ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ಜಿಲ್ಲೆಯ ರೈತರ ಸಾಧನೆ ದೇಶಕ್ಕೆ ಮಾದರಿ

ಚಿತ್ರದುರ್ಗ ಜಿಲ್ಲೆಯ ರೈತರ ಪರಿಶ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ
Last Updated 7 ಮೇ 2018, 9:24 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ನೂರು ವರ್ಷಗಳಲ್ಲಿ 70 ವರ್ಷಗಳಷ್ಟು ತೀವ್ರ ಬರಗಾಲದ ನಡುವೆಯೂ ಈ ಜಿಲ್ಲೆಯ ರೈತರು ತೋಟಗಾರಿಕಾ ಬೆಳೆ ಬೆಳೆಯುವುದರಲ್ಲಿ ಉನ್ನತ ಸಾಧನೆ ಮಾಡಿದ್ದು, ಇಲ್ಲಿನ ರೈತರ ಶ್ರಮ ದೇಶಕ್ಕೆ ಮಾದರಿ’ ಎಂದು ಪ್ರಧಾನಿ ನರೇಂದ್ರ ಮೋದಿ ರೈತರನ್ನು ಶ್ಲಾಘಿಸಿದರು.

ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ಘಟಕ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬರಗಾಲದಲ್ಲೂ ಅಂಜೂರ, ಮಾವು, ಹೂವು, ಸಪೋಟ ಸೇರಿ ಹಲವು ಬೆಳೆಗಳನ್ನು ಬೆಳೆಯುತ್ತಾ ಇಲ್ಲಿನ ರೈತರು ತೋಟಗಾರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.

‘ಇಂಥ ರೈತರ ಪರಿಶ್ರಮಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ಅಗತ್ಯ ಶೈತ್ಯಾಗಾರ, ಗೋದಾಮುಗಳನ್ನು ನಿರ್ಮಾಣ ಮಾಡಲಿದೆ’ ಎಂದು ಭರವಸೆ ನೀಡಿದರು.

'ಕೋಟೆನಾಡು ಚಿತ್ರದುರ್ಗದ ಜನತೆಗೆ ನನ್ನ ನಮಸ್ಕಾರಗಳು' ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, 49 ನಿಮಿಷಗಳ ನಿರರ್ಗಳ ಭಾಷಣದ ಆರಂಭದಲ್ಲಿ ವೀರ ಮದಕರಿನಾಯಕ, ಓಬವ್ವ ಅವರನ್ನು ಸ್ಮರಿಸಿದರು. ಮುರುಘಾ ಶರಣರು, ಮಾದಾರ ಚನ್ನಯ್ಯ ಅವರಿಗೆ ನಮಸ್ಕರಿಸಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ಮದಕರಿನಾಯಕ, ವೀರವನಿತೆ ಓಬವ್ವ ಶತ್ರುಗಳ ವಿರುದ್ಧ ಹೋರಾಟ ಮಾಡಿದ ಕಥೆಗಳನ್ನು ಕೇಳಿದ್ದೇನೆ. ಇಂಥ ಸಾಧಕರನ್ನು ಬಿಟ್ಟು ಕಾಂಗ್ರೆಸ್ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಇತಿಹಾಸ ತಿರುಚಿ, ಸುಲ್ತಾನರ ಜಯಂತಿ ಆಚರಿಸುವ ಮೂಲಕ ಚಿತ್ರದುರ್ಗಕ್ಕೆ ಅಪಮಾನ ಮಾಡಿದೆ’ ಎಂದು ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರಾಜ್ಯದಲ್ಲಿ ಹಲವು ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಆ ಯೋಜನೆಗಳನ್ನು ನಿರ್ಲಕ್ಷ್ಯಿಸಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತಂದರೆ, ಕೇಂದ್ರ ಸರ್ಕಾರ ಪೂರ್ಣ ಸಹಕಾರ ನೀಡಿ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ’ ಎಂದು ಭರವಸೆ ನೀಡಿದರು.

‘ಕೇಂದ್ರ ಸರ್ಕಾರ ಜಾತಿ, ಮತ ವರ್ಗಭೇದವಿಲ್ಲದೇ ಆಳ್ವಿಕೆ ನಡೆಸುತ್ತಿದೆ. ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗದವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಾಜಪೇಯಿ ಆಡಳಿತದಲ್ಲಿ ಜಾತಿ ಧರ್ಮ ನೋಡದೆ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ರಾಷ್ಟ್ರಪತಿ ಮಾಡಿದ್ದರು. ನಾನು ಪ್ರಧಾನಿ ಆದ ಮೇಲೆ ದಲಿತ ಸಮುದಾಯಕ್ಕೆ ಸೇರಿದ್ದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟಪತಿ ಮಾಡಿದ್ದೇವೆ’ ಎಂದು ಉದಾಹರಿಸಿದರು.

‘ನಮ್ಮ ಸರ್ಕಾರ ದಲಿತರ ಪರ ಆದಿವಾಸಿಗಳ ಪರ ಇರುವುದನ್ನು ನೋಡಿದ ಕಾಂಗ್ರೆಸ್‌ಗೆ ಈಗ ನಡುಕ ಹುಟ್ಟಿದೆ. ಅವರ ಕಾಲ ಕೆಳಗಿನ ಮಣ್ಣು ಕುಸಿಯುತ್ತಿದೆ. ದಲಿತರು ಹಾಗೂ ಹಿಂದುಳಿದವರ ಹೆಸರಿನಲ್ಲಿ ಮಾಡುತ್ತಿದ್ದ ರಾಜಕೀಯ ನಡೆಯದು. ದಲಿತರ ಮೇಲೆ ಆಗುತ್ತಿದ್ದ ಶೋಷಣೆಗಳನ್ನು ನಾವು ಅರಿತಿದ್ದೇವೆ. ಅವರ ರಕ್ಷಣೆಗಾಗಿ ಇದ್ದ ಕಾನೂನನ್ನು ಬಲಪಡಿಸಿದ್ದೇವೆ’ ಎಂದರು.

‘ಕರ್ನಾಟಕದ ಬಿಜೆಪಿ ಕೂಡ ಈ ಬಾರಿಯ ಪ್ರಣಾಳಿಕೆಯಲ್ಲಿ ಪರಿಶಿಷ್ಟ ಪಂಗಡದವರಿಗೆ ಮದಕರಿ ನಾಯಕ ವಸತಿ ಯೋಜನೆ ಹಾಗೂ ಪರಿಶಿಷ್ಟ ಜಾತಿಯವರಿಗಾಗಿ ಮಾದಾರ ಚನ್ನಯ್ಯ ವಸತಿ ಯೋಜನೆ ಜಾರಿಗೊಳಿಸಿದೆ. ಇದು ಅಭಿನಂದನೀಯ’ ಎಂದು ಶ್ಲಾಘಿಸಿದರು.

‘ನಮ್ಮ ಪಕ್ಷ ಅಂಗವಿಕಲರ ಕಲ್ಯಾಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅವರ ಉದ್ಯೋಗಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನ ಮಾಡಿದೆ. ಆದರೆ, ಕಾಂಗ್ರೆಸ್ ಸರ್ಕಾರ 1992ರಿಂದ 2014ರವರೆಗೂ ಅಂಗವಿಕಲರಿಗಾಗಿ 57 ಕ್ಯಾಂಪ್‌
ಗಳನ್ನು ಮಾಡಿತ್ತು. ನಾವು ಮೂರು ವರ್ಷಗಳಲ್ಲಿ 5 ಸಾವಿರಕ್ಕೂ ಹೆಚ್ಚು ಶಿಬಿರಗಳನ್ನು ಮಾಡಿ ಅಂಗವಿಕಲರ ಅವಶ್ಯಕತೆಗಳಿಗೆ ನೆರವಾಗುವ ಮೂಲಕ ಸಂವೇದನಾಶೀಲವಾಗಿ ಸ್ಪಂದಿಸಿದ್ದೇವೆ’ ಎಂದರು.

ಜಿಲ್ಲೆಯ ರಾಷ್ಟ್ರೀಯ ಉಸ್ತುವಾರಿಯೂ ಆಗಿರುವ ಬಿಹಾರದ ಆರೋಗ್ಯ ಸಚಿವ ಮಂಗಲ್‌ ಪಾಂಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್‌.ನವೀನ್‌, ಹೊಳಲ್ಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಚಂದ್ರಪ್ಪ, ಚಳ್ಳಕೆರೆ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ, ಹೊಸದುರ್ಗ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌, ಮುಖಂಡ ಜಿ.ಎಂ.ಸುರೇಶ್‌ ಇದ್ದರು.

**
ನಮ್ಮ ಸರ್ಕಾರ ದಲಿತರ, ಆದಿವಾಸಿಗಳ ಪರ ಇರುವುದನ್ನು ನೋಡಿದ ಕಾಂಗ್ರೆಸಿಗೆ ಈಗ ನಡುಕ ಹುಟ್ಟಿದೆ. ದಲಿತರ ರಕ್ಷಣೆಗೆ ಕಾನೂನನ್ನು ಬಲಪಡಿಸಿದ್ದೇವೆ
– ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT