ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಗ್ರಾಮೀಣ ಆಶ್ರಮಕ್ಕೆ ಅಂತರರಾಷ್ಟ್ರೀಯ ಗೌರವ

ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಕ್ಕೆ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್‌ ಪ್ರಶಸ್ತಿ
Last Updated 28 ಫೆಬ್ರುವರಿ 2020, 12:58 IST
ಅಕ್ಷರ ಗಾತ್ರ

ಉಡುಪಿ: ರಾಜ್ಯದಲ್ಲಿ ಬುಡಕಟ್ಟು ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಿದ್ದಕ್ಕಾಗಿ ‘ಸಮಗ್ರ ಗ್ರಾಮೀಣ ಆಶ್ರಮ’ ಸ್ವಯಂ ಸೇವಾ ಸಂಸ್ಥೆಗೆ ‘ವಿಶ್ವಸಂಸ್ಥೆ ಹ್ಯಾಬಿಟ್ಯಾಟ್‌ ಪ್ರಶಸ್ತಿ–2019’ ಗೌರವ ಸಿಕ್ಕಿದೆ ಎಂದು ಸಮಗ್ರ ಗ್ರಾಮೀಣ ಆಶ್ರಮದ ಸಂಯೋಜಕ ಅಶೋಕ್‌ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆ 1987ರಿಂದ ರಾಜ್ಯದ ಬುಡಕಟ್ಟು ಸಮುದಾಯಗಳ ಪರವಾಗಿ ದುಡಿಯುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಲ್ಲಿರುವ ಕೊರಗರು, ಹಸಲರು, ಗೊಂಡ, ಮಲೆಕುಡಿಯ, ಹಕ್ಕಿಪಿಕ್ಕಿ, ಜೇನುಕುರುಬ, ಬೆಟ್ಟಕುರುಬ, ಎರವ ಸೋಲಿಗ, ಡೋಂಗ್ರಿ ಗರಸಿಯಾ ಸಮುದಾಯಗಳನ್ನು ಮೇಲೆತ್ತಲ್ಲು ಶ್ರಮಿಸುತ್ತಿದೆ. ಸಂಸ್ಥೆಯ ಕಾರ್ಯಕ್ಕೆ ಪ್ರತಿಫಲವಾಗಿ ಪ್ರತಿಷ್ಠಿತ ವಿಶ್ವಸಂಸ್ಥೆ ಹ್ಯಾಬಿಟ್ಯಾಟ್‌ ಪ್ರಶಸ್ತಿ ಸಿಕ್ಕಿದೆ ಎಂದರು.

ಬುಡಕಟ್ಟು ಸಮುದಾಯಗಳ ಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ಹಕ್ಕು ಕೊಡಿಸುವುದು, ವಸತಿ ಸೌಲಭ್ಯ, ಜೀವನಾಧಾರಕ್ಕೆ ವ್ಯವಸ್ಥೆ, ಶಿಕ್ಷಣ, ಪೌಷ್ಟಿಕ ಆಹಾರ ಹಾಗೂ ಆರೋಗ್ಯದ ಸೌಲಭ್ಯಗಳನ್ನು ಕೊಡಿಸುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆಎಂದರು.

ಜಗತ್ತಿನ 195 ದೇಶಗಳ 3,000 ಸ್ವಯಂಸೇವಾ ಸಂಸ್ಥೆಗಳು ಪ್ರಶಸ್ತಿಗೆ ಪೈಪೋಟಿ ನಡೆಸಿದ್ದವು. ಅಂತಿಮ ಸುತ್ತಿಗೆ ಆಯ್ಕೆಯಾದ 10 ಸಂಸ್ಥೆಗಳ ಕಾರ್ಯಗಳ ಬಗ್ಗೆ ವಿಶ್ವಸಂಸ್ಥೆಯ ಪ್ರತಿನಿಧಿಗಳು ಕ್ಷೇತ್ರಾಧ್ಯಯನ ನಡೆಸಿ ವರದಿ ಸಲ್ಲಿಸಿದ್ದವು. ಅದರ ಆಧಾರದ ಮೇಲೆ 4 ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆಮಾಡಲಾಯಿತು. ಜಾಗತಿಕ ದಕ್ಷಿಣ ವಿಭಾಗದಿಂದ ಸಮಗ್ರ ಗ್ರಾಮೀಣ ಆಶ್ರಮ ಸಂಸ್ಥೆಗೆ ಚಿನ್ನದ ಪ್ರಶಸ್ತಿ ಸಿಕ್ಕಿದೆ ಎಂದು ಹೆಮ್ಮೆಪಟ್ಟರು.

ಭಾರತಕ್ಕೆ ಇದುವರೆಗೂ ನಾಲ್ಕು ಬಾರಿ ಮಾತ್ರ ವಿಶ್ವಸಂಸ್ಥೆಯ ಹ್ಯಾಬಿಟ್ಯಾಟ್ ಪ್ರಶಸ್ತಿ ಬಂದಿದೆ. ಕರ್ನಾಟಕಕ್ಕೆ ಸಿಕ್ಕಿರುವುದು ಇದೇ ಮೊದಲು. ಫೆ.11ರಂದು ಅಬುದಾಬಿಯಲ್ಲಿ ನಡೆದ ಸಮಾರಂಭದಲ್ಲಿ ಚಿನ್ನದ ಪ್ರಶಸ್ತಿ ಸ್ವೀಕರಿಸಲಾಯಿತು. 10,000 ಯೂರೋ ಸಹಿತ ಬಹುಮಾನದ ಜತೆಗೆ ಸಿಕ್ಕಿದೆ ಎಂದು ಅಶೋಕ್‌ ಸಂತಸ ವ್ಯಕ್ತಪಡಿಸಿದರು.

ಸಮಗ್ರ ಗ್ರಾಮೀಣ ಆಶ್ರಮದ ಜತೆಗೆ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಶ್ರಮಿಸುತ್ತಿದ್ದು, ಮುಂದೆ ರಾಜ್ಯದಾದ್ಯಂತ ಕ್ಷೇತ್ರ ವಿಸ್ತರಣೆಗೆ ಚಿಂತನೆ ನಡೆಸಲಾತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷೆ ಶಕುಂತಲಾ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಕರ್ನಾಟಕ ಕೇರಳ ಅಧ್ಯಕ್ಷೆ ಅಮ್ಮಣ್ಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT