‘ಭಾರತ್‌ ಬಂದ್‌’ ವೇಳೆ ಗಲಾಟೆ: ಜಯಮಾಲಾಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ

7

‘ಭಾರತ್‌ ಬಂದ್‌’ ವೇಳೆ ಗಲಾಟೆ: ಜಯಮಾಲಾಗೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಮುತ್ತಿಗೆ

Published:
Updated:
Deccan Herald

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಮುಗಿಸಿ ಹೊರ ಬರುತ್ತಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರಿಗೆ 20ಕ್ಕೂ ಹೆಚ್ಚಿನ ಸ್ವಪಕ್ಷೀಯ ಕಾರ್ಯಕರ್ತರು ಮುತ್ತಿಗೆ ಹಾಕಿ, ಭಾರತ್‌ ಬಂದ್ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರನ್ನು ಎತ್ತಂಗಡಿ ಮಾಡಬೇಕು ಎಂದು ಒತ್ತಾಯಿಸಿದರು.

‘ಬಂದ್ ಸಂದರ್ಭದಲ್ಲಿ ಉಡುಪಿಯಲ್ಲಿ ಅಷ್ಟು ದೊಡ್ಡ ಗಲಾಟೆ ಆದರೂ ನೀವು ಬಂದಿಲ್ಲ. ಪೊಲೀಸರು ನಮ್ಮ ಮೇಲೆ ನಡೆಸಿದ ಲಾಠಿ ಚಾರ್ಜ್‌ನಿಂದಾಗಿ ಕಾಂಗ್ರೆಸ್‌ ಕಾರ್ಯಕರ್ತರು ಎರಡು ದಿನ ಆಸ್ಪತ್ರೆಯಲ್ಲಿ ಇರುವಂತಾಯಿತು. ಆಗಲೂ ನೀವು ನಮ್ಮ ಆರೋಗ್ಯ ವಿಚಾರಿಸಲು ಬಂದಿಲ್ಲ. ಬದಲಾಗಿ ಜಿಲ್ಲಾ ವರಿಷ್ಠಾಧಿಕಾರಿ ಮನೆಗೆ ತೆರಳಿ ಗಣಪತಿ ನೋಡಿಕೊಂಡು ಊಟ ಮಾಡಿ ಬಂದಿದ್ದೀರಾ’ ಎಂದು ಕಾರ್ಯಕರ್ತರು ದೂರಿದರು.

ಆಗ ಸಚಿವರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ‘ಎಸ್‌ಪಿ ವಿರೋಧ ಪಕ್ಷದ ಕುಮ್ಮಕ್ಕಿನಿಂದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡಿದ್ದಾರೆ. ಆದರೂ ನೀವು ಏನೂ ಮಾತನಾಡಿಲ್ಲ. ನಮಗೆ ನ್ಯಾಯ ಬೇಕು. ಎಸ್‌ಪಿ ಅವರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಯಮಾಲಾ, ‘ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರನ್ನು ಭೇಟಿ ಮಾಡಿ ಭಾರತ್‌ ಬಂದ್‌ ವೇಳೆ ಏನೆಲ್ಲಾ ಗಲಾಟೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದಿದ್ದೇನೆ. ನಿಜವಾದ ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಅವರಿಗೆ ಹೇಳಿದ್ದೇನೆ. ಆದರೆ, ನೀವು ಈ ರೀತಿಯಾಗಿ ಮಾಧ್ಯಮದ ಮುಂದೆ ನಾಟಕವಾಡುವುದು ಸರಿಯಲ್ಲ. ಇದರಿಂದ ನನಗೆ  ಕೆಟ್ಟ ಕೋಪ ಬರುತ್ತದೆ. ನಾನು ಶಾಂತಿ ಪ್ರಿಯೆ, ಗಲಾಟೆಗೆ ಆಸ್ಪದ ಕೊಡುವುದಿಲ್ಲ’ ಎಂದರು.

ಆಕ್ರೋಶ ಮತ್ತಷ್ಟು ಹೆಚ್ಚಾದಂತೆ ಸಚಿವರು ಹೊರನಡೆದರು. ಕಾರ್ಯಕರ್ತರ ಅಸಮಾಧಾನ ಮತ್ತೂ ಮುಂದುವರಿದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !