ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆದ್ದರೆ ಇತಿಹಾಸ, ಸೋತರೆ ಸೋಲಿನ ಸರಣಿ

ಉಡುಪಿ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಒಮ್ಮೆಯೂ ಗೆದ್ದಿಲ್ಲ
Last Updated 2 ಮೇ 2019, 16:22 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಜಯಗಳಿಸಿಲ್ಲ. ಈ ಬಾರಿ ಗೆದ್ದರೆ ಇತಿಹಾಸ ನಿರ್ಮಾಣವಾಗಲಿದೆ. ಹಾಗೆಯೇ ಕಾಂಗ್ರೆಸ್‌ ಅಭ್ಯರ್ಥಿ ಕಣದಲ್ಲಿ ಇಲ್ಲದಿರುವುದು ಈ ಬಾರಿಯ ಚುನಾವಣಾ ವಿಶೇಷ.

ಕ್ಷೇತ್ರ ಪುನರ್‌ವಿಂಗಡಣೆಗೂ ಮುನ್ನ ಉಡುಪಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಗಳನ್ನು ವಿಶ್ಲೇಷಿಸಿದರೆ, 1989ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ಸಂಜೀವಪ್ಪ ಸ್ಪರ್ಧಿಸಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಆಸ್ಕರ್ ಫರ್ನಾಂಡೀಸ್ (3,13,849) ವಿರುದ್ಧ ಜನತಾದಳದ ಸಂಜೀವಪ್ಪ (1,61,656) ಸೋಲು ಕಂಡಿದ್ದರು.

ಬಳಿಕ 1991ರ ಚುನಾವಣೆಯಲ್ಲಿ ಜನತಾದಳದಿಂದ ಯು.ಆರ್.ಸಭಾಪತಿ 1,04,071 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಕುಸಿದರು. 1996ರ ಚುನಾವಣೆಯಲ್ಲೂ ಜನತಾದಳದ ವಸಂತ ಬಂಗೇರ 1,47,293 ಮತ ಪಡೆದು ಸೋಲು ಅನುಭವಿಸಿದ್ದರು. ಆದರೆ, ಕ್ಷೇತ್ರದ ಇತಿಹಾಸದಲ್ಲೇ ಜನತಾದಳ ಅಭ್ಯರ್ಥಿ ಪಡೆದ ಅತ್ಯಧಿಕ ಮತಗಳು ಇದಾಗಿತ್ತು.

1998ರ ಚುನಾವಣೆಯಲ್ಲಿ ಸದ್ಯ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಮಟ್ಟಾರು ರತ್ನಾಕರ ಹೆಗಡೆ ಜನತಾದಳದ ಹುರಿಯಾಳಾಗಿದ್ದರು. ಬಿಜೆಪಿಯ ಐಎಂ ಜಯರಾಮಶೆಟ್ಟಿ (3,41,466) ಅವರ ವಿರುದ್ಧ ಮಟ್ಟಾರು (29,238) ಸೋತು ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಜನತಾದಳ ಜಾತ್ಯತೀತ ಜನತಾದಳವಾಗಿ ಅಸ್ತಿತ್ವಕ್ಕೆ ಬಂದ ನಂತರ1999ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಶ್ರೀನಿವಾಸ (11,816) ಹೀನಾಯವಾಗಿ ಸೋತರು. 2004ರಲ್ಲಿ ತಾರಾನಾಥ್ ಶೆಟ್ಟಿ (45574), 2014ರಲ್ಲಿ ಧನಂಜಯ ಕುಮಾರ್ (14895) ಕೂಡ ಪರಾಭವಗೊಂಡರು. 2009ರಲ್ಲಿ ಜೆಡಿಎಸ್‌ ಅಭ್ಯರ್ಥಿಯೇ ಇರಲಿಲ್ಲ.

ಹೀಗೆ ಉಡುಪಿಯಲ್ಲಿ ನಡೆದ ಎಲ್ಲ ಲೋಕಸಭಾ ಚುನಾವಣೆಗಳಲ್ಲೂ ಜೆಡಿಎಸ್‌ ಕಳಪೆ ಪ್ರದರ್ಶನ ನೀಡಿದೆ. ಆದರೆ, ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿ ಕಣಕ್ಕಿಳಿದಿದೆ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಸ್ಪರ್ಧಿಸಿದ್ದಾರೆ. ಮತ್ತೊಂದೆಡೆ ಹಾಲಿ ಸಂಸದೆ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎದುರಾಳಿಯಾಗಿದ್ದಾರೆ.

ಈ ಬಾರಿ ಜೆಡಿಎಸ್‌ ಗೆದ್ದು ಇತಿಹಾಸ ಸೃಷ್ಟಿಸಲಿದೆಯಾ ಅಥವಾ ಸೋಲಿನ ಸರಣಿ ಮುಂದುವರಿಸಲಿದೆಯಾ ಫಲಿತಾಂಶ ನಿರ್ಧರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT