ಕಾರ್ಕಳ: ‘ಊರು ಬದಲಾಗುತ್ತಾ ಹೋದಂತೆಲ್ಲಾ, ತುಳು ಭಾಷೆಯನ್ನು ಮಾತನಾಡುವ ವೈಖರಿಯೂ ಬದಲಾಗುತ್ತಾ ಹೋಗುತ್ತದೆ’ ಎಂದು ಸಿನಿಮಾ ನಟ, ರಂಗಭೂಮಿ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಹೇಳಿದರು.
ಇಲ್ಲಿನ ಮಂಜುನಾಥ ಪೈ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಐಕ್ಯೂಎಸಿ, ಲಲಿತಕಲಾ ಸಂಘ ಮತ್ತು ಸಾಹಿತ್ಯ ಸಂಘದ ಸಂಯೋಜನೆಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಜೈ ತುಲುನಾಡ್ ಸಹಯೋಗದಲ್ಲಿ ‘ಬಲೆ ತುಲು ಲಿಪಿ ಕಲ್ಪುಗ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಪ್ರಾಂತೀಯ ವಿಭಿನ್ನತೆ ತುಳು ಭಾಷೆಯ ಬರವಣಿಗೆಗೆ ಅನ್ವಯವಾಗುವುದಿಲ್ಲ. ಎಲ್ಲಿ ಹೋದರೂ ತುಳು ಭಾಷೆಯ ಬರವಣಿಗೆಯ ಶೈಲಿ ಒಂದೇ ರೀತಿ ಆಗಿರುತ್ತದೆ. ಅಂತಹ ತುಳು ಭಾಷೆಯ ಬರವಣಿಗೆಯ ತರಬೇತಿ ಇಲ್ಲಿ ನಡೆಯುತ್ತಿರುವುದು ತುಳು ಭಾಷೆಗೆ ಶಕ್ತಿ ನೀಡಿದಂತೆ’ ಎಂದರು.
ತುಳುನಾಡ್ ಸಂಘಟನೆಯ ಅಧ್ಯಕ್ಷ ವಿಶು. ಶ್ರೀಕೇರ ಮಾತನಾಡಿ, ‘ಬಲೆ ತುಳು ಲಿಪಿ ಕಲ್ಪುಗ’ ಎನ್ನುವುದು ಶಿಕ್ಷಣ ಕ್ರಾಂತಿ, ತುಳು ಭಾಷೆಯಲ್ಲಿ ಬದುಕು ಕಟ್ಟುವ ಕೆಲಸ ಆಗಬೇಕು, ರಾಜ್ಯದ 2ನೇ ಆಡಳಿತ ಭಾಷೆ ಆಗಬೇಕು. ತುಳುನಾಡಿನ ಸಂದಿ, ಪಾರ್ದನದ ಮಹತ್ವವನ್ನೂ ನಾವು ಅರಿತುಕೊಳ್ಳಬೇಕು’ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕಿರಣ್ ಎಂ ಅಧ್ಯಕ್ಷತೆ ವಹಿಸಿದ್ದರು.
ಸ್ನಾತಕೋತ್ತರ ವಿಭಾಗದ ಸಂಚಾಲಕ ವಿದ್ಯಾಧರ್ ಹೆಗ್ಡೆ ಎಸ್, ‘ತುಳು ಲಿಪಿ ಕಲಿಕೆಯನ್ನು ಎಲ್ಲಾ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ತುಳು ಭಾಷೆಗೆ ನಾವು ಗೌರವ ನೀಡಬೇಕು’ ಎಂದರು.
ಕಾಲೇಜಿನ ಲಲಿತಕಲಾ ಸಂಘದ ಸಂಚಾಲಕ ಪ್ರೊ. ಮೈತ್ರಿ ಬಿ ಸ್ವಾಗತಿಸಿದರು. ಜೈ ತುಲುನಾಡ್‌ನ ಅಕ್ಷತಾ ಪ್ರಸ್ತಾವಿಕವಾಗಿ ಮಾತನಾಡಿದರು. ಸಾಹಿತ್ಯ ಸಂಘದ ಸಂಚಾಲಕ ಸುದರ್ಶನ್ ವಂದಿಸಿದರು. ಅಜಿತ್ ಸಾಲ್ಯಾನ್ ನಿರೂಪಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಪ್ರೊ. ಸುಷ್ಮಾ ರಾವ್ ಕೆ., ಪ್ರಾಧ್ಯಾಪಕ ಗಣೇಶ್ ಎಸ್., ಜಯಭಾರತಿ, ಅವಿನಾಶ್, ಪ್ರಸನ್ನ ಕುಮಾರ್ ಹಾಗೂ ರಾಮ ಮೂರ್ತಿ, ತುಳುನಾಡ್ ಸಂಘಟನೆಯ ಸಹ ಸಂಘಟನಾ ಕಾರ್ಯದರ್ಶಿ ಶೇಖರ್ ಶ್ರೀಗಂಗೆ, ತುಳು ಲಿಪಿ ಶಿಕ್ಷಕ ಪ್ರಶಾಂತ್ ಪೂಜಾರಿ ನಂದಳಿಕೆ ಹಾಗೂ ದೀಕ್ಷಾ, ಪವಿತ್ರ ಕೋಟ್ಯಾನ್ ಹಾಗೂ ಜೈ ತುಳುನಾಡ್ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.
Quote - ಯುನೆಸ್ಕೋ 2050ರ ಸಮಯಕ್ಕೆ ನಾಶ ಆಗುವ ಎಲ್ಲಾ ಭಾಷೆಯ ಪಟ್ಟಿಯನ್ನು 2010ರಲ್ಲಿ ಬಿಡುಗಡೆ ಮಾಡಿದೆ. ಆ ಪಟ್ಟಿಯಲ್ಲಿ ತುಳುಭಾಷೆ ಕೂಡ ಇತ್ತು ಎನ್ನುವುದು ನಮಗೆ ಬೇಸರದ ಸಂಗತಿ ಸುಮಂತ್ ಹೆಬ್ರಿ ತುಳುನಾಡ್ ಸಂಘಟನೆಯ ಸಂಘಟನಾ ಕಾರ್ಯದರ್ಶಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.