ಶುಕ್ರವಾರ, ಅಕ್ಟೋಬರ್ 7, 2022
28 °C
ಅಮೃತ ಸರೋವರ ಯೋಜನೆಯಲ್ಲಿ ಶಿವಪುರ ಕೆರೆಬೆಟ್ಟು ಕೆರೆ ನಿರ್ಮಾಣ: ಇಂದು ಲೋಕಾರ್ಪಣೆ. 

ಹೆಬ್ರಿ: ಕೆರೆಯ ತಟದಲ್ಲೇ ಸ್ವಾತಂತ್ರ್ಯೋತ್ಸವ ಆಚರಣೆ

ಸುಕುಮಾರ್‌ ಮುನಿಯಾಲ್‌ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಆಧುನಿಕತೆಯ ಭರಾಟೆಯಲ್ಲಿ ಕೆರೆಗಳು ಮರೆಯಾಗುತ್ತಿದ್ದು ಜಲಮೂಲಗಳು ಬತ್ತಿ ಹೋಗಿ, ಜಲ ಕ್ಷಾಮ ಎದುರಾಗುತ್ತಿದೆ. ಇದನ್ನು ಮನಗಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮೀಣ ಪ್ರದೇಶದಲ್ಲಿ ಅಮೃತ ಸರೋವರ ಯೋಜನೆಯನ್ನು ಜಾರಿಗೊಳಿಸಿದೆ. ಹೆಬ್ರಿ ತಾಲ್ಲೂಕಿನ ಶಿವಪುರ ಕೆರೆಬೆಟ್ಟು ಕೆರೆಯನ್ನು ಮಾದರಿ ಕೆರೆಯಾಗಿ ನಿರ್ಮಾಣ ಮಾಡಲಾಗಿದ್ದು ನೀರಿನ ಆಭಾವ ನೀಗಿಸುವುದರ ಜೊತೆಗೆ ಸಕಲ ಜೀವ ಸಂಕುಲಗಳಿಗೆ ವರದಾನವಾಗಿದೆ.

ಸ್ವಾತಂತ್ರ್ಯದ ಅಮೃತಮಹೋತ್ಸವ ಸವಿ ನೆನಪಿಗಾಗಿ ಅಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮದಡಿ ಮಿಷನ್ ಅಮೃತ ಸರೋವರ ಯೋಜನೆಯನ್ನು ಜಾರಿಗೊಳಿಸಿದ್ದು ಕನಿಷ್ಠ 1 ಎಕರೆ (0.4ಹೆಕ್ಟೇರ್) ವಿಸ್ತೀರ್ಣ ಹೊಂದಿರುವ 10,000 ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗುವ 75 ಕೆರೆಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ನೀಡಿದ ಆದೇಶದಂತೆ ಕೆರೆಬೆಟ್ಟು ಕೆರೆಯ ನಿರ್ಮಾಣ ನಡೆದಿದೆ.

ಇಂದು ಈ ಕೆರೆ ಲೋಕಾರ್ಪಣೆಗೊಳ್ಳಲಿದೆ. ಇದು ಹಿಂದೆ ಮದಗವಾಗಿದ್ದು ಗೋವುಗಳಿಗೆ ನೀರುಣಿಸುವ ತಾಣವಾಗಿತ್ತು. ಮದಗದ ಮಾಹಿತಿ ಪಡೆದ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯು ಹೆಬ್ರಿ ತಾಲ್ಲೂಕು ಪಂಚಾಯಿತಿ ಮೂಲಕ ಗೋಶಾಲೆ ಹಾಗೂ ಕೆರೆ ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಿ ಅನುಷ್ಠಾನಗೊಳಿಸಿದೆ.

2022-23ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ₹6 ಲಕ್ಷ ಮೊತ್ತ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ₹2.50 ಲಕ್ಷ ಮೊತ್ತ ಸೇರಿ ಒಟ್ಟು ₹8.50 ಲಕ್ಷ ಅನುದಾನದಲ್ಲಿ ದಟ್ಟ ಕಾಡಿನ ನಡುವೆ ಕೆರೆ ನಿರ್ಮಾಣವಾಗಿದೆ.

ಕೆರೆಯ ಒಟ್ಟು ವಿಸ್ತೀರ್ಣ 0.72 ಎಕರೆ. 50 ಮೀಟರ್ ಉದ್ದ ಹಾಗೂ 40 ಮೀಟರ್ ಅಗಲ. ಕೆರೆಯಲ್ಲಿ ಅಂದಾಜು 54,37,500 ಲೀಟರ್‌ನಷ್ಟು ನೀರು ಸಂಗ್ರಹಣಾ ಸಾಮಾರ್ಥ್ಯ ಹೊಂದಿದೆ. ಅಂತರ್ಜಲ ವೃದ್ಧಿಯ ಜೊತೆಗೆ ಕೃಷಿ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ. ಇದೀಗ ಕೆರೆಯ ಕಾಮಗಾರಿ ಪೂರ್ಣಗೊಂಡಿದ್ದು ಕೆರೆಯ ತಟದಲ್ಲೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ.

ಕೆರೆ ನಿರ್ವಹಣಾ ಸಮಿತಿ ರಚನೆ: ಕೆರೆ ನಿರ್ವಹಣಾ ಸಮಿತಿಯ ಮೂಲಕ ಕೃಷಿಗೆ ನೀರು ಹಾಯಿಸುವಿಕೆ, ಕೆರೆ ಅಭಿವೃದ್ಧಿ, ಹೂಳೆತ್ತುವಿಕೆ ಹಾಗೂ ಇನ್ನಿತರ ಕಾರ್ಯಕ್ಕಾಗಿ ಕೆರೆ ನಿರ್ಮಾಣ ಸಮಿತಿ ರಚಿಸಲಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಕೆರೆ ನಿರ್ವಹಣೆ ಸಮಿತಿ ಅಧ್ಯಕ್ಷರಾಗಿದ್ದು ಇತರ ಎಂಟು ಜನ ಸದಸ್ಯರು ಸಮಿತಿಯಲ್ಲಿದ್ದಾರೆ.

ಅಮೃತ ಸರೋವರ ಉದ್ಘಾಟನೆ

ನಿವೃತ್ತ ಯೋಧ ಗಣೇಶ ಪೂಜಾರಿ ಧ್ವಜಾರೋಹಣ ನೆರವೇರಿಸಿ ಕೆರೆಯನ್ನು ಉದ್ಘಾಟಿಸಲಿದ್ದಾರೆ. ಹೆಬ್ರಿ ತಾಲ್ಲೂಕು ಪಂಚಾಯಿತಿ ಇಒ ಶಶಿಧರ್, ಶಿವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ, ಉಪಾಧ್ಯಕ್ಷೆ ಶ್ವೇತಾ ರಾಘವೇಂದ್ರ ಪೂಜಾರಿ, ಪಿಡಿಓ ಅಶೋಕ್, ಕೆರೆಯ ನಿರ್ವಹಣಾ ಸಮಿತಿ ಸದಸ್ಯರು ಇರಲಿದ್ದಾರೆ.

ಇದೇ ಸಂದರ್ಭದಲ್ಲಿ ಕೆರೆಯ ಸುತ್ತ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಕೆರೆಯ ಸುತ್ತಲೂ ನೆಡುತೋಪು ನಿರ್ಮಾಣ ಸೇರಿದಂತೆ ಕೆರೆಯ ಸುತ್ತ ತಂತಿ ಬೇಲಿ ರಚನೆ ಹಂತ ಹಂತವಾಗಿ ಅನುಷ್ಠಾನಗೊಳ್ಳಲಿದೆ.

ಗೋಶಾಲೆಗೆ ಪ್ರಯೋಜನ: ಕೆರೆಬೆಟ್ಟಿನಲ್ಲಿ ಸರ್ಕಾರದ ವತಿಯಿಂದ ಸುಮಾರು 13 ಎಕರೆಯ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣವಾಗುತ್ತಿದ್ದು ಗೋಶಾಲೆಯ ಸಮೀಪದಲ್ಲೇ ಕೆರೆ ನಿರ್ಮಾಣಗೊಂಡಿದ್ದು ಗೋವುಗಳಿಗೆ ನೀರಿನ ಪೂರೈಕೆ ಸುಲಭವಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು