ಬುಧವಾರ, ಆಗಸ್ಟ್ 4, 2021
20 °C
ಸೋಂಕು ತಡೆಗೆ ಜವಾಬ್ದಾರಿ ಅರಿತು ಕೆಲಸ ಮಾಡಿ: ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚನೆ

ಹೆಚ್ಚು ಸೋಂಕು ಪತ್ತೆಯಾದರೆ ಗ್ರಾಮ ಸೀಲ್‌ಡೌನ್‌: ಉಡುಪಿ ಜಿಲ್ಲಾಧಿಕಾರಿ ಜಗದೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕಂಟೈನ್‌ಮೆಂಟ್ ವಲಯದ ನಿಯಮ ಬದಲಾಗಿದ್ದು, ಸ್ಥಳೀಯವಾಗಿ 2-3 ಪ್ರಕರಣ ಕಂಡುಬಂದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಮನೆಯ ಬದಲು ಇಡೀ ಗ್ರಾಮ ಸೀಲ್‌ಡೌನ್ ಮಾಡಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚು ಸೋಂಕು ಪತ್ತೆಯಾದ ಭಾಗದ ಸಾರ್ವಜನಿಕರನ್ನು ವ್ಯಾಪಕ ಪರೀಕ್ಷೆಗೊಳಪಡಿಸಬೇಕು. ಜಿಲ್ಲೆಯಲ್ಲಿ ಪ್ರತಿದಿನ 650 ಸ್ಯಾಂಪಲ್ ಪರೀಕ್ಷೆ ನಡೆಸಬೇಕು ಎಂಬ ನಿರ್ದೇಶನವಿದ್ದು, ಒಂದೇ ಬಾಗದಲ್ಲಿ ಮಾದರಿ ಸಂಗ್ರಹಿಸದೆ ಬೇರೆ ಬೇರೆ ಕಡೆ ಸಂಗ್ರಹಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ 14 ತಂಡ ರಚಿಸಿ ಜವಾಬ್ದಾರಿ ನೀಡಲಾಗಿದ್ದು, ಲೋಪಗಳಾಗದಂತೆ ಕಾರ್ಯ ನಿರ್ವಹಿಸಿ. ಐಸಿಎಂಆರ್ ಪೋರ್ಟಲ್‌ನಲ್ಲಿ ಕೊರೊನಾ ಪಾಸಿಟಿವ್ ವರದಿ ಬಂದ ಕೂಡಲೇ ಸೋಂಕಿತನ ನಿವಾಸದ ಬಳಿಯ ಆರೋಗ್ಯ ಕೇಂದ್ರದ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸಬೇಕು. ತುರ್ತು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಯ ಆಂಬುಲೆನ್ಸ್ ಬಳಸಿಕೊಳ್ಳಬಹುದು ಎಂದರು.

ಜಿಲ್ಲೆಯಲ್ಲಿ ಬೆಡ್ ಮಾನಿಟರಿಂಗ್ ಸಿಸ್ಟಂ ಸಿದ್ಧವಾಗಿದ್ದು, ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್‌ಗಳು ಖಾಲಿ ಇವೆ, ಸಮೀಪದ ಆಸ್ಪತ್ರೆ ಎಲ್ಲಿದೆ, ಆಸ್ಪತ್ರೆಯಲ್ಲಿ ಯಾವ ಸೌಲಭ್ಯಗಳಿವೆ ಎಂಬ ಮಾಹಿತಿ ಸಿಗಲಿದೆ. ಇದರಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪಲಿದೆ. ಜಿಲ್ಲೆಯಲ್ಲಿ 2,400 ಬೆಡ್‌ಗಳು ಕೋವಿಡ್‌ ಸೋಂಕಿತರಿಗೆ ಮೀಸಲಿದ್ದು, ಇನ್ನೊಂದು ಸುಸಜ್ಜಿತ ಕೋವಿಡ್-19 ಆಸ್ಪತ್ರೆ ಸಿದ್ಧವಾಗಿಟ್ಟುಕೊಳ್ಳಿ. ನರ್ಸ್‌ಗಳಿಗೆ ಐಸಿಯು ಕಾರ್ಯ ನಿರ್ವಹಣೆ ಕುರಿತು ಕೆಎಂಸಿಯಲ್ಲಿ ವಿಶೇಷ ತರಬೇತಿ ಕೊಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಸೋಂಕಿತನ ಸಂಪರ್ಕ ಪತ್ತೆ ತ್ವರಿತವಾಗಿ ನಡೆಯಬೇಕು. ಸೋಂಕಿತನ ಮೊಬೈಲ್‌ ಸಿಡಿಆರ್ ಮೂಲಕ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಪಡೆಯಬೇಕು. ಇದಕ್ಕಾಗಿ ಪ್ರತಿ ತಾಲ್ಲೂಕಿನಲ್ಲಿ 50 ಸಿಬ್ಬಂದಿಯನ್ನು ನಿಯೋಜಿಸಿ, ತರಬೇತಿ ಕೊಡಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಶೀತ, ಕೆಮ್ಮು, ನಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವಿವರ ನೀಡದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳ ಲೈಸೆನ್ಸ್ ರದ್ದುಮಾಡಲಾಗುವುದು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಪ್ರತಿದಿನ ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿನೀಡಿ, ಶೀತ, ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವರದಿ ನೀಡಬೇಕು. ನಿರ್ಲಕ್ಷ್ಯದಿಂದ ಸೋಂಕಿತ ವ್ಯಕ್ತಿ ಮರಣ ಹೊಂದಿದರೆ ಸಿಬ್ಬಂದಿ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು