ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಂ ಸಹಿ ನಕಲು ಮಾಡಿ ವಂಚನೆ: 3 ವರ್ಷ ಶಿಕ್ಷೆ

Last Updated 12 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಉಡುಪಿ: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ ಅವರ ಸಹಿಯನ್ನು ನಕಲು ಮಾಡಿ ವಂಚನೆ ಎಸಗಿದ ಆರೋಪಿ ನಿರಂಜನ್ ಎಂಬಾತನಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಕಠಿಣ ಸಂಜೆ ಹಾಗೂ ₹ 7,000 ದಂಡ ವಿಧಿಸಿದೆ.

ಆರೋಪಿ ನಿರಂಜನ್‌ ಉಡುಪಿ ತಾಲ್ಲೂಕಿನ ಕೊಡವೂರು ಗ್ರಾಮದವನು. ಈತ ಅಬ್ದುಲ್‌ ಕಲಾಂ ಅವರ ಸಹಿಯನ್ನು ನಕಲು ಮಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಲವರಿಗೆ ವಂಚನೆ ಎಸಗಿದ್ದಾನೆ.

ಕೆಲ ವರ್ಷಗಳ ಹಿಂದೆ ಆರೋಪಿಯು apj_abdulkalam@in.co ಎಂಬ ಹೆಸರಿನಲ್ಲಿ ಖಾತೆ ತೆರೆದು, ಅಬ್ದುಲ್‌ ಕಲಾಂ ಅವರಿಗೆ ಅಭಿನಂದನಾ ಪತ್ರವೊಂದನ್ನು ಕಳುಹಿಸಿದ್ದ. ಇದಕ್ಕೆ ಪ್ರತಿಯಾಗಿ ಕಲಾಂ ಅವರು ಕೃತಜ್ಞತಾ ಪತ್ರ ಕಳುಹಿಸಿದ್ದರು. ಕೃತಜ್ಞತಾ ಪತ್ರದಲ್ಲಿದ್ದ ಸಹಿಯನ್ನು ನಕಲು ಮಾಡಿದ ಆರೋಪಿ, ಅಮೇರಿಕನ್ ಎಂಜಿನಿಯರಿಂಗ್ ಆರ್ಗನೈಸೇಷನ್‌ ಕೊಡಮಾಡುವ ಹೂವೇರ್ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ, ಪ್ರಶಸ್ತಿಗೆ ಕಲಾಂ ಅವರೇ ಶಿಫಾರಸು ಮಾಡಿರುವಂತೆ ನಕಲಿ ಶಿಫಾರಸು ಪತ್ರವನ್ನು ಹಾಕಿದ್ದ.

ಜತೆಗೆ, ಎಪಿಜೆ ಅಬ್ದುಲ್‌ಕಲಾಂ ಹೆಸರಿನ ಐಡಿಯಿಂದ ನ್ಯೂಯಾರ್ಕ್‌ನ ಗೋಸ್ವಾಮಿ ಡಿ.ಯೋಗಿ ಎಂಬುವರಿಗೆ ಈ–ಮೇಲ್ ಕಳುಹಿಸಿ, ಭಾರತದಲ್ಲಿರುವ 50 ಎಂ.ಡಬ್ಲ್ಯು ಸೋಲಾರ್ ಥರ್ಮಲ್‌ ಪ್ರಾಜೆಕ್ಟ್‌ನ ವರದಿ ಕಳುಹಿಸುವಂತೆ ಒತ್ತಾಯಿಸಿದ್ದ. ಈ ವಿಚಾರ ಗುಪ್ತಚರ ವಿಭಾಗಕ್ಕೆ ತಿಳಿದು, ಹಿಂದಿನ ಜಿಲ್ಲಾ ಅಪರಾಧ ಹಾಗೂ ಗುಪ್ತವಾರ್ತೆ ವಿಭಾಗದ ಅಧಿಕಾರಿ ಶ್ರೀನಿವಾಸ್ ರಾಜ್ ದೂರು ನೀಡಿದ್ದರು. ವಿಚಾರಣೆ ವೇಳೆ ಆರೋಪಿ ತಪ್ಪೆಸಗಿದ್ದು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಂಜುನಾಥ್ ಅವರು ಶಿಕ್ಷೆ ವಿಧಿಸಿದ್ದಾರೆ.

ಸರ್ಕಾರದ ಪರವಾಗಿ ಹಿಂದಿನ ಸಹಾಯಕ ಸರ್ಕಾರಿ ಅಭಿಯೋಜಕರಾದ ಮಮ್ತಾಜ್ ಮತ್ತು ಈಗಿನ ಸಹಾಯಕ ಸರ್ಕಾರಿ ಅಭಿಯೋಜಕಿ ಕೆ.ಜಯಂತಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT