ಒಂಬತ್ತೂವರೆ ತಿಂಗಳಲ್ಲಿ ಎಡವಿದ್ದೇನೆ: ಮುಖ್ಯಮಂತ್ರಿ ಕುಮಾರಸ್ವಾಮಿ ನೋವು

ಶುಕ್ರವಾರ, ಏಪ್ರಿಲ್ 26, 2019
35 °C

ಒಂಬತ್ತೂವರೆ ತಿಂಗಳಲ್ಲಿ ಎಡವಿದ್ದೇನೆ: ಮುಖ್ಯಮಂತ್ರಿ ಕುಮಾರಸ್ವಾಮಿ ನೋವು

Published:
Updated:
Prajavani

ಉಡುಪಿ: ‘ರಾಜ್ಯದಲ್ಲಿರುವ ಸಣ್ಣ–ಸಣ್ಣ ಸಮಾಜಗಳನ್ನು ಗುರುತಿಸುವಲ್ಲಿ ಎಡವಿದ್ದೇನೆ ಎಂಬ ನೋವು ಕಾಡುತ್ತಿದೆ. ಮುಂದೆ ತಿಂಗಳಲ್ಲಿ ಕನಿಷ್ಠ 10 ದಿನ ಪ್ರತಿಯೊಂದು ಜಿಲ್ಲೆಯಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘12 ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ್ದೆ. ಭಾನುವಾರ ಕಾರ್ಕಳದಲ್ಲಿ 28ಕ್ಕೂ ಹೆಚ್ಚು ಸಣ್ಣ–ಸಣ್ಣ ಸಮಾಜಗಳು ಮನವಿ ಸಲ್ಲಿಸಿದಾಗ, ಒಂಬತ್ತೂವರೆ ತಿಂಗಳಿನ ಆಡಳಿತದಲ್ಲಿ ಎಡವಿದ್ದೇನೆ ಎಂಬುದು ಅರಿವಾಯಿತು’ ಎಂದು ವಿಷಾದ ವ್ಯಕ್ತಪಡಿಸಿದರು.

ಸರ್ಕಾರವನ್ನು ಮುಗಿಸಲು ಬಿಜೆಪಿ ಹಲವು ಬಾರಿ ಪ್ರಯತ್ನಿಸಿದರೂ ಜನರ ಆಶೀರ್ವಾದದಿಂದ ಸಾಧ್ಯವಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಮೂಲಕ ಸರ್ಕಾರವನ್ನು ಬಲಪಡಿಸಬೇಕು. ಧರ್ಮ, ಜಾತಿ ರಾಜಕಾರಣ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಿದರೆ, ಬೆಂಗಳೂರು ನಗರಕ್ಕೆ ಸಮನಾಗಿ ಮಂಗಳೂರು ಹಾಗೂ ಉಡುಪಿಯನ್ನು ಬೆಳೆಸಬಹುದು ಎಂದರು.

‘ಸ್ವಾತಂತ್ರ್ಯ ನಂತರ ದೇಶ ಹಂತಹಂತವಾಗಿ ಅಭಿವೃದ್ಧಿ ಕಂಡಿದೆ. ನೆಹರೂ, ಇಂದಿರಾ ಗಾಂಧಿ, ಇದುವರೆಗಿನ ಪ್ರಧಾನಿಗಳ ಶ್ರಮದಿಂದ ದೇಶ ಪ್ರಗತಿ ಕಂಡಿದೆ. ಆದರೆ, ನರೇಂದ್ರ ಮೋದಿ ಅವರು ಹಿಂದಿನ ಸರ್ಕಾರದ ಸಾಧನೆಗಳನ್ನು ತಮ್ಮದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ, ಹಿರಿಯ ಮುಖಂಡ ಆಸ್ಕರ್ ಫರ್ನಾಂಡೀಸ್, ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ಮುಖಂಡರಾದ ವಿನಯಕ್ ಕುಮಾರ್ ಸೊರಕೆ, ಭೋಜೇಗೌಡ, ಫಾರೂಕ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕೊಡವೂರು, ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಯೋಗೀಶ್ ಶೆಟ್ಟಿ, ಎಂ.ಎ.ಗಫೂರ್ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !