ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ 7 ತಂಡಗಳ ರಚನೆ: ಎಡಿಜಿಪಿ

Last Updated 17 ಏಪ್ರಿಲ್ 2022, 2:09 IST
ಅಕ್ಷರ ಗಾತ್ರ

ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಏಳು ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದ್ದು, ತನಿಖಾ ತಂಡಗಳ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.

ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣ ಸಂಬಂಧ ಶನಿವಾರ ಎಸ್‌ಪಿ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಎಸ್‌ಪಿ ಎನ್‌.ವಿಷ್ಣುವರ್ಧನ್‌ ನೇತೃತ್ವದ ತಂಡಗಳು ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಸಮಗ್ರವಾಗಿ ತನಿಖೆ ನಡೆಸಲಿವೆ. ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್ ವರದಿ ಪಡೆದು ಪರಿಶೀಲಿಸಲಾಗುವುದು. ವಿಧಿವಿಜ್ಞಾನ ಪ್ರಯೋಗಾಲಯವು ಸ್ವತಂತ್ರ ಸಂಸ್ಥೆಯಾಗಿದ್ದು, ಶೀಘ್ರ ವರದಿ ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಆತ್ಮಹತ್ಯೆ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.

ಹೋಂ ಸ್ಟೇನಲ್ಲಿ ಮೂರು ದಿನ
ಚಿಕ್ಕಮಗಳೂರು:
ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸ್‌ ತನಿಖಾ ತಂಡವು ಚಿಕ್ಕಮಗಳೂರಿನ ಕೈಮರ ಸಮೀಪದ ಬಾನ್‌ ಆಫ್‌ ಬೆರ್ರಿ ಹೋಂ ಸ್ಟೇನಲ್ಲಿ ಶನಿವಾರ ಪರಿಶೀಲನೆ ನಡೆಸಿದೆ.

ಹೋಂ ಸ್ಟೇ ನೌಕರರಿಂದ ಮಾಹಿತಿ ಕಲೆ ಹಾಕಿರುವ ತಂಡ, ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡಿದೆ. ‘ಸಂತೋಷ್‌ ಎಷ್ಟು ದಿನ ತಂಗಿದ್ದರು ಮತ್ತು ಅವರ ಚಲನವಲನಗಳ ಕುರಿತು ಮಾಹಿತಿ ಪಡೆದರು. ಸಂತೋಷ್‌ ಜೊತೆ ತಂಗಿದ್ದ ಒಬ್ಬರನ್ನು ಪೊಲೀಸರು ಕರೆ ತಂದಿದ್ದರು’ ಎಂದು ಹೋಂ ಸ್ಟೇ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂತೋಷ್‌ ತಮ್ಮ ಗೆಳೆಯರೊಂದಿಗೆ ಏ.8, 9 ಹಾಗೂ 10 ರಂದು ಇಲ್ಲಿ ತಂಗಿದ್ದರು. 11ರಂದು ಉಡುಪಿಗೆ ತೆರಳಿದ್ದರು’ ಎಂದು ತಿಳಿದು ಬಂದಿದೆ.

ಕಾಮಗಾರಿ ಸ್ಥಳ ಪರಿಶೀಲಿಸಿದ ಪೊಲೀಸ್‌ ತಂಡ
ಬೆಳಗಾವಿ:
ಗುತ್ತಿಗೆದಾರ ಸಂತೋಷ್‌ ಪಾಟೀಲ ಆತ್ಮಹತ್ಯೆ ಪ್ರಕರಣದ ತನಿಖೆಯ ಭಾಗವಾಗಿ ಉಡುಪಿ ಪೊಲೀಸರು, ಇಲ್ಲಿನ ವಿಜಯನಗರದ ಸಮರ್ಥ ಕಾಲೊನಿಯಲ್ಲಿರುವ ಮತ್ತು ತಾಲ್ಲೂಕಿನ ಬಡಸ ಕೆ.ಎಚ್. ಗ್ರಾಮದಲ್ಲಿರುವ ಅವರ ಮನೆಗೆ ಶನಿವಾರ ಭೇಟಿ ನೀಡಿ ಕುಟುಂಬದವರಿಂದ ಮಾಹಿತಿ ಪಡೆದರು.

ಸಂತೋಷ್ ಅವರ ಸೋದರ ಸಂಬಂಧಿ ಪ್ರಶಾಂತ್ ಪಾಟೀಲ ಅವರಿಂದಲೂ ಮಾಹಿತಿ ಪಡೆದರು. ಹಿಂಡಲಗಾ ವ್ಯಾಪ್ತಿಯಲ್ಲಿ ಸಂತೋಷ್ ನಡೆಸಿದ್ದಾರೆ ಎನ್ನಲಾದ ಕಾಮಗಾರಿಗಳ ಸ್ಥಳ ಪರಿಶೀಲಿಸಿ, ವಿವರ ಸಂಗ್ರಹಿಸಿದರು ಎಂದು ತಿಳಿದುಬಂದಿದೆ. ಉಡುಪಿ ಪೊಲೀಸ್ ಠಾಣೆಯ ಸಿಪಿಐ ಶರಣಗೌಡ ಮತ್ತುನಾಲ್ವರು ಸಿಬ್ಬಂದಿ, ಹಿರೇಬಾಗೇವಾಡಿ ಪೊಲೀಸ್‌ ಠಾಣೆಯ ಇಬ್ಬರು ಸಿಬ್ಬಂದಿ ತಂಡದಲ್ಲಿದ್ದರು. ಸಂತೋಷ್ ಉಡುಪಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಂತೋಷ್‌ ಆತ್ಮಹತ್ಯೆಯಲ್ಲ, ಕೊಲೆ: ಈಶ್ವರಪ್ಪ ಅನುಮಾನ
ಶಿವಮೊಗ್ಗ:
‘ಗುತ್ತಿಗೆದಾರ ಸಂತೋಷ್‌ ಪಾಟೀಲ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನ ಶುರುವಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಪ್ರಕರಣದಲ್ಲಿ ಆರೋಪಿಯೂ ಆಗಿರುವ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಒತ್ತಾಯಿಸಿದರು. ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಪ್ರಕರಣದಲ್ಲಿ ಯಾರೋ ಸಂತೋಷ್‌ ಅವರನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇದೆ. ಸೂಕ್ತ ತನಿಖೆಯಿಂದ ಸತ್ಯ ಹೊರಗೆ ಬರಬೇಕಿದೆ. ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇದ್ದಾರೆ ಎನ್ನುವ ಸಂಗತಿ ಇದೆ. ತನಿಖೆ ಮೂಲಕ ಸತ್ಯ ಬಹಿರಂಗವಾಗಬೇಕಿದೆ. ನಂತರ ಈ ಕುರಿತು ಮಾತನಾಡುವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT