ಬುಧವಾರ, ನವೆಂಬರ್ 13, 2019
28 °C
ಹೆಚ್ಚುತ್ತಿರುವ ಚಿನ್ಣಾಭರಣ ವಂಚನೆ: ವಾರದಲ್ಲಿ ನಾಲ್ಕು ಪ್ರಕರಣ ದಾಖಲು

ಉಡುಪಿಯಲ್ಲಿ ಕಳ್ಳರ ಆಟಾಟೋಪ: ಮಹಿಳೆಯರು, ವೃದ್ಧರೇ ಟಾರ್ಗೆಟ್‌

Published:
Updated:
Prajavani

ಉಡುಪಿ: ನಗರದಲ್ಲಿ ಮಾಂಗಲ್ಯ ಸರಗಳವು, ಚಿನ್ನಾಭರಣ ವಂಚನೆ ಪ್ರಕರಣಗಳು ಹೆಚ್ಚಿದ್ದು, ಸಾರ್ವಜನಿಕರು ಭಯಭೀತರಾಗಿದ್ದಾರೆ. ಮಹಿಳೆಯರು ಹಾಗೂ ವೃದ್ಧರನ್ನು ಗುರಿಯಾಗಿಸಿಕೊಂಡು ವಂಚಕರು ದಾಳಿ ನಡೆಸುತ್ತಿರುವುದು ಆತಂಕ ಸೃಷ್ಟಿಸಿದೆ.

ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂವರು ಮಹಿಳೆಯರ ಚಿನ್ನದ ಸರಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಜತೆಗೆ, ಹಿರಿಯ ನಾಗರಿಕರನ್ನು ವಂಚಿಸಿ ಚಿನ್ನಾಭರಣ ಕಳವು ಮಾಡಿದ 2 ಪ್ರಕರಣಗಳು ದಾಖಲಾಗಿವೆ.

ನೀರು ಕೇಳುವ ನೆಪದಲ್ಲಿ, ಪೊಲೀಸರ ಸೋಗಿನಲ್ಲಿ, ಹಣದ ಆಮಿಷವೊಡ್ಡಿ ವಂಚನೆ ಎಸಗಲಾಗುತ್ತಿದೆ. ಜನನಿಬಿಡ ಸ್ಥಳಗಳಲ್ಲೇ ಕೃತ್ಯಗಳು ನಡೆಯುತ್ತಿರುವುದು ನಾಗರಿಕರಲ್ಲಿ ಭಯಮೂಡಿಸಿದೆ.

ಅ.11ರಂದು ಕಾಪುವಿನ ಹೊಸಬೆಟ್ಟು ಬಸದಿ ಬಳಿ ಗೀತಾ ಸುಜನ್‌ ಕುಮಾರ್ ಹಿತ್ತಲಿನಲ್ಲಿ ತರಕಾರಿ ಕೊಯ್ಯುವಾಗ ಅಪರಿಚಿತ ವ್ಯಕ್ತಿ ಕುತ್ತಿಗೆಗೆ ಬಟ್ಟೆ ಬಿಗಿದು, ಮೂರೂವರೆ ಪವನ್‌ ಮಾಂಗಲ್ಯ ಸರ ಕಿತ್ತು ಓಡಿಹೋಗಿದ್ದಾನೆ.

ಹಾಗೆಯೇ ಅ.11ರಂದು ಹೆಬ್ರಿಯ ರಾಗಿಹಕ್ಲುವಿನಲ್ಲಿ ನೀರು ಕೇಳುವ ನೆಪದಲ್ಲಿ ಮನೆಗೆ ಬಂದ ಇಬ್ಬರು ಆಗುಂತಕರು ಗುಲಾಬಿ ಆಚಾರ್ಯ ಎಂಬುವರ ಕುತ್ತಿಗೆ ಬಿಗಿದು, ಎರಡೂವರೆ ಪವನ್‌ ತೂಕದ ಚಿನ್ನದ ಸರ ದೋಚಿದ್ದಾರೆ. 

ಅ.8ರಂದು ಇನ್ನಂಜೆ ಗ್ರಾಮದಲ್ಲಿ ದನಗಳಿಗೆ ಹುಲ್ಲು ತರಲು ಹೋಗುತ್ತಿದ್ದ ಶಾಂತಾ ಆಚಾರ್ಯ ಅವರ ಮೇಲೆ ದಾಳಿ ನಡೆಸಿದ ಸರಗಳ್ಳರು ಮೂರೂವರೆ ಪವನ್‌ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ಈಪ್ರಕರಣವನ್ನು ಮಾತ್ರ ಪೊಲೀಸರು ಬೇಧಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೂರೂ ಪ್ರಕರಣಗಳಲ್ಲಿ ಕಳ್ಳರು ವೃದ್ಧ ಮಹಿಳೆಯರನ್ನೇ ಟಾರ್ಗೆಟ್‌ ಮಾಡಿದ್ದಾರೆ. ಜತೆಗೆ, ಚಿನ್ನದ ಸರ ಕೀಳುವಾಗ ಮಹಿಳೆಯ ಕುತ್ತಿಗೆಯ ಭಾಗಕ್ಕೆ ಗಾಯಗಳಾಗಿವೆ. 

ಚಿನ್ನಾಭರಣ ವಂಚನೆ ಪ್ರಕರಣಗಳಲ್ಲೂ ವಯಸ್ಸಾದವರನ್ನೇ ಗುರಿಯಾಗಿಸಿ ವಂಚಕರು ದಾಳಿ ಮಾಡಿದ್ದಾರೆ. ಸೆ.9ರಂದು ಬ್ರಹ್ಮಾವರದ ಬೈಕಾಡಿಯ ವಿಠಲ್‌ ಶೆಟ್ಟಿ (72) ರಥಬೀದಿಯ ರಾಘವೇಂದ್ರ ಮಠದ ಎದುರು ನಡೆದುಕೊಂಡು ಹೋಗುವಾಗ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ವೃದ್ಧರನ್ನು ವಂಚಿಸಿ ಚಿನ್ನದ ಸರ, 2 ಉಂಗುರ ಪಡೆದು ವಂಚಿಸಿದ್ದಾರೆ. ಚಿನ್ನದ ಮೌಲ್ಯ ₹ 1.25 ಲಕ್ಷ.

ಅದೇರೀತಿ ಅ.14ರಂದು ವಂಚಕನೊಬ್ಬ ವೃದ್ಧೆ ಲೀಲಾಬಾಯಿ ಅವರಿಗೆ ಆಯುಷ್ಮಾನ್ ಯೋಜನೆಯಡಿ ₹ 3 ಲಕ್ಷ ಕೊಡಿಸುವಾಗಿ ನಂಬಿಸಿ, ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿನ್ನದ ಬಳೆ, ಉಂಗುರು ಬಿಚ್ಚಿಸಿಕೊಂಡು ಕಾಲ್ಕಿತ್ತಿದ್ದಾನೆ. 

ಕಳ್ಳರಿಗೆ ವರದಾನವಾದ ಸಿಸಿಟಿವಿ ಕ್ಯಾಮೆರಾ: ನಗರದ ಪ್ರಮುಖ ವೃತ್ತಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ಕಳ್ಳರಿಗೆ ವರದಾನವಾಗಿ ಪರಿಣಮಿಸಿದೆ. ಕೆಲವೇ ಕಡೆಗಳಲ್ಲಿ ಇರುವ ಸಿಸಿಟಿವಿ ಕ್ಯಾಮೆರಾಗಳು ಅಸಮರ್ಪಕ ನಿರ್ವಹಣೆಯಿಂದ ಕೆಟ್ಟು ನಿಂತಿದ್ದು, ಸಂಬಂಧಪಟ್ಟ ಇಲಾಖೆ ದುರಸ್ತಿಗೆ ಮುಂದಾಗಿಲ್ಲ.

ಪರಿಣಾಮ ನಗರದಲ್ಲಿ ಸರಗಳವು, ವಂಚನೆ ಪ್ರಕರಣಗಳು ನಡೆದಾಗ, ಪತ್ತೆಹಚ್ಚಲು ಪೊಲೀಸರಿಗೆ ಸಮಸ್ಯೆಯಾಗಿದೆ. ಪ್ರತಿಬಾರಿಯೂ ಖಾಸಗಿ ಸಂಸ್ಥೆಗಳ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗೆ ಮನವಿ ಮಾಡಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಪೊಲೀಸರು.

ನಗರಸಭೆಗೆ ಪ್ರಸ್ತಾವ: ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ನಗರದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂಬ ನಿಯಮವಿದೆ. ಅದರಂತೆ ಎಲ್ಲೆಲ್ಲಿ ಕ್ಯಾಮೆರಾಗಳ ಅಗತ್ಯವಿದೆ ಎಂಬ ಮಾಹಿತಿಯನ್ನು ನಗರಸಭೆಗೆ ಸಲ್ಲಿಸಲಾಗಿದೆ ಎಂದು ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದರು.

ಪ್ರತಿಕ್ರಿಯಿಸಿ (+)