ಭಾನುವಾರ, ಜನವರಿ 17, 2021
20 °C
ಕರಗ ಕೋಲಾಟಕ್ಕೆ ಒಲಿದ ಗೌರವ

ರಮೇಶ್ ಕಲ್ಮಾಡಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಗರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಾನಪದ ಕಲಾ ಕ್ಷೇತ್ರದಲ್ಲಿ 3 ದಶಕಗಳಿಗೂ ಹೆಚ್ಚುಕಾಲ ತೊಡಗಿಸಿಕೊಂಡಿರುವ, ಕರಗ ಕೋಲಾಟ ಪ್ರಕಾರದಲ್ಲಿ ಪರಿಣತರಾಗಿರುವ ಮಲ್ಪೆಯ ಕಲ್ಮಾಡಿ ರಮೇಶ್ ಕಲ್ಮಾಡಿ ಅವರಿಗೆ 2020ನೇ ಸಾಲಿನ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.

ಕೋಲಾಟದ ಒಂದು ಪ್ರಕಾರವಾದ ಕರಗ ಕೋಲಾಟ ಕಲೆಯನ್ನು ನಾಡಿನಾದ್ಯಂತ ಸಾವಿರಾರು ಯುವ ಕಲಾವಿದರಿಗೆ ಹಾಗೂ ನೂರಾರು ಸಂಘ ಸಂಸ್ಥೆಗಳ ಸದಸ್ಯರಿಗೆ ತರಬೇತಿ ನೀಡಿ ಸಜ್ಜುಗೊಳಿಸಿರುವ ರಮೇಶ್ ಕಲ್ಮಾಡಿ, ತುಳು ಹಾಗೂ ಕನ್ನಡ ಸಂಪ್ರದಾಯದ ಕುಣಿತಕ್ಕೆ ಬೇಕಾದ ವೇಷಭೂಷಣ ಹಾಗೂ ಪರಿಕರಗಳನ್ನು ಖುದ್ದು ತಯಾರಿಸಿರುವುದು ವಿಶೇಷ.

ಧರ್ಮಸ್ಥಳದಲ್ಲಿ ನಡೆಯುವ ರಾಜ್ಯಮಟ್ಟದ ಭಜನಾ ಕಮ್ಮಟದಲ್ಲಿ ಕಳೆದ 23 ವರ್ಷಗಳಿಂದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿರುವ ಅವರು, ಮೈಸೂರು ದಸರಾ, ಜನಪದ ಜಾತ್ರೆ, ಜನಪದ ಉತ್ಸವಗಳಲ್ಲಿ ಕರಗ ಕೋಲಾಟ ಕಲೆಯನ್ನು ಪ್ರದರ್ಶಿಸಿದ್ದಾರೆ.

ಕರ್ನಾಟಕ ಜಾನಪದ ಪರಿಷತ್‌ನ ಸಕ್ರಿಯ ಸದಸ್ಯರಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ತುಳು ಪಠ್ಯ ಪುಸ್ತಕ ರಚನಾ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಸ್ಪರ್ಧಾಳುವಾಗಿ, ತಂಡದ ನಿರ್ದೇಶಕ, ಸಂಘಟಕನಾಗಿಯೂ ದುಡಿದಿರುವ ರಮೇಶ್ ಕಲ್ಮಾಡಿ ಸಧ್ಯ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಂಗಮ ಜಾನಪದ ಕಲಾಮೇಶವನ್ನು ಕಟ್ಟಿಕೊಂಡು ಕಳೆದ 25 ವರ್ಷಗಳಿಂದ ಕಲಾಸೇವೆಯಲ್ಲಿ ತೊಡಗಿರುವ ರಮೇಶ್ ಕಲ್ಮಾಡಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಹರಸಿ ಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.