ಶುಕ್ರವಾರ, ಜನವರಿ 27, 2023
21 °C
ಕಾಂಗ್ರೆಸ್‌ನಿಂದ ಸೊರಕೆ ಪ್ರಬಲ ಆಕಾಂಕ್ಷಿ

ಕಾಪು ಕ್ಷೇತ್ರದತ್ತ ಹಲವರ ಕಣ್ಣು: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ

ಬಾಲಚಂದ್ರ ಎಚ್‌ Updated:

ಅಕ್ಷರ ಗಾತ್ರ : | |

ಕಾಪು/ ಶಿರ್ವ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಚರ್ಚೆಯಲ್ಲಿರುವ ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಕಾಪು.

ಬಿಲ್ಲವರು, ಮೊಗವೀರರು, ಬಂಟರು, ಮುಸ್ಲಿಮರು, ಕ್ರಿಶ್ಚಿಯನ್‌, ಎಸ್‌ಸಿ, ಎಸ್‌ಟಿ ಸಮುದಾಯದವರು ಹೆಚ್ಚು–ಕಡಿಮೆ ಸಮಾನ ಸಂಖ್ಯೆಯಲ್ಲಿ ರುವ ಕಾಪು ಕ್ಷೇತ್ರದ ಟಿಕೆಟ್‌ ಗಿಟ್ಟಿಸಲು ಪ್ರಮುಖ ಪಕ್ಷಗಳಲ್ಲಿ ಭಾರಿ ಪೈಪೋಟಿ ಶುರುವಾಗಿದೆ.

ಬಿಜೆಪಿಯಲ್ಲಿ ಆಕಾಂಕ್ಷಿಗಳ ದಂಡು: ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಸಮೀಪವಾಗಿರುವ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಕಾಪು ಕ್ಷೇತ್ರದ ಹಾಲಿ ಶಾಸಕ ಲಾಲಾಜಿ ಆರ್.ಮೆಂಡನ್ ಪ್ರಬಲ ಟಿಕೆಟ್‌ ಆಕಾಂಕ್ಷಿ.

ಲಾಲಾಜಿ ಆರ್‌.ಮೆಂಡನ್‌ 2004, 2008 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮುಂದಿನ ಚುನಾವಣೆಯಲ್ಲೂ ಪಕ್ಷದಿಂದ ಟಿಕೆಟ್‌ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಾಜಕೀಯ ಅನುಭವ, ಹಿರಿತನ, ಜಾತಿಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದರೆ ಲಾಲಾಜಿ ಮೆಂಡನ್ ಅವರಿಗೆ ಮತ್ತೊಮ್ಮೆ ಟಿಕೆಟ್‌ ಸಿಗಲಿದೆ.

ಹಿಂದುತ್ವದ ಪ್ರಬಲ ಪ್ರತಿಪಾದಕ ಎಂದೇ ಗುರುತಿಸಿಕೊಂಡಿರುವ ಯಶ್‌ಪಾಲ್ ಸುವರ್ಣ ಕೂಡ ಕಾಪು ಕ್ಷೇತ್ರದ ಪ್ರಮುಖ ಟಿಕೆಟ್‌ ಆಕಾಂಕ್ಷಿ. ದಕ್ಷಿಣ ಕನ್ನಡ ಹಾಗೂ ಉಡುಪಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರ ಕ್ಷೇತ್ರದಲ್ಲಿ ಪ್ರಭಾವ ಹೊಂದಿರುವ ಯಶ್‌ಪಾಲ್‌ ಸುವರ್ಣ ಹೆಸರು ಟಿಕೆಟ್‌ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.

ಹಾಗೆಯೇ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹೆಸರೂ ಮುನ್ನಲೆಯಲ್ಲಿದೆ. ಕಳೆದ ಬಾರಿಯ ಚುನಾವಣೆಯ ಕೊನೆಯ ಗಳಿಗೆಯಲ್ಲಿ ಗುರ್ಮೆ ಸುರೇಶ್ ಅವರಿಗೆ ಟಿಕೆಟ್‌ ಕೈತಪ್ಪಿತ್ತು. ಈ ಬಾರಿ ಟಿಕೆಟ್‌ ಕೈತಪ್ಪುವುದಿಲ್ಲ ಎಂಬ ಆಶಾಭಾವದಲ್ಲಿದ್ದಾರೆ ಅವರು.

ಇನ್ನೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಕೂಡ ಕಾಪು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರು. ಮೂರು ದಶಕಗಳಿಗೂ ಹೆಚ್ಚು ಕಾಲ ಪಕ್ಷಕ್ಕೆ ದುಡಿದಿರುವ ಅನುಭವ
ಅವರ ಬೆನ್ನಿಗಿದೆ. ರಾಜಕೀಯ ಅನುಭವ, ಪಕ್ಷ ನಿಷ್ಠೆ ಮುನ್ನಲೆಗೆ ಬಂದರೆ ಕುಯಿಲಾಡಿ ಅವರಿಗೆ ಟಿಕೆಟ್‌ ಸಿಕ್ಕರೆ ಅಚ್ಚರಿ ಇಲ್ಲ.

ಇವರ ಜತೆಗೆ ಯುವ ನಾಯಕ ಎಂದೇ ಗುರುತಿಸಿಕೊಂಡಿರುವ ಪೆರ್ಣಂಕಿಲ ಶ್ರೀಶ ನಾಯಕ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ನಯನಾ ಗಣೇಶ್, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಆಪ್ತರಾಗಿರುವ ಗೀತಾಂಜಲಿ ಸುವರ್ಣ, ಪಕ್ಷದಲ್ಲಿ ವೈಯಕ್ತಿಕ ವರ್ಚಸ್ಸು ಹೊಂದಿರುವ ಶಿಲ್ಪಾ ಸುವರ್ಣ, ವೀಣಾ ಶೆಟ್ಟಿ ಕೂಡ ಕಾಪು ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿಗಳು.

ಬಿಜೆಪಿಯಲ್ಲಿ ಟಿಕೆಟ್‌ಗೆ ತೀವ್ರ ಸ್ಪರ್ಧೆ ಇದ್ದರೆ ಕಾಂಗ್ರೆಸ್‌ನಿಂದ ಇಬ್ಬರು ಮಾತ್ರ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರಲ್ಲಿ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಪ್ರಮುಖರು.

ದಕ್ಷಿಣ ಕನ್ನಡದ ಪುತ್ತೂರಿನವರಾದ ವಿನಯ ಕುಮಾರ್ ಸೊರಕೆ ಪುತ್ತೂರಿನಿಂದ 1985 ಹಾಗೂ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದವರು. 2013ರಲ್ಲಿ ಕಾಪು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಕೆಲಕಾಲ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು.

ಕಾಪು ಕ್ಷೇತ್ರದಲ್ಲಿ ಬೂತ್‌ಮಟ್ಟದಿಂದ ಕಾಂಗ್ರೆಸ್‌ ಪಕ್ಷವನ್ನು ಸಂಘಟಿಸುವಲ್ಲಿ ಸೊರಕೆ ಅವರ ಶ್ರಮ ಹೆಚ್ಚಾಗಿದೆ. ಜಿಲ್ಲೆಯ ಹಿರಿಯ ಹಾಗೂ ಪ್ರಭಾವಿ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಸೊರಕೆ ಅವರಿಗೆ ಟಿಕೆಟ್‌ ಬಹುತೇಕ ಖಚಿತ ಎಂಬ ಅಭಿಪ್ರಾಯಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ.

ಕಾಪು ಟಿಕೆಟ್‌ಗೆ ಪೈಪೋಟಿ ನಡೆಸಿರುವ ಮತ್ತೊಬ್ಬರು ಆಕಾಂಕ್ಷಿ ರಾಜಶೇಖರ್ ಕೋಟ್ಯಾನ್. ಪ್ರತಿಷ್ಠಿತ ಸಾಂತೂರು ಗರಡಿ ಮನೆಯವರಾದ ರಾಜಶೇಖರ್ ಕೋಟ್ಯಾನ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ, ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಮಂಡಳಿಯ ಗೌರವಾಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ, ಬಿಲ್ಲವರ ಅಸೋಸಿಯೇಶನ್ ಸದಸ್ಯರಾಗಿದ್ದಾರೆ. ಕೋಟಿ-ಚೆನ್ನಯ ಫೌಂಡೇಶನ್ ಮೂಲಕ ಸಮಾಜಸೇವೆಯಲ್ಲಿ ನಿರತರಾಗಿದ್ದಾರೆ.

ಜೆಡಿಎಸ್ ಪಕ್ಷದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ನಡೆಯುತ್ತಿದೆ. ಆದರೆ, ಅಭ್ಯರ್ಥಿ ಅಂತಿಮವಾಗಿಲ್ಲ. ಎಸ್‍ಡಿಪಿಐ ಪಕ್ಷದಿಂದ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹನೀಫ್ ಮೂಳೂರು, ಉಡುಪಿ ಜಿಲ್ಲಾ ಸಮಿತಿ ಸದಸ್ಯ ವೈ.ಎಸ್‌.ರಝಾಕ್, ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬೂಬಕ್ಕರ್ ಪಾದೂರು ಹೆಸರು ಮುಂಚೂಣಿಯಲ್ಲಿದೆ.

ವಸಂತ ಸಾಲ್ಯಾನ್‌ಗೆ 5 ಬಾರಿ ಗೆಲುವು
ಕಾಪು ಕ್ಷೇತ್ರ ರಚನೆಯಾದ ಬಳಿಕ ಪ್ರಜಾ ಸೋಷಲಿಸ್ಟ್ ಪಾರ್ಟಿಯಿಂದ ಸ್ಪರ್ಧಿಸಿದ್ದ ಭಾಸ್ಕರ್ ಶೆಟ್ಟಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ವೀರೇಂದ್ರ ಹೆಗ್ಗಡೆಯವರ ತಂದೆ ರತ್ನವರ್ಮ ಹೆಗ್ಗಡೆ ಅವರನ್ನು ಪರಾಭವಗೊಳಿಸಿ ಕಾಪು ಕ್ಷೇತ್ರದ ಪ್ರಥಮ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಹಲವು ಬಾರಿ ಶಾಸಕರಾದರು. ಅವರ ನಂತರ 1983, 1985, 1989, 1994, 1999ರ ಚುನಾವಣೆಯಲ್ಲಿ ವಸಂತ ವಿ. ಸಾಲ್ಯಾನ್ ಗೆದ್ದುಬಂದರು. 2004 ಹಾಗೂ 2008ರಲ್ಲಿ ಲಾಲಾಜಿ ಮೆಂಡನ್ ಎದುರು ಪರಾಭವಗೊಂಡರು.

ಪ್ರಬಲವಾಗುತ್ತಿದೆ ಎಸ್‍ಡಿಪಿಐ
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎಸ್‍ಡಿಪಿಐ ಸ್ವಲ್ಪ ಮಟ್ಟಿಗೆ ಪ್ರಬಲವಾಗಿದೆ. ಕಾಪು ಪುರಸಭೆಯಲ್ಲಿ ಮೂವರು ಸದಸ್ಯರು, ಪಡುಬಿದ್ರಿ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು, ಬೆಳಪು ಪಂಚಾಯಿತಿಯಲ್ಲಿ ಇಬ್ಬರು, ಉಚ್ಚಿಲದಲ್ಲಿ ನಾಲ್ವರು ಎಸ್‌ಡಿಪಿಐ ಬೆಂಬಲಿತರು ಆಯ್ಕೆಯಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು