ಕಾಪು (ಪಡುಬಿದ್ರಿ): ಕಾಪು ಪುರಸಭೆಗೆ 2ನೇ ಸಾರ್ವತ್ರಿಕ ಚುನಾವಣೆಯ ಎರಡೂವರೆ ವರ್ಷದ ಬಳಿಕ ಮೀಸಲಾತಿ ಪ್ರಕಟಗೊಂಡಿದೆ.
2015ರಲ್ಲಿ ಕಾಪು, ಮಲ್ಲಾರು ಹಾಗೂ ಉಳಿಯಾರಗೋಳಿ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಅಸ್ತಿತ್ವಕ್ಕೆ ಬಂದ ಕಾಪು ಪುರಸಭೆಗೆ 2016ರಲ್ಲಿ ಚುನಾವಣೆ ನಡೆದಿತ್ತು. ಆದರೆ 2016ರಿಂದ 2021ರವರೆಗಿನ ಅವಧಿಯಲ್ಲಿ ಪುರಸಭೆಯಲ್ಲಿ 36 ತಿಂಗಳು ಮಾತ್ರ ಜನಪ್ರತಿನಿಧಿಗಳ ಆಡಳಿತವಿತ್ತು. ನಗರ ಸ್ಥಳೀಯ ಸಂಸ್ಥೆಗಳ 2ನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಮೀಸಲಾತಿ ಆಯ್ಕೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದ ಕಾರಣ, ಕಾಪು ಪುರಸಭೆಯ ಹಿಂದಿನ 5 ವರ್ಷಗಳ ಅವಧಿಯಲ್ಲಿ ಸುಮಾರು 222 ತಿಂಗಳು ಆಡಳಿತಾಧಿಕಾರಿ ಆಡಳಿತ ನಡೆಸುವಂತಾಗಿತ್ತು. ಪುರಸಭೆ ಅಸ್ತಿತ್ವಕ್ಕೆ ಬಂದ 9 ವರ್ಷದಲ್ಲಿ ಮೂವರು ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು, 7 ಆಡಳಿತಾಧಿಕಾರಿಗಳು ಹಾಗೂ ಐವರು ಮುಖ್ಯಾಧಿಕಾರಿಗಳು ಆಡಳಿತ ನಡೆಸಿದ್ದಾರೆ.
23 ಸ್ಥಾನ ಬಲದ ಪುರಸಭೆಯಲ್ಲಿ 12 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದ್ದು, ಹಿಂದಿನ ಅವಧಿಯಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ 7 ಸ್ಥಾನಗಳನ್ನು ಹೊಂದಿದೆ. ಮೊದಲ ಬಾರಿಗೆ ಜಾತ್ಯಾತೀತ ಜನತಾದಳ 1, ಎಸ್‌ಡಿಪಿಐನಿಂದ 3 ಜನ ಗೆದ್ದು ಸದಸ್ಯರಾಗಿದ್ದಾರೆ.
ಶಾಸಕರು, ಸಂಸದರ ಬೆಂಬಲ ಇಲ್ಲದೆಯೇ ಪುರಸಭೆಯಲ್ಲಿ 12 ಸದಸ್ಯರನ್ನು ಹೊಂದಿರುವ ಬಿಜೆಪಿ, ಜೆಡಿಎಸ್ ಮೈತ್ರಿಯಂದಾಗಿ 13ಕ್ಕೆ ಸಂಖ್ಯಾಬಲ ಹೆಚ್ಚಿಸಿಕೊಂಡಿದೆ. ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿಗೆ ಮೀಸಲು ನಿಗದಿಯಾಗಿದೆ. ಅದರಂತೆ ಮೈತ್ರಿಕೂಟ ಅಭ್ಯರ್ಥಿ ಅಧ್ಯಕ್ಷ ಸ್ಥಾನ ಪಡೆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಇಲ್ಲದೆ ಕಾಂಗ್ರೆಸ್, ಎಸ್‌ಡಿಪಿಐಗೆ ಲಭಿಸುವ ಸಾಧ್ಯತೆ ಇದೆ.
ಅಧ್ಯಕ್ಷ ಸ್ಥಾನಕ್ಕೆ 4 ಮಂದಿ ಅರ್ಹರು:
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ನಾಲ್ವರು ಅರ್ಹರಿದ್ದು, ಹಿರಿಯ ಸದಸ್ಯೆ ಮೋಹಿನಿ ಶೆಟ್ಟಿ ಸಹಿತ ಹರಿಣಾಕ್ಷಿ ದೇವಾಡಿಗ, ಸರಿತಾ ಪೂಜಾರಿ, ಲತಾ ವಿ.ದೇವಾಡಿಗ ಇದ್ದಾರೆ. ಮೋಹಿನಿ ಶೆಟ್ಟಿ 2ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಯಿಲ್ಲದ ಕಾರಣ ಕಾಂಗ್ರೆಸ್‌ನ ಸತೀಶ್ಚಂದ್ರ, ಎಸ್‌ಡಿಪಿಐನ ಸರಿತಾ ಶಿವಾನಂದ ಅರ್ಹರಾಗಿದ್ದಾರೆ.
ಶನಿವಾರ ಪಕ್ಷದ ಸಭೆ ಕರೆದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಬಗ್ಗೆ ಚರ್ಚಿಸಲಾಗುವುದು. ಅಧ್ಯಕ್ಷಗಾದಿಗೆ ಏರಲು ಪಕ್ಷದ ನಾಲ್ವರು ಮಹಿಳಾ ಸದಸ್ಯರೂ ಅರ್ಹರಾಗಿದ್ದಾರೆ. ಎನ್‌ಡಿಎ ಮೈತ್ರಿ ಇಲ್ಲಿಯೂ ಮುಂದುವರೆಯಲಿದ್ದು, ಜೆಡಿಎಸ್ ಸದಸ್ಯ ನಮ್ಮೊಡನಿದ್ದಾರೆ ಎಂದು ಬಿಜೆಪಿ ಕಾಪು ಮಂಡಲ ಅಧ್ಯಕ್ಷ
ಜಿತೇಂದ್ರ ಶೆಟ್ಟಿ ತಿಳಿಸಿದರು.
ಮೈತ್ರಿ ಮುಂದುವರೆಯಲಿದ್ದು, ಎನ್‌ಡಿಎ ಒಕ್ಕೂಟದ ಅಭ್ಯರ್ಥಿ ಅಧ್ಯಕ್ಷರಾಗಲಿದ್ದಾರೆ. ಕಾಪು ವಿಧಾನಸಭಾ ಕ್ಷೇತ್ರದ ರಾಜಧಾನಿಯಂತಿರುವ ಪುರಸಭೆ ಅಡಳಿತ ವಹಿಸಿಕೊಂಡವರು ದೂರದೃಷ್ಟಿಯಿಟ್ಟು ಕೆಲಸ ಮಾಡಬೇಕು ಎಂದು ಜೆಡಿಎಸ್ ಉಡುಪಿ ಜಿಲ್ಲೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ತಿಳಿಸಿದರು.
ಉಪಾಧ್ಯಕ್ಷ ಸ್ಥಾನಕ್ಕೆ ಅವಕಾಶವಿದೆ. ಚುನಾವಣಾ ದಿನ ನಿಗದಿಯಾದ ಬಳಿಕ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಅಮೀರ್ ಮುಹಮ್ಮದ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.