿ ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದು ಕಾಂಗ್ರೆಸ್‌ನ →ಕರಿಯಣ್ಣ. 1994 ಹಾಗೂ 2004ರಲ್ಲಿ ಮತ್ತೆ ಎರಡು ಬಾರಿ ಬಸವಣ್ಯಪ್ಪ ವಿಜಯ ಮಾಲೆ ಧರಿಸಿದ್ದರು. ಅಲ್ಲಿಗೆ ಅವರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಂದ →ಶಾಸಕರಾಗಿ ಆಯ್ಕೆ ಆಗಿದ್ದು ಒಟ್ಟು ಆರು ಬಾರಿ.

ಐದು ಬಾರಿ ಶಾಸಕರಾದವರು: ಸಾಗರ ವಿಧಾನಸಭಾ ಕ್ಷೇತ್ರದ ಕಾಗೋಡು ತಿಮ್ಮಪ್ಪ ಅವರು 1972ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಮತ್ತೆ ಅವರು ಗೆಲುವು ಕಂಡಿದ್ದು 1989ರಲ್ಲಿ. ಅಲ್ಲಿಂದ 1994, 1999ರಲ್ಲಿ ಸತತ ಮೂರು ಅವಧಿ ಗೆಲುವು ದಾಖಲಿಸಿದ್ದರು. 2004, 2008ರಲ್ಲಿ ಅವರ ಗೆಲುವಿನ ಓಟಕ್ಕೆ ಬಿಜೆಪಿಯ ಬೇಳೂರು ಗೋಪಾಲಕೃಷ್ಣ ತಡೆ ಒಡ್ಡಿದ್ದರು. ಮತ್ತೆ ಕಾಗೋಡು 2013ರಲ್ಲಿ ಗೆಲುವು ಪಡೆದರು. ಇದುವರೆಗೂ ಅವರು ಒಟ್ಟು 5 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ.

ನಾಲ್ಕು ಬಾರಿ ಆಯ್ಕೆ: ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕೆ.ಎಸ್. ಈಶ್ವರಪ್ಪ ಅವರು 4 ಬಾರಿ ಶಾಸಕರಾಗಿ ಆಯ್ಕೆಯಾದವರು. 1989ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು 1994ರಲ್ಲೂ ಗೆಲುವು ದಾಖಲಿಸಿದ್ದರು. 1999ರಲ್ಲಿ ಅವರನ್ನು ಕಾಂಗ್ರೆಸ್‌ನ ಎಚ್‌.ಎಂ. ಚಂದ್ರಶೇಖರಪ್ಪ ಮಣಿಸಿದ್ದರು. ಮತ್ತೆ 2004, 2008ರಲ್ಲಿ ಈಶ್ವರಪ್ಪ ಅವರು ವಿಜಯಮಾಲೆ ಧರಿಸಿದ್ದರು. 2013ರಲ್ಲಿ ಕಾಂಗ್ರೆಸ್‌ನ ಕೆ.ಬಿ. ಪ್ರಸನ್ನಕುಮಾರ್ ಅವರಿಂದ ಸೋಲು ಅನುಭವಿಸಿದ್ದರು.

ಮೂರು ಬಾರಿ ಗೆಲುವು ಕಂಡವರು: ತೀರ್ಥಹಳ್ಳಿಯ ಆರಗ ಜ್ಞಾನೇಂದ್ರ, ಸೊರಬದ ಕುಮಾರ್‌ ಬಂಗಾರಪ್ಪ, ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿ, ಶಿವಮೊಗ್ಗ, ಸಾಗರದಿಂದ ಕೆ.ಎಚ್. ಶ್ರೀನಿವಾಸ್ ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು.ಆರಗ ಜ್ಞಾನೇಂದ್ರ ಅವರು 1994, 1999, 2004ರಲ್ಲಿ ಸತತ ಮೂರು ಬಾರಿ ಗೆಲುವು ಕಂಡಿದ್ದರು. ಕುಮಾರ್ ಬಂಗಾರಪ್ಪ ಅವರು 1996 (ಉಪ ಚುನಾವಣೆ), 1999 ಹಾಗೂ 2004ರಲ್ಲಿ ವಿಜಯಮಾಲೆ ಧರಿಸಿದ್ದರು. ಎಂ.ಜೆ. ಅಪ್ಪಾಜಿ 1994, 1999 ಹಾಗೂ 2013ರಲ್ಲಿ ಶಾಸಕರಾಗಿದ್ದರು. ಕೆ.ಎಚ್. ಶ್ರೀನಿವಾಸ್ ಅವರು 1967ರಲ್ಲಿ ಸಾಗರದಿಂದ, 1978 ಹಾಗೂ 1985ರಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಇವರು ಹ್ಯಾಟ್ರಿಕ್‌ ಶಾಸಕರು

ಜಿಲ್ಲೆಯಲ್ಲಿ ಸತತ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಹೀರೊ ಎಂದು ಖ್ಯಾತಿತರಾದವರು ಆರು ಜನ.ಎಸ್‌. ಬಂಗಾರಪ್ಪ, ಬಿ.ಎಸ್‌. ಯಡಿಯೂರಪ್ಪ, ಜಿ. ಬಸವಣ್ಯಪ್ಪ, ಕಾಗೋಡು ತಿಮ್ಮಪ್ಪ, ಆರಗ ಜ್ಞಾನೇಂದ್ರ ಹಾಗೂ ಕುಮಾರ್ ಬಂಗಾರಪ್ಪ ಸತತ ಮೂರು ಅವಧಿ ಶಾಸಕರಾಗಿ ಆಯ್ಕೆಯಾಗಿದ್ದರು.ಜಿಲ್ಲೆಯ ಇತಿಹಾಸದಲ್ಲಿ ಡಬಲ್‌ ಹ್ಯಾಟ್ರಿಕ್‌ ಬಾರಿಸಿದವರು ಬಂಗಾರಪ್ಪ ಮಾತ್ರ. ಸೊರಬದಲ್ಲಿ ಅಪ್ಪ, ಮಗ (ಎಸ್‌. ಬಂಗಾರಪ್ಪ, ಕುಮಾರ್ ಬಂಗಾರಪ್ಪ) ಇಬ್ಬರೂ ಹ್ಯಾಟ್ರಿಕ್‌ ಗೆಲುವು ಪಡೆದಿರುವುದು ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT