ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿಯಲ್ಲಿ ಮಹಾತ್ಮನ ಹೆಜ್ಜೆ ಗುರುತು

ಅಸ್ಪೃಶ್ಯತೆ ನಿವಾರಣೆಗೆ ಅಭಿಯಾನ
Last Updated 14 ಆಗಸ್ಟ್ 2022, 10:55 IST
ಅಕ್ಷರ ಗಾತ್ರ

ಉಡುಪಿ: ದೇಶದಾದ್ಯಂತ ವ್ಯಾಪಿಸಿಕೊಂಡಿದ್ದ ಅಸ್ಪೃಶ್ಯತೆಯ ನಿವಾರಣೆಗಾಗಿ ಅಭಿಯಾನ ಆರಂಭಿಸಿದ್ದ ಮಹಾತ್ಮ ಗಾಂಧೀಜಿ 1934ರ ಫೆ.25ರಂದು ಉಡುಪಿಗೆ ಭೇಟಿ ನೀಡಿದ್ದರು. ಸ್ವಾತಂತ್ರ್ಯ ಹೋರಾಟಗಳಿಗೆ ಸ್ಫೂರ್ತಿ, ಪ್ರೇರಣೆಯಾಗಿದ್ದ ಗಾಂಧೀಜಿಯವರನ್ನು ಕಂಡು ಹೋರಾಟಗಾರರಲ್ಲಿ ಸಂಚಲನ ಸೃಷ್ಟಿಯಾಗಿತ್ತು.

ಫೆ.24ರಂದು ದಕ್ಷಿಣ ಕನ್ನಡದ ಸಂಪಾಜೆ, ಸುಳ್ಯ, ಪುತ್ತೂರು, ಕಬಕ, ಕಲ್ಲಡ್ಕ, ಬಂಟ್ವಾಳ ಸೇರಿದಂತೆ ಹಲವೆಡೆ ಸಂಚರಿಸಿದ ಗಾಂಧೀಜಿ 25ರಂದು ಮಧ್ಯಾಹ್ನ ಉದ್ಯಾವರ ಹೊಳೆಯನ್ನು ದಾಟಿ ಉಡುಪಿಗೆ ಬಂದಿಳಿದರು. ಬಾಪುವನ್ನು ನೋಡಲು ಜನಸಾಗರವೇ ನೆರೆದಿತ್ತು.

ಗಾಂಧೀಜಿ ಪ್ರವಾಸದ ಮುಖ್ಯ ಉದ್ದೇಶ ಅಸ್ಪೃಶ್ಯತಾ ನಿವಾರಣೆಯಾಗಿದ್ದು, ಸಭೆ ಸಮಾರಂಭಗಳಲ್ಲಿ ಅಸ್ಪೃಶ್ಯತೆ ನಿವಾರಣೆ ಬಗ್ಗೆಯೇ ಒತ್ತಿ ಹೇಳಿದ್ದರು. ಮೇಲ್ವರ್ಗದವರು ಆತ್ಮಶುದ್ಧಿ ಮಾಡಿಕೊಂಡು ಅಸ್ಪೃಶ್ಯರನ್ನು ಶುದ್ಧ ಮನಸ್ಸಿನಿಂದ ದೇವಾಲಯಗಳ ಒಳಗೆ ಆಹ್ವಾನಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದ್ದರು.

ಭಕ್ತನ ಭಕ್ತಿಗೋಸ್ಕರ ದೇವರೇ ಭಕ್ತನ ಕಡೆಗೆ ತಿರುಗಿರುವ ಉಡುಪಿಯು ಅಸ್ಪೃಶ್ಯತೆ ನಿವಾರಣೆಗೆ ಮೇಲ್ಫಂಕ್ತಿಯಾಗಬೇಕು ಎಂದು ಕರೆಯನ್ನೂ ನೀಡಿದ್ದರು. ಅಜ್ಜಕರಾಡು ಪ್ರದೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ 6000ಕ್ಕೂ ಹೆಚ್ಚು ಮಂದಿ ಸೇರಿದ್ದರು. ಗಾಂಧೀಜಿಯವರ ಸಂದೇಶವನ್ನು ಸ್ಥಳೀಯ ಭಾಷೆಗೆ ತರ್ಜುಮೆ ಮಾಡಿ ಕೂಗಿ ಹೇಳುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಅಂದಿನ ಗಾಂಧೀಜಿ ಭೇಟಿಯ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದವರು ಕಾರ್ಪೊರೇಷನ್ ಬ್ಯಾಂಕ್‌ ಸ್ಥಾಪಕರಾದ ದಾನಿಗಳೂ ಆಗಿದ್ದ ಹಾಜಿ ಅಬ್ದುಲ್ಲರು. ಪಾಂಗಳ ನಾಯಕ್ ಕುಟುಂಬದ ಪ್ರಮುಖರು ಭೇಟಿವೇಳೆ ಇದ್ದರು. ಉಡುಪಿಯ ರಾಮನಿವಾಸದ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ಗಾಂಧೀಜಿ ಕುಂದಾಪುರ ಕಡೆಗೆ ಪ್ರಯಾಣ ಬೆಳೆಸಿದರು.

ಈ ಸಂದರ್ಭ ಸ್ವಯಂ ಸೇವಕರು ಗಾಂಧೀಜಿ ಅವರ ಬಳಿ ತೆರಳಿ ಪ್ರೇರಣಾ ದಾಯಕ ಸಂದೇಶವನ್ನು ನೀಡುವಂತೆ ಕೋರಿದಾಗ ‘ಯಾವುದೇ ಬೆಲೆ ತೆತ್ತದಾರೂ ಸತ್ಯಕ್ಕಾಗಿ ಎದ್ದು ನಿಲ್ಲಬೇಕು, ಬರುವುದೆಲ್ಲ ಬರಲಿ, ಸತ್ಯವೊಂದಿರಲಿ’ ಎಂದು ಕರೆ ನೀಡಿದ್ದರು. ಅವರ ಕರೆ ಕರಾವಳಿಯಲ್ಲಿ ಬಹು ದೊಡ್ಡ ಬದಲಾವಣೆಗೆ ಸಾಕ್ಷಿಯಾಯಿತು. ಗಾಂಧೀಜಿ ಅವರ ಸರ್ವೋದಯ, ಸ್ವಾವಲಂಬನೆ, ಸ್ವದೇಶಿ, ಅಹಿಂಸೆ, ಸತ್ಯ ಚಿಂತನೆಗಳು ಗಟ್ಟಿಯಾದವುಎಂದುವಿವರಿಸಿದರು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ವಿನೀತ್ ರಾವ್‌.

ಉಡುಪಿಯಿಂದ ಕುಂದಾಪುರಕ್ಕೆ ತೆರಳಿದ್ದ ಗಾಂಧೀಜಿ ಅಲ್ಲಿಯೂ ಮನಸ್ಸು ಹಾಗೂ ಹೃದಯದಿಂದ ಅಸ್ಪೃಶ್ಯತೆ ತೊಡೆದು ಹಾಕಬೇಕು. ಶ್ರೇಷ್ಠತೆ ಹಾಗೂ ಕನಿಷ್ಠತೆಯ ವ್ಯಸನ ಬಿಡಬೇಕು ಎಂದು ಕರೆ ನೀಡಿದ್ದರು ಎನ್ನುತ್ತಾರೆ ಅವರು.

ಅಸ್ಪೃಶ್ಯತಾ ನಿವಾರಣೆಗೆ ಹಾಗೂ ಬಿಹಾರ ಭೂಕಂಪ ಸಂತ್ರಸ್ತರಿಗೆ ನೆರವು ನೀಡಲು ಗಾಂಧೀಜಿ ದೇಣಿಗೆ ಸಂಗ್ರಹಿಸಿದ್ದರು. ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರದಲ್ಲೂ ಜನರು ನಿಧಿ ಸಮರ್ಪಿಸಿದ್ದರು. ಪ್ರವಾಸದ ವೇಳೆ ಸಿಕ್ಕಿದ್ದ ಉಡುಗೊರೆಗಳನ್ನು ಗಾಂಧೀಜಿ ಹರಾಜು ಹಾಕಿ ನಿಧಿ ಸಂಗ್ರಹಿಸಿದ್ದರು. ಪ್ರವಾಸ ಮುಗಿದ ಬಳಿಕ ದೇಣಿಗೆ ಸಂಗ್ರಹ ಹಾಗೂ ಹರಾಜಿನಲ್ಲಿ ಬಂದ ಹಣಗಳ ವಿವರವನ್ನು ಪಾರದರ್ಶಕವಾಗಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು ಎಂದು ವಿನೀತ್ ರಾವ್ ತಿಳಿಸಿದರು.

ಪ್ರತಿಮೆ ನಿರ್ಮಾಣ:

ಗಾಂಧೀಜಿ ಉಡುಪಿ ಭೇಟಿಯ ಸ್ಮರಣಾರ್ಥ ಅಜ್ಜರಕಾಡು ಉದ್ಯಾನದಲ್ಲಿ ಗಾಂಧಿ ಪ್ರತಿಮೆ ನಿರ್ಮಿಸಲಾಗಿದೆ. ಗಾಂಧೀಜಿಯವರ ಮರಣದ ನಂತರ ಗೌರವಾರ್ಥವಾಗಿ ಅವರ ಚಿತಾಭಸ್ಮವನ್ನು ಮಲ್ಪೆಯ ವಡಬಾಂಢೇಶ್ವರ ತೀರದಲ್ಲಿ ವಿಸರ್ಜಿಸಲಾಯಿತು. ಮಲ್ಪೆಯ ತೀರದಲ್ಲಿ ಗಾಂಧೀಜಿ ಪ್ರತಿಮೆಯನ್ನೂ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT