ಸೋಮವಾರ, ಮಾರ್ಚ್ 1, 2021
20 °C
ಟೋಲ್ ವಿರುದ್ಧ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

ಗ್ರಾಮ ಪಂಚಾಯ್ತಿ ರಸ್ತೆಯಲ್ಲಿ ಟೋಲ್ ಸಂಗ್ರಹ ಸರಿಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಹೆಜಮಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಯಲ್ಲಿ ಟೋಲ್‌ಗೇಟ್‌ ನಿರ್ಮಿಸಲು ಅನುಮತಿ ಕೊಟ್ಟಿದ್ದು ಯಾರು? ಗ್ರಾಮ ಪಂಚಾಯ್ತಿ ರಸ್ತೆಗಳಲ್ಲಿ ಟೋಲ್ ಸಂಗ್ರಹ ಮಾಡಬಹುದೇ?

ಹೀಗೆ, ಗುರುವಾರ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜನಾರ್ದನ ತೋನ್ಸೆ ಹಾಗೂ ರೇಷ್ಮಾ ಅವರು ನವಯುಗ ಕಂಪೆನಿ ವಿರುದ್ಧ ಹರಿಹಾಯ್ದರು.

ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಯಲ್ಲಿ ಓಡಾಡಿದರೂ ಜನರು ಟೋಲ್ ಕಟ್ಟಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿಬಿಟ್ಟು ಬೇರೆ ರಸ್ತೆಗಳಲ್ಲಿ ಟೋಲ್ ತೆಗೆದಕೊಳ್ಳಲು ಅಧಿಕಾರ ಕೊಟ್ಟಿದ್ದು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನವಯುಗ ಕಂಪೆನಿಯ ಸ್ವತಂತ್ರ ಎಂಜಿನಿಯರ್ ಗುರುರಾಜ್‌, ‘ಹೆಜಮಾಡಿ ಭಾಗದಲ್ಲಿ ಟೋಲ್‌ ತಪ್ಪಿಸಲು ಭಾರಿ ವಾಹನಗಳು ಗ್ರಾಮ ಪಂಚಾಯ್ತಿ ರಸ್ತೆ ಬಳಸುತ್ತಿವೆ. ತೆರಿಗೆ ಸೋರಿಕೆ ತಡೆಗೆ ಟೋಲ್‌ ಗೇಟ್ ಹಾಕಲಾಗಿದೆ. ಜಿಲ್ಲಾಧಿಕಾರಿ ಹಾಗೂ ಪ್ರಿನ್ಸಿಪಲ್‌ ಸೆಕ್ರೆಟರಿಯಿಂದ ಅನುಮತಿಯನ್ನೂ ಪಡೆಯಲಾಗಿದೆ ಎಂದರು.‌

ಗ್ರಾಮ ಪಂಚಾಯ್ತಿಯಿಂದ ಅನುಮತಿ ಪಡೆಯಲಾಗಿದೆಯೇ? ಜಿಲ್ಲಾಧಿಕಾರಿ ಹಾಗೂ ಎನ್‌ಎಚ್‌ಎಐ ಅನುಮತಿ ನೀಡಿದ್ದರೆ ಅನುಮತಿ ಪತ್ರವನ್ನು ಸಭೆಗೆ ಹಾಜರುಪಡಿಸಿ ಎಂದು ಸದಸ್ಯರು ಒತ್ತಾಯಿಸಿದರು.

ಕಂಪೆನಿ ಭೂಸ್ವಾಧೀನ ಮಾಡಿಕೊಂಡಿರುವ ಜಾಗದಲ್ಲೇ ಟೋಲ್ ಕೇಂದ್ರ ಸ್ಥಾಪಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಿಸಿಲ್ಲ. ಟೋಲ್‌ ಕೇಂದ್ರಕ್ಕೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ ಎಂದು ದಾಖಲೆ ಪ್ರದರ್ಶಿಸಿದರು.

ಅಂತಿಮವಾಗಿ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಸ್ತೆಗಳಲ್ಲಿ ಟೋಲ್‌ ಸಂಗ್ರಹಿಸಬಾರದು. ಸ್ಥಳೀಯ ನೋಂದಣಿ ಸಂಖ್ಯೆಯ (ಕೆ.ಎ.20) ವಾಹನಗಳಿಗೆ ವಿನಾಯ್ತಿ ನೀಡಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ರೇಷನ್ ಕಾರ್ಡ್ ಬಂದಿಲ್ಲ ಎಂದು ಜನಾರ್ದನ ತೋನ್ಸೆ ಅವರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಜಿಲ್ಲೆಯಲ್ಲಿ ಬಿಪಿಎಲ್‌ ಕಾರ್ಡ್‌ಗಾಗಿ 25,488 ಅರ್ಜಿ ಸ್ವೀಕರಿಸಲಾಗಿದೆ. 19,274 ಅರ್ಜಿಗಳು ವಿಲೇವಾರಿಯಾಗಿವೆ. 6,214 ಅರ್ಜಿಗಳು ಬಾಕಿ ಇವೆ ಎಂದರು.

6214 ಬಾಕಿ ಅರ್ಜಿಗಳು 2017–18ನೇ ಸಾಲಿಗೆ ಸಂಬಂಧಪಟ್ಟಿವೆ. ಚುನಾವಣೆ ನಂತರ ಹೊಸ ಪಡಿತರ ಕಾರ್ಡ್‌ಗಳನ್ನು ವಿತರಿಸಲು ಸೂಚನೆ ಬಂದಿಲ್ಲ. 2017ರ ಜನವರಿಯ ಹಿಂದೆ ಕೊಟ್ಟಿದ್ದ ಅರ್ಜಿಗಳೆಲ್ಲ ರದ್ದಾಗಿವೆ ಎಂದು ಅಧಿಕಾರಿ ಉತ್ತರಿಸಿದರು.

ಅರ್ಜಿಗಳು ರದ್ದಾದ ಬಗ್ಗೆ ಅರ್ಜಿದಾರರಿಗೆ ಮಾಹಿತಿ ನೀಡಬೇಕಲ್ಲವೇ. ಮತ್ತೊಮ್ಮೆ ಅವರಿಂದ ಅರ್ಜಿ ಸ್ವೀಕರಿಸಬೇಕಲ್ಲವೇ. ಅರ್ಜಿ ರದ್ದುಮಾಡಿ ಸುಮ್ಮನೆ ಕುಳಿತರೆ ಹೇಗೆ ಎಂದು ತೋನ್ಸೆ ಪ್ರಶ್ನಿಸಿದರು.

ಜನವರಿ 2017ರಿಂದ 2018ರ ಜೂನ್‌ವರೆಗೂ ಪಡಿತರ ಕಾರ್ಡ್‌ ಪಡೆಯಲು ಕುಟುಂಬದ ಎಲ್ಲ ಸದಸ್ಯರ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಪಡೆಯಬೇಕು ಎಂಬ ಸುತ್ತೋಲೆ ಬಂದಿತ್ತು. ಹಾಗಾಗಿ, ಬಹಳಷ್ಟು ಅರ್ಜಿಗಳು ಬಾಕಿ ಉಳಿದು ರದ್ದಾಗಿವೆ. ಜುಲೈನಿಂದ ನಿಯಮ ಬದಲಾಗಿದ್ದು, ಕುಟುಂಬದ ಒಬ್ಬರು ಜಾತಿ, ಆದಾಯ ಪ್ರಮಾಣ ಪತ್ರ ನೀಡಿದರೆ ಸಾಕು ಎಂದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಶಿವಾನಂದ ಕಾಪಶಿ, ಮನೆಯಲ್ಲಿ ಮಗುವಿದ್ದರೆ ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಹೇಗೆ ಪಡೆಯುವುದು. ತಾಂತ್ರಿಕ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಿರಿ ಎಂದು ಸೂಚಿಸಿದರು.

ಈಚೆಗೆ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದೆ. ಮನೆಗಳು ಕುಸಿದಿವೆ. ರಸ್ತೆಗಳು ಹಾಳಾಗಿವೆ. ಸರ್ಕಾರದಿಂದ ಜಿಲ್ಲೆಗೆ ಬಂದಿರುವ ಅನುದಾನ, ಪರಿಹಾರ ಮಾಹಿತಿ ನೀಡಿ ಎಂದು ಸದಸ್ಯರು ಒತ್ತಾಯಿಸಿದರು.

ಈಚೆಗೆ ಸುರಿದ ಭಾರಿ ಮಳೆಗೆ ಉಡುಪಿಯಲ್ಲಿ ₹ 20 ಕುಂದಾಪುರ ₹17 ಕೋಟಿ, ಕಾರ್ಕಳ ₹ 35 ಕೋಟಿ, ಬೈಂದೂರು ₹ 22.59 ಕೋಟಿ, ಬ್ರಹ್ಮಾವರದಲ್ಲಿ ₹ 19 ಕೋಟಿ, ಕಾಪುವಿನಲ್ಲಿ ₹ 26 ಕೋಟಿ ನಷ್ಟವಾಗಿದ್ದು, ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

ಪ್ರಾಕೃತಿಕ ವಿಕೋಪ ಪರಿಹಾರಕ್ಕೆ ಉಡುಪಿಗೆ ₹ 4 ಕೋಟಿ ಹಾಗೂ ಮೂಲಸೌಕರ್ಯಕ್ಕೆ ₹ 14.50 ಕೋಟಿ ಬಿಡುಗಡೆಯಾಗಿದೆ. ಪರಿಹಾರ ಕಾರ್ಯಗಳು ನಡೆಯುತ್ತಿವೆ ಎಂದು ಸಿಇಒ ತಿಳಿಸಿದರು.

ಇಷ್ಟು ಕಡಿಮೆ ಹಣದಲ್ಲಿ ಫಲಾನುಭವಿಗಳಿಗೆ ಪರಿಹಾರ ನೀಡಲು ಸಾಧ್ಯವಿಲ್ಲ. ಹೆಚ್ಚಿನ ಅನುದಾನಕ್ಕೆ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸೋಣ ಎಂದು ಸದಸ್ಯರು ತೀರ್ಮಾನ ಮಾಡಿದರು. 

ಪ್ರಾಥಮಿಕ ಶಾಲೆಗಳಲ್ಲಿ ನಿಯಮಮೀರಿ ಶಾಲಾಭಿವೃದ್ಧಿ ಸಮಿತಿ ರಚನೆ ವಿಚಾರ ಹಾಗೂ ಭೂಪರಿವರ್ತನೆ ಗೊಂದಲ ವಿಚಾರಗಳು ಸಭೆಯಲ್ಲಿ ಚರ್ಚೆಯಾಯಿತು.  

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರು ಸಭೆಯಲ್ಲಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.