ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ–ಮಲ್ಪೆ, ಮಂಗಳೂರು–ಕುಂದಾಪುರ ರೈಟ್‌

ಕರಾವಳಿ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಪೂರ್ಣ: ಸಂಚಾರಕ್ಕೆ ಮುಕ್ತ
Last Updated 27 ಅಕ್ಟೋಬರ್ 2018, 16:13 IST
ಅಕ್ಷರ ಗಾತ್ರ

ಉಡುಪಿ: ಮಂಗಳೂರು–ಕುಂದಾಪುರ ಹಾಗೂ ಉಡುಪಿ–ಮಲ್ಪೆ ಮಾರ್ಗದಲ್ಲಿ ಸಾಗಬೇಕಿರುವ ವಾಹನಗಳು ಇನ್ಮುಂದೆ ಸುತ್ತಿಬಳಸಿ ಹೋಗಬೇಕಿಲ್ಲ. ಕರಾವಳಿ ಜಂಕ್ಷನ್‌ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ.‌

2015ರ ಅಂತ್ಯದಲ್ಲಿ ಆರಂಭವಾದ 800 ಮೀಟರ್ ಮೇಲ್ಸೇತುವೆ ಕಾಮಗಾರಿ ಸತತ ಮೂರು ವರ್ಷಗಳ ಕಾಲ ಕುಂಟುತ್ತಾ ತೆವಳುತ್ತ ಸಾಗಿತ್ತು. ಹಲವು ಸಂಘ–ಸಂಸ್ಥೆಗಳ ಪ್ರತಿಭಟನೆಗೆ ಕಾರಣವಾಗಿತ್ತು. ಭೀಕರ ಅಪಘಾತಗಳಿಗೆ ಸಾಕ್ಷಿಯಾಗಿತ್ತು. ಪ್ರತಿನಿತ್ಯ ಸವಾರರ ನಿಂದನೆಗಳಿಗೆ ಗುರಿಯಾಗಿತ್ತು.

ಕೊನೆಗೂ ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತ ತಲುಪಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಶುಕ್ರವಾರದಿಂದ ಮೇಲ್ಸೇತುವೆ ಮೇಲೆ ವಾಹನಗಳು ಓಡಾಡಲು ಆರಂಭಿಸಿವೆ. ಮಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ವಾಹನಗಳು ಸೇವಾ ರಸ್ತೆಯಲ್ಲಿ ಸಾಗುವ ಬದಲು, ನೇರವಾಗಿ ಮೇಲ್ಸೇತುವೆಯಲ್ಲಿ ಹೋಗಬಹುದು.

ಹಾಗೆಯೇ, ಉಡುಪಿಯಿಂದ ಮಲ್ಪೆಗೆ ಹೋಗುವ ವಾಹನಗಳು ಸೇವಾ ರಸ್ತೆಯನ್ನು ಬಳಸಿಕೊಂಡು ಹೋಗುವ ಬದಲು ಕೆಳಸೇತುವೆ ಮೂಲಕ ನೇರವಾಗಿ ಸಾಗಬಹುದು. ಕೆಳಸೇತುವೆ ಬಳಿ ಅಡ್ಡಲಾಗಿ ಹಾಕಿದ್ದ ಸಿಮೆಂಟ್ ಬ್ಲಾಕ್‌ಗಳನ್ನು ತೆರವುಗೊಳಿಸಲಾಗಿದ್ದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಕಾಮಗಾರಿ ವಿಳಂಬ:

ನವಯುಗ ಕನ್‌ಸ್ಟ್ರಕ್ಷನ್‌ ಕಂಪೆನಿಯು ಕಾಮಗಾರಿ ಗುತ್ತಿಗೆ ತೆಗೆದುಕೊಂಡಿತ್ತು. 2 ವರ್ಷಗಳ ಹಿಂದೆಯೇ ಕಾಮಗಾರಿ ಮುಕ್ತಾಯವಾಗಬೇಕಿತ್ತು. ಆದರೆ, ಹಲವು ಕಾರಣಗಳಿಂದಾಗಿ ಪೂರ್ಣಗೊಂಡಿರಲಿಲ್ಲ. ಇದರಿಂದಾಗಿ ಸವಾರರು ಸಮಸ್ಯೆ ಎದುರಿಸಬೇಕಾಗಿತ್ತು.

ಹಿಂದೆ, ಉಡುಪಿಯಿಂದ ಮಲ್ಪೆಗೆ ಸಾಗಬೇಕಾದರೆ ಕರಾವಳಿ ಜಂಕ್ಷನ್‌ ಬಳಿ ಎಡ ತಿರುವು ತೆಗೆದುಕೊಂಡು 200 ಮೀಟರ್ ಸಾಗಿ, ಬಲಕ್ಕೆ ತಿರುಗಿ ಸೇವಾ ರಸ್ತೆ ಮೂಲಕ ಮಲ್ಪೆಗೆ ಹೋಗಬೇಕಿತ್ತು. ಕಿರಿದಾದ ರಸ್ತೆಯಲ್ಲಿ ಹೋಗಲುಹರಸಾಹಸ ಪಡಬೇಕಿತ್ತು. ಜತೆಗೆ ಭಾರಿ ವಾಹನಗಳ ಸಂಚಾರ ಹಾಗೂ ಭಾರಿ ಮಳೆಯಿಂದಾಗಿ ಸೇವಾ ರಸ್ತೆ ಸ‌ಂಪೂರ್ಣ ಹದಗೆಟ್ಟಿತ್ತು.

ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಡಿಗಳಲ್ಲಿ ಬಿದ್ದು ಹಲವರು ಗಂಭೀರವಾಗಿ ಗಾಯಮಾಡಿಕೊಂಡಿದ್ದರು. ಮೇಲ್ಸೇತುವೆ ನಿರ್ಮಾಣದಿಂದ ಅಪಘಾತ ಪ್ರಮಾಣಗಳು ಕಡಿಮೆಯಾಗಬಹುದು ಎನ್ನುತ್ತಾರೆ ಸ್ಥಳೀಯರು.

ಕುಂದಾಪುರದಿಂದ ಮಂಗಳೂರಿಗೆ ಸಾಗಬೇಕಾದರೆ 800 ಮೀಟರ್ ಸೇವಾ ರಸ್ತೆಯಲ್ಲಿ ಸಾಗಿ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಬೇಕಿತ್ತು. ಹೀಗೆ ಸಾಗಬೇಕಾದರೆ ರಸ್ತೆಗಳು ಕೂಡುವ ಕರಾವಳಿ ಜಂಕ್ಷನ್‌ ಬಳಿ ಟ್ರಾಫಿಕ್‌ ಹೆಚ್ಚಾಗಿ ವಾಹನ ಸವಾರರು ಸಮಸ್ಯೆ ಎದುರಿಸುತ್ತಿದ್ದರು. ಮಳೆಗಾಲದಲ್ಲಂತೂ ಸೇವಾರಸ್ತೆ ಸಂಪೂರ್ಣ ಜಲಾವೃತಗೊಂಡು ವಾಹನಗಳ ಸಂಚಾರವೇ ಬಂದ್ ಆಗುತ್ತಿತ್ತು. ಈಗ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ ಎನ್ನುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT