ಕರೆ ಮಾಡಿದರೆ ಮನೆ ಮುಂದೆಯೇ ಆಟೊ ಹಾಜರ್‌

7
ಮಣಿಪಾಲದ ಆಟೋ ನಿಲ್ದಾಣಗಳಲ್ಲಿ ‘ಫೋನ್ ಇನ್’ ಆಟೊ ಸೌಲಭ್ಯ

ಕರೆ ಮಾಡಿದರೆ ಮನೆ ಮುಂದೆಯೇ ಆಟೊ ಹಾಜರ್‌

Published:
Updated:
Deccan Herald

ಉಡುಪಿ: ಮಣಿಪಾಲದಲ್ಲಿ ಆಟೋ ಹುಡುಕಿಕೊಂಡು ಆಟೋ ಸ್ಟಾಂಡ್‌ಗೆ ಹೋಗಬೇಕಂತಿಲ್ಲ. ಒಂದು ಕರೆ ಮಾಡಿದರೆ, ಕೆಲವೇ ಕ್ಷಣಗಳಲ್ಲಿ ನಿಮ್ಮ ಮನೆಯ ಮುಂದೆ ಆಟೋ ಸಿದ್ಧವಾಗಿ ನಿಂತಿರುತ್ತೆ. ಇಂಥದ್ದೊಂದು ಗ್ರಾಹಕ ಸ್ನೇಹಿ ಸೇವೆ ಮಣಿಪಾಲದ ಬಹುತೇಕ ಆಟೋ ಸ್ಟಾಂಡ್‌ಗಳಲ್ಲಿ ದೊರೆಯುತ್ತದೆ.

ಈ ಸೌಲಭ್ಯ ಪಡೆಯಲು ನೀವು ಹತ್ತಿರದ ಆಟೊ ಸ್ಟಾಂಡ್‌ಗೆ ಹೋಗಿ ಅಲ್ಲಿ ಅಳವಡಿಸಿರುವ ದೂರವಾಣಿ ಸಂಖ್ಯೆಯನ್ನು ಪಡೆದರೆ ಸಾಕು. ನೀವು ಕರೆದಾಗಲೆಲ್ಲ ಆಟೋ ನಿಮ್ಮ ಮನೆಯ ಮುಂದೆ ಹಾಜರಿರುತ್ತದೆ. ಆಟೋ ಸ್ಟಾಂಡ್‌ವರೆಗೂ ನಡೆಯುವ ಅವಶ್ಯಕತೆ ಇರುವುದಿಲ್ಲ. 

ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಿರುವ ವೃದ್ಧರು, ಹಾಸ್ಟೆಲ್‌ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು, ಪ್ರತಿನಿತ್ಯ ನಗರಕ್ಕೆ ಬರುವ ಸಾರ್ವಜನಿಕರಿಗೆ ಈ ‘ಫೋನ್‌ ಇನ್‌ ಆಟೊ’ ಸೇವೆ ಹೆಚ್ಚು ಅನುಕೂಲಕರವಾಗಿದೆ. ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ತೆರಳಲು, ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ಮಳೆ ಜೋರಾಗಿ ಬರುವಾಗ ಕಚೇರಿಗಳಿಗೆ ತೆರಳಲು ಈ ಸೌಲಭ್ಯ ಸೂಕ್ತ.

ಗ್ರಾಹಕರಿಂದ ‘ಫೋನ್‌ ಇನ್‌’ ಆಟೊ ಸೌಲಭ್ಯಕ್ಕೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಣಿಪಾಲದ 8ಕ್ಕೂ ಹೆಚ್ಚು ಆಟೊ ಸ್ಟಾಂಡ್‌ಗಳಲ್ಲಿ ದೂರವಾಣಿ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಹಕರು ಕರೆ ಮಾಡಿ ವಿಳಾಸ ತಿಳಿಸಿದರೆ, ಕೆಲವೇ ಕ್ಷಣಗಳಲ್ಲಿ ಅವರ ಮನೆಯ ಮುಂದೆ ಆಟೋ ಇರಲಿದೆ ಎನ್ನುತ್ತಾರೆ ಮಣಿಪಾಲ ಆಟೊ ಚಾಲಕರ ಹಾಗೂ ಮಾಲೀಕರ ಸಂಘದ ಕೋಶಾಧಿಕಾರಿ ಸತೀಶ್‌.

ಇಲ್ಲಿನ ಬಹುತೇಕ ಆಟೋ ಸ್ಟಾಂಡ್‌ಗಳು ದೂರವಾಣಿ ಸಂಪರ್ಕ ಹೊಂದಿದ್ದು, ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳು ಹಾಗೂ ಹಾಸ್ಟೆಲ್‌ಗಳಿಗೆ ನಂಬರ್‌ಗಳನ್ನು ನೀಡಲಾಗಿದೆ. ಕರೆಬಂದ ಕೂಡಲೇ ನಿಲ್ದಾಣದಿಂದಲೇ ಮೀಟರ್ ಚಾಲುಮಾಡಿಕೊಡಂಡು ತೆರಳುತ್ತೇವೆ. ಈ ಸೌಲಭ್ಯಕ್ಕೆ ಗ್ರಾಹಕರಿಂದ ಮೀಟರ್ ದರದ ಮೇಲೆ ₹ 5ರಿಂದ 10 ರೂಪಾಯಿ ಹೆಚ್ಚುವರಿ ಪಡೆಯುತ್ತೇವೆ ಎನ್ನುತ್ತಾರೆ ಅವರು.

ಮಣಿಪಾಲದಲ್ಲಿ ಅಪಾರ್ಟ್‌ಮೆಂಟ್‌ಗಳು ಹೆಚ್ಚು. ಮಕ್ಕಳಿಂದ ದೂರವಾಗಿರುವ ವೃದ್ಧರು ಅಪಾರ್ಟ್‌ಮೆಂಟ್‌ಗಳಲ್ಲೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಆಟೊಗಳು ಸಿಗುವುದಿಲ್ಲ. ಮುಖ್ಯರಸ್ತೆಗೆ ಬಂದು ಆಟೊ ಹಿಡಿಯಲು ವೃದ್ಧರಿಗೆ ಕಷ್ಟವಾಗುತ್ತದೆ. ಹಾಗಾಗಿ, ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎನ್ನುತ್ತಾರೆ ಆರ್.ಟಿ ಆಟೊ ಸ್ಟಾಂಡ್‌ನ ಚಾಲಕ ಗಣೇಶ್‌.

ಈ ಭಾಗದಲ್ಲಿ ಹಾಸ್ಟೆಲ್‌ಗಳ ಸಂಖ್ಯೆಯೂ ಹೆಚ್ಚಿದ್ದು, ದೇಶವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ವಾಸವಾಗಿದ್ದಾರೆ. ಕಾಲೇಜು, ಶಾಪಿಂಗ್‌ಗೆ ತೆರಳಲು ಹೆಚ್ಚಾಗಿ ಆಟೊಗಳನ್ನೇ ಅವಲಂಬಿಸಿದ್ದಾರೆ. ಈ ಫೋನ್‌ ಇನ್‌ ಸೌಲಭ್ಯ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ ಎನ್ನುತ್ತಾರೆ ಅವರು.

ಬಹುತೇಕ ಮನೆಗಳಲ್ಲಿ ಗಂಡ–ಹೆಂಡತಿ ಇಬ್ಬರೂ ದುಡಿಯುತ್ತಾರೆ. ಕೆಲವೊಮ್ಮೆ ಕೆಲಸದ ಒತ್ತಡದಿಂದಲೋ, ಅನ್ಯ ಕಾರಣಗಳಿಂದಲೋ ಮಕ್ಕಳನ್ನು ಶಾಲೆಗೆ ಬಿಡಲು ಹಾಗೂ ಕರೆತರಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭ ಆಟೋ ಸ್ಡಾಂಡ್‌ಗೆ ಫೋನ್ ಮಾಡಿದರೆ, ಸುರಕ್ಷಿತವಾಗಿ ಮಕ್ಕಳನ್ನು ಶಾಲೆ ಸೇರಿಸುತ್ತೇವೆ. ಮರಳಿ ಕರೆ ತರುತ್ತೇವೆ ಎನ್ನುತ್ತಾರೆ ಚಾಲಕ ರವೀಂದ್ರ ಶೆಟ್ಟಿಗಾರ್.

ವೃದ್ಧರನ್ನು ಮನೆಯಿಂದ ಆಸ್ಪತ್ರೆಗೆ ಕರೆ ತರುವುದು, ಅವರ ಮನೆಗೆ ಬೆಳಗಿನ ತಿಂಡಿ, ಮಧ್ಯಾಹ್ನ, ರಾತ್ರಿ ಊಟ ಸರಬರಾಜು ಮಾಡುವುದು, ಅಗತ್ಯ ವಸ್ತುಗಳನ್ನು ತಲುಪಿಸುವುದು ಹೀಗೆ ಗ್ರಾಹಕಸ್ನೇಹಿ ಕೆಲಸಗಳನ್ನು ಮಾಡುತ್ತೇವೆ ಎನ್ನುತ್ತಾರೆ ಅವರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !