ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾಂಪಿಯನ್’ ಜರ್ಮನಿಗೆ ಮೆಕ್ಸಿಕೊ ‌ಸವಾಲು

ಎಫ್‌ ಗುಂಪಿನ ಪಂದ್ಯ: ಥಾಮಸ್‌ ಮುಲ್ಲರ್, ಟೋನಿ ಕ್ರೂಸ್‌ ಮೇಲೆ ಎಲ್ಲರ ಕಣ್ಣು
Last Updated 16 ಜೂನ್ 2018, 19:55 IST
ಅಕ್ಷರ ಗಾತ್ರ

ಮಾಸ್ಕೊ (ರಾಯಿಟರ್ಸ್‌): ಹಾಲಿ ಚಾಂಪಿಯನ್‌ ಜರ್ಮನಿ ತಂಡವು ಭಾನುವಾರದ ಪಂದ್ಯದಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದೆ.

ಇಲ್ಲಿನ ಲುಜ್‌ನಿಕಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಜರ್ಮನಿಯು ಸುಲಭ ಜಯದ ನಿರೀಕ್ಷೆಯಲ್ಲಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿ ಇದೆ.

12ನೇ ಬಾರಿ ಮುಖಾಮುಖಿಯಾಗುತ್ತಿರುವ ಈ ತಂಡಗಳ ಹೋರಾಟದಲ್ಲಿ ಜರ್ಮನಿಗೆ ಆರು ಬಾರಿ ಜಯ ಸಿಕ್ಕಿದೆ.

ಐದನೇ ಬಾರಿ ಟ್ರೋಫಿಗೆ ಮುತ್ತಿಕ್ಕುವ ವಿಶ್ವಾಸದಲ್ಲಿರುವ ಜರ್ಮನಿ ತಂಡವು ಎಲ್ಲ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ಕೇವಲ ತಾರಾ ಆಟಗಾರರ ಮೇಲೆ ಅವಲಂಬಿತವಾಗದ ತಂಡ ಎಂದೇ ಖ್ಯಾತಿ ಗಳಿಸಿರುವ ಜರ್ಮನಿ ತಂಡವು ಸಂಘಟಿತ ಹೋರಾಟದಿಂದ ಇತ್ತೀಚಿನ ಹಲವು ಪ್ರಮುಖ ಟೂರ್ನಿಗಳಲ್ಲಿ ಅಮೋಘ ಸಾಧನೆ ಮಾಡಿದೆ.

ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್‌, ಫ್ರಾನ್ಸ್‌ ಹಾಗೂ ಸ್ಪೇನ್‌ ತಂಡಗಳೊಂದಿಗಿನ ಪಂದ್ಯಗಳನ್ನು ಡ್ರಾ ಮಾಡಿಕೊಂಡಿರುವ ಜರ್ಮನಿಯು ಈ ಪಂದ್ಯದಲ್ಲಿ ಹೊಸ ಯೋಜನೆಯೊಂದಿಗೆ ಅಂಗಳಕ್ಕಿಳಿಯುವ ಸಾಧ್ಯತೆ ಇದೆ.

ಜೋಕಿಮ್‌ ಲೋವ್‌ ಅವರ ತರಬೇತಿಯಲ್ಲಿ ಪಳಗಿರುವ ಈ ತಂಡವು ಥಾಮಸ್‌ ಮುಲ್ಲರ್‌, ಟೋನಿ ಕ್ರೂಸ್‌ ಅವರಂತಹ ಪ್ರಮುಖ ಆಟಗಾರರನ್ನು ಹೊಂದಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಅನುಭವಿ ಆಟಗಾರ ಮೀಸತ್‌ ಓಜಿಲ್‌ ಆಡುವ ಬಗ್ಗೆ ಖಚಿತವಾಗಿಲ್ಲ. ಮೊದಲನೇ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸದೇ ವಿಶ್ರಾಂತಿ ನೀಡುವ ಉದ್ದೇಶವನ್ನು ಜೋಕಿಮ್‌ ಹೊಂದಿದ್ದಾರೆ.

2014ರ ವಿಶ್ವಕಪ್‌ನಲ್ಲಿ ಚಿನ್ನದ ಕೈಗವಸು ಗೆದ್ದಿದ್ದ ಗೋಲ್‌ಕೀಪರ್‌ ಮ್ಯಾನುಯಲ್‌ ನುಯರ್‌ ಅವರು ಮೆಕ್ಸಿಕೊದ ಮುಂಚೂಣಿ ವಿಭಾಗದ ಆಟಗಾರರನ್ನು ತಡೆಯಬಲ್ಲರು.

ಈ ಪಂದ್ಯದಲ್ಲಿ ಟಿಮೊ ವರ್ನರ್‌ ಅವರೊಂದಿಗೆ ಮಾರಿಯೊ ಗೊಮೆಜ್‌ ಅವರು ಜರ್ಮನಿ ತಂಡದ ಮುಂಚೂಣಿಯ ವಿಭಾಗದ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಇನ್ನೂ ಎದುರಾಳಿ ಮೆಕ್ಸಿಕೊ ತಂಡ ಕೂಡ ಜರ್ಮನಿಯ ತಂತ್ರಕ್ಕೆ ಪ್ರತಿತಂತ್ರ ಹೆಣೆದಿದೆ. ರ‍್ಯಾಂಕಿಂಗ್‌ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿರುವ ಮೆಕ್ಸಿಕೊಗೆ ಇತ್ತೀಚಿಗೆ ಆಡಿದ ಹಲವು ಪಂದ್ಯಗಳಲ್ಲಿ ಮಿಶ್ರಫಲ ಸಿಕ್ಕಿದೆ.

ಆದರೆ, ಜುವಾನ್‌ ಕಾರ್ಲೋಸ್‌ ಓಸಾರಿಯೊ ಅವರ ತರಬೇತಿ ಪಡೆದಿರುವ ತಂಡದ ಆಟಗಾರರು ಸಂಘಟಿತ ಹೋರಾಟದ ಮೂಲಕ ಜರ್ಮನಿಯನ್ನು ಕಟ್ಟಿಹಾಕುವ ವಿಶ್ವಾಸದಲ್ಲಿದ್ದಾರೆ.

**

2014ರ ಚಾಂಪಿಯನ್‌ ಎಂಬ ಅತಿಯಾದ ವಿಶ್ವಾಸದಲ್ಲಿ ತಂಡ ಆಡುವುದಿಲ್ಲ. ಇದು ಕೂಡ ನಮಗೆ ಹೊಸ ಟೂರ್ನಿ. ಎಂದಿನಂತೇ ಸಂಘಟಿತ ಹೋರಾಟವೇ ನಮ್ಮ ಶಕ್ತಿ.

–ಜೋಕಿಮ್‌ ಲೋವ್‌, ಜರ್ಮನಿ ತಂಡದ ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT