ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿ ಮಲೆನಾಡಿನಲ್ಲಿ ಕೈ ಬಲಪಡಿಸಲು ಯಾತ್ರೆ: ಆರ್‌.ವಿ.ದೇಶಪಾಂಡೆ

ಕರಾವಳಿ ಪ್ರಜಾಧ್ವನಿ ಯಾತ್ರೆ 5ರಿಂದ
Last Updated 3 ಫೆಬ್ರುವರಿ 2023, 12:56 IST
ಅಕ್ಷರ ಗಾತ್ರ

ಉಡುಪಿ: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕಾಂಗ್ರೆಸ್‌ ಬಲ ವೃದ್ಧಿಗೆ ಫೆ.5ರಿಂದ ‘ಕರಾವಳಿ ಪ್ರಜಾಧ್ವನಿ ಯಾತ್ರೆ’ ಯಾತ್ರೆ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ 26 ವಿಧಾನಸಭಾ ಕ್ಷೇತ್ರಗಳಲ್ಲಿ ಕರಾವಳಿ ಪ್ರಜಾಧ್ವನಿ ಜಾಥಾ ಸಂಚರಿಸಲಿದೆ. ಫೆ.5ರಂದು ಯಾತ್ರೆಗೆ ಸುಳ್ಯದಲ್ಲಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಉಡುಪಿಯಲ್ಲಿ ಫೆ.7ರಿಂದ ಯಾತ್ರೆ ಆರಂಭವಾಗಲಿದ್ದು, ಕಾಪು, ಕುಂದಾಪುರ ತಾಲ್ಲೂಕುಗಳಿಗೆ ಸಾಗಲಿದೆ. ಬಳಿಕ ಮಲೆನಾಡು ಪ್ರವೇಶಿಸಲಿದ್ದು ಕಾಂಗ್ರೆಸ್‌ ಪಕ್ಷವನ್ನು ಬಲಗೊಳಿಸಲಾಗುವುದು ಎಂದು ಹೇಳಿದರು.

ಹಿಂದೆ ಕರಾವಳಿ ಹಾಗೂ ಮಲೆನಾಡು ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎರಡೂ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿತ್ತು. ಭಾರಿ ನಿರೀಕ್ಷೆ ಹುಟ್ಟಿಸಿ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ಸರ್ಕಾರ ಕರಾವಳಿ ಹಾಗೂ ಮಲೆನಾಡು ಭಾಗಗಳನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ.

ಬಿಜೆಪಿ ಸರ್ಕಾರದ ನಾಲ್ಕು ವರ್ಷಗಳ ಆಡಳಿತ ಕಂಡು ಕರಾವಳಿ ಹಾಗೂ ಮಲೆನಾಡು ಜನರು ಭ್ರಮನಿರಸನಗೊಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದರು.

ಕರಾವಳಿಯಲ್ಲಿ ಇಂದಿಗೂ ಮೀನುಗಾರರ ಪ್ರಮುಖ ಬೇಡಿಕೆಗಳಿಗೆ ಬಿಜೆಪಿ ಸರ್ಕಾರ ಸ್ಪಂದಿಸಿಲ್ಲ. ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಎಲ್ಲ ಕ್ಷೇತ್ರಗಳಲ್ಲೂ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ದೇಶ ಹಾಗೂ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಭ್ರಷ್ಟಾಚಾರ ಮಿತಿಮೀರಿದೆ. ಅಭಿವೃದ್ಧಿ ಕಾಮಗಾರಿಗಳು, ಯೋಜನೆಗಳು ಅನುಷ್ಠಾನಗೊಳ್ಳುತ್ತಿಲ್ಲ. ಬಿಜೆಪಿಯ ಕೆಟ್ಟ ಆಡಳಿತ ನೋಡಿ ಕಾಂಗ್ರೆಸ್ ಪಕ್ಷದತ್ತ ಮತದಾರರು ವಾಲುತ್ತಿದ್ದಾರೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಯಾದ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ಗ್ರಾಮೀಣ ಭಾಗದ ಬಡವರಿಗೆ ಆರ್ಥಿಕ ಶಕ್ತಿ ತುಂಬುವ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಲಾಗಿದೆ. ಬಿಜೆಪಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.

ದೇಶದಲ್ಲಿ 5 ಕೋಟಿಗೂ ಹೆಚ್ಚು ನಿರುದ್ಯೋಗಿಗಳು ಇದ್ದು ಇಂತಹ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಬಿಜೆಪಿ ಸರ್ಕಾರ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದ್ದು ಅಭಿವೃದ್ಧಿ ಹಾಗೂ ರಚನಾತ್ಮಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ನವೀನ್ ಡಿಸೋಜ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನರಸಿಂಹಮೂರ್ತಿ, ಮುಖಂಡ ಬಿ. ಕುಶಲ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT