ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಅರ್ಧಂಬರ್ಧ ಪಠ್ಯ ಪುಸ್ತಕ ಪೂರೈಕೆ

2,35,660 ಪಠ್ಯ ಪುಸ್ತಕಗಳ ಬೇಡಿಕೆಗೆ ಪ್ರತಿಯಾಗಿ 1,24,219 ಪಠ್ಯ ಪುಸ್ತಕಗಳು ಸರಬರಾಜು
Last Updated 16 ಜೂನ್ 2022, 1:17 IST
ಅಕ್ಷರ ಗಾತ್ರ

ಉಡುಪಿ: ಶಾಲೆಗಳು ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಜಿಲ್ಲೆಗೆ ಬೇಡಿಕೆಯಷ್ಟು ಪ್ರಮಾಣದ ಪಠ್ಯ ಪುಸ್ತಕಗಳು ಸರ್ಕಾರದಿಂದ ಪೂರೈಕೆಯಾಗಿಲ್ಲ. ಇದರ ಮಧ್ಯೆ ಮಕ್ಕಳಿಗೆ ಹಳೆಯ ಪಠ್ಯ ಬೋಧಿಸಬೇಕೆ, ಪರಿಷ್ಕರಣೆಗೊಂಡ ಪಠ್ಯಗಳನ್ನು ಬೋಧಿಸಬೇಕೆ ಎಂಬ ಗೊಂದಲದಲ್ಲಿ ಶಿಕ್ಷಕರು ಸಿಲುಕಿದ್ದಾರೆ.

2022–23ನೇ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ಜಿಲ್ಲೆಯ 5 ತಾಲ್ಲೂಕುಗಳ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳ 7,66,085 ಮಕ್ಕಳಿಗೆ ಹಾಗೂ ಖಾಸಗಿ ಶಾಲೆಗಳ 3,83,447 ಮಕ್ಕಳಿಗೆ ಪಠ್ಯ ಪುಸ್ತಕಗಳು ಅಗತ್ಯವಿದ್ದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ಬೇಡಿಕೆಯ ಪೈಕಿ ಮುದ್ರಕರಿಂದ ಇದುವರೆಗೂ ಸರ್ಕಾರಿ ಶಾಲೆಗಳಿಗೆ ಪೂರೈಸಲು 4,30,104 ಪಠ್ಯ ಪುಸ್ತಕಗಳು ಹಾಗೂ ಖಾಸಗಿ ಶಾಲೆಗಳಿಗೆ ಪೂರೈಸಲು 1,75,198 ಪುಸ್ತಕಗಳು ಮಾತ್ರ ಬಂದಿವೆ. ಅಂದರೆ ಸರ್ಕಾರಿ ಶಾಲೆಗಳಿಗೆ ಶೇ 57.82ರಷ್ಟು ಪುಸ್ತಕಗಳು ಸರಬರಾಜಾಗಿದ್ದರೆ, ಖಾಸಗಿ ಶಾಲೆಗಳಿಗೆ ಶೇ 65.14ರಷ್ಟು ಪುಸ್ತಕಗಳು ಮಾತ್ರ ಪೂರೈಕೆಯಾಗಿವೆ.

ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಪರಿಷ್ಕರಿಸಿರುವ ಹೊಸ ಪಠ್ಯ ಪುಸ್ತಕಗಳು ಪೂರೈಕೆಯಾಗುತ್ತಿದ್ದು, ಮುದ್ರಕರಿಂದ ಜಿಲ್ಲೆಗೆ ಸರಬರಾಜಾಗಿರುವ ಪುಸ್ತಕಗಳ ಪೈಕಿ ಶೇ 98.66ರಷ್ಟನ್ನು ಸರ್ಕಾರಿ ಶಾಲೆಗಳಿಗೆ ಹಾಗೂ ಶೇ 93.99ರಷ್ಟು ಖಾಸಗಿ ಶಾಲೆಗಳಿಗೆ ತಲುಪಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಬ್ರಹ್ಮಾವರ ವಲಯದಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಸೇರಿ 2,35,660 ಪಠ್ಯ ಪುಸ್ತಕಗಳ ಬೇಡಿಕೆಗೆ ಪ್ರತಿಯಾಗಿ 1,24,219 ಪಠ್ಯ ಪುಸ್ತಕಗಳು ಸರಬರಾಜಾಗಿವೆ. ಅದರಂತೆ ಕಾರ್ಕಳ ತಾಲ್ಲೂಕಿನ 2,12,532 ಪುಸ್ತಕಗಗಳ ಬೇಡಿಕೆಗೆ ಪ್ರತಿಯಾಗಿ 1,24,957, ಉಡುಪಿ ತಾಲ್ಲೂಕಿನ 2,18,574 ಪುಸ್ತಕಗಳ ಬೇಡಿಕೆಯ ಪೈಕಿ 1,22,653, ಕುಂದಾಪುರ ತಾಲ್ಲೂಕಿನ 2,25,062 ಪುಸ್ತಕಗಳ ಬೇಡಿಕೆಗೆ ಪ್ರತಿಯಾಗಿ 1,20,619, ಬೈಂದೂರು ತಾಲ್ಲೂಕಿನ 1,57,704 ಪುಸ್ತಕಗಳ ಬೇಡಿಕೆಯ ಪೈಕಿ 1,12,854 ಪುಸ್ತಕಗಳು ಸರ್ಕಾರದಿಂದ ಪೂರೈಕೆಯಾಗಿವೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10ನೇ ತರಗತಿಯವರೆಗೂ ಸಮಾಜ ವಿಜ್ಞಾನ, ಕನ್ನಡ, ಪರಿಸರ ವಿಜ್ಞಾನ, ಇಂಗ್ಲೀಷ್ ಪುಸ್ತಕಗಳು ಬೇಡಿಕೆಯಷ್ಟು ಪೂರೈಕೆಯಾಗಿಲ್ಲ. ಸಮಾಜ ವಿಜ್ಞಾನ ಹಾಗೂ ಕನ್ನಡ ವಿಷಯಗಳು ಪರಿಷ್ಕರಣೆಗೊಂಡಿರುವುದರಿಂದ ಮಕ್ಕಳಿಗೆ ಹಳೆಯ ಪಠ್ಯ ಬೋಧಿಸಬೇಕೇ, ಪರಿಷ್ಕರಣೆಗೊಂಡ ಪಠ್ಯ ಬೋಧಿಸಬೇಕೆ ಎಂಬ ಗೊಂದಲ ಇದೆ ಎನ್ನುತ್ತಾರೆ ಶಿಕ್ಷಕರು.

ಕಲಿಕಾ ಚೇತರಿಕೆಗೆ ಒತ್ತು:ಕೋವಿಡ್‌–19 ಕಾರಣದಿಂದ ಕಳೆದ ಎರಡು ವರ್ಷ ಸರಿಯಾಗಿ ಶಾಲೆಗಳು ನಡೆಯದ ಕಾರಣ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ವರ್ಷಪೂರ್ತಿ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಒತ್ತು ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

ಅದರಂತೆ, ಶಾಲೆಗಳು ಆರಂಭವಾದರೂ ಮಕ್ಕಳಿಗೆ ಪಠ್ಯ ಪುಸ್ತಕಗಳ ಬೋಧನೆ ಆರಂಭಿಸಿಲ್ಲ. ಕಲಿಕಾ ಚೇತರಿಕೆ ಕಾರ್ಯಕ್ರಮದಡಿ ಮಕ್ಕಳಲ್ಲಿರುವ ಕಲಿಕಾ ನ್ಯೂನತೆಗಳನ್ನು ಗುರುತಿಸಿ ಸರಿಪಡಿಸಲಾಗುತ್ತಿದೆ ಎಂದು ಡಿಡಿಪಿಐ ಗೋವಿಂದ ಮಾಡಿವಾಳ ತಿಳಿಸಿದರು.

ಇನ್ನೊಂದು ವಾರದಲ್ಲಿ ಜಿಲ್ಲೆಯ ಬೇಡಿಕೆಯಷ್ಟು ಪಠ್ಯ ಪುಸ್ತಕಗಳ ವಿತರಣೆಯಾಗಲಿದ್ದು, ನಂತರ ಪಠ್ಯಪುಸ್ತಕಗಳ ಬೋಧನೆಯ ಜತೆಗೆ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನೂ ಮುಂದುವರಿಸಲಾಗುವುದು. ಪಠ್ಯ ಪುಸ್ತಕ ಬರುವುದು ತಡವಾದರೂ ಗಂಭೀರ ಸಮಸ್ಯೆಗಳು ಎದುರಾಗುವುದಿಲ್ಲ. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಬುಕ್ ಬ್ಯಾಂಕ್‌ಗಳಿದ್ದು, ಹಳೆಯ ವಿದ್ಯಾರ್ಥಿಗಳು ಬಳಸಿದ ಪುಸ್ತಕಗಳನ್ನು ಬಳಸಿಕೊಂಡು ಶಿಕ್ಷಕರು ಪಾಠ ಮಾಡಲಿದ್ದಾರೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

ವಲಯ–ಬೇಡಿಕೆ ಎಷ್ಟು–ಪೂರೈಕೆ ಎಷ್ಟು

ಬ್ರಹ್ಮಾವರ–2,35,660–1,24,219

ಕಾರ್ಕಳ–2,12,532–1,24,957

ಉಡುಪಿ–2,18,574–1,22,653

ಕುಂದಾಪುರ–2,25,062–1,20,619

ಬೈಂದೂರು–1,57,704–1,12,854

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT