ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆ ಪರಿಹಾರ, ಕಾಯಕಕ್ಕೆ ಫಲ: ಜಿಲ್ಲಾಧಿಕಾರಿ ಕೂರ್ಮಾರಾವ್‌

ಮುನಿಯಾಲಿನಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮ
Last Updated 28 ಮೇ 2022, 3:51 IST
ಅಕ್ಷರ ಗಾತ್ರ

ಹೆಬ್ರಿ: ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕಾನೂನು ಚೌಕಟ್ಟಿನೊಳಗೆ ಕಾರ್ಯನಿರ್ವಹಿಸಿದರೆ ಜನರ ಸಮಸ್ಯೆಗಳು ಸುಲಭದಲ್ಲಿ ಪರಿಹಾರವಾಗುತ್ತವೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಹೇಳಿದರು.

ತಾಲ್ಲೂಕಿನ ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿಯಾಲು ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜನರ ಬಳಿ ಹೋಗಿ ಸಮಸ್ಯೆಯನ್ನು ಆಲಿಸಿ ಪರಿಹರಿಸುವುದೇ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಮುಖ್ಯ ಉದ್ದೇಶ. ಸಾರ್ವಜನಿಕರ ಸಮಸ್ಯೆ ಪರಿಹಾರವಾದಾಗ ನಮ್ಮ ಕಾರ್ಯಕ್ಕೆ ಫಲ ದೊರೆಯುತ್ತದೆ’ ಎಂದರು.

‘ನಾವು ಊರಿನ ಅಭಿವೃದ್ಧಿಗಾಗಿ ದುಡಿಯುತ್ತೇವೆ. ಆದರೆ ವರಂಗ ಜೈನ ಮಠದಿಂದ ಅಭಿವೃದ್ಧಿಗೆ ವಿವಿಧ ರೀತಿಯ ತೊಡಕು ಆಗುತ್ತಿದೆ. ಪೇಟೆಯ ಸವಲತ್ತುಗಳು ಹಳ್ಳಿಗೂ ಬರಬೇಕು. ಆದರೆ, ಅಡ್ಡಿಗಳು ನಮ್ಮನ್ನು ತಡೆಯುತ್ತಿವೆ. ನಮ್ಮಲ್ಲಿನ ನೆಟ್‌ವರ್ಕ್‌ ಸಮಸ್ಯೆ ಸಹಿತ ಹಲವು ಗಂಭೀರ ಸಮಸ್ಯೆಯನ್ನು ಬಗೆಹರಿಸಿ’ ಎಂದು ಸ್ಥಳೀಯ ಮುಖಂಡ ಮೆಸ್ಕಾಂ ನಿರ್ದೇಶಕ ಮುನಿಯಾಲು ದಿನೇಶ ಪೈ ಮನವಿ ಮಾಡಿದರು.

ಲೋಕೋಪಯೋಗಿ, ಮೆಸ್ಕಾಂ, ಶಿಕ್ಷಣ, ಕಂದಾಯ, ಪಂಚಾಯತ್‌ ರಾಜ್‌, ಪೊಲೀಸ್‌, ನೀರಾವರಿ, ಅರಣ್ಯ ಸೇರಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 115 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಮುಟ್ಲುಪಾಡಿ ಸತೀಶ ಶೆಟ್ಟಿ, ಸುರೇಂದ್ರ ಶೆಟ್ಟಿ, ಶಿವಪುರ ಸುರೇಶ ಶೆಟ್ಟಿ, ಕೆರೆಬೆಟ್ಟು ಸಂಜೀವ ಶೆಟ್ಟಿ, ಅಂಡಾರು ರಾಜಶೇಖರ್‌, ಅಕ್ಷಯ ಕುಮಾರ್‌, ಮಹಾಬಲ ಪೂಜಾರಿ, ರತ್ನಾಕರ ಪೂಜಾರಿ ಸಹಿತ ಹಲವರು ವಿವಿಧ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು.

ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಬಿ.ಎನ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್‌, ತಹಶೀಲ್ದಾರ್‌ ಪುರಂದರ್‌ ಕೆ, ತಾಲ್ಲೂಕು ಪಂಚಾಯಿತಿ ಕಾರ್ಯ
ನಿರ್ವಹಣಾಧಿಕಾರಿ ಶಶಿಧರ್‌ ಜಿ.ಕೆ, ಡಿಸಿಎಫ್‌ ಆಶಿಶ್‌ ರೆಡ್ಡಿ, ಗಣಪತಿ, ಎಸಿಎಫ್‌ ಫಾಜಲ್‌, ಭೂಮಾಪನ ಇಲಾಖೆ ಅಧಿಕಾರಿ ರವೀಂದ್ರನಾಥ್‌ ಇದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್‌ ವರಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದರು. ಪಡುಕುಡೂರಿನ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ, ರಸ್ತೆಯ ಅಪಾಯಕಾರಿ ತಿರುವಿನ ಸಮಸ್ಯೆ ಸಹಿತ ಸಮಸ್ಯೆಗಳಿಗೆ ಕಿವಿಯಾದರು.

ಪಡುಕುಡೂರು ಶಾಲಾ ಮಕ್ಕಳು ಮತ್ತು ಸ್ಥಳೀಯರು ಪ್ರಸ್ತುತಪಡಿಸಿದ ಮನರಂಜನಾ ಕಾರ್ಯಕ್ರಮ ವೀಕ್ಷಿಸಿದರು. ಬಳಿಕ ಅಧಿಕಾರಿಗಳ ತಂಡದೊಂದಿಗೆ ಪಡುಕುಡೂರು ಶಾಲೆಯಲ್ಲೇ ವಾಸ್ತವ್ಯ ಹೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT