ಬುಧವಾರ, ಜುಲೈ 6, 2022
22 °C
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ: 32 ಮತಗಳ ಅಂತರದ ಜಯ ದಾಖಲು

ಉಡುಪಿ ಜಿಲ್ಲಾ ಕಸಾಪ ಚುನಾವಣೆ: ಸುರೇಂದ್ರ ಅಡಿಗರಿಗೆ ಹ್ಯಾಟ್ರಿಕ್ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕುತೂಹಲ ಕೆರಳಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣಾ ಫಲಿತಾಂಶ ಭಾನುವಾರ ಹೊರಬಿದ್ದಿದ್ದು ನೀಲಾವರ ಸುರೇಂದ್ರ ಅಡಿಗರು ಗೆಲುವು ಸಾಧಿಸಿದ್ದಾರೆ. ಚಲಾವಣೆಯಾದ 1,232 ಮತಗಳ ಪೈಕಿ 432 ಮತಗಳನ್ನು ಪಡೆಯುವ ಮೂಲಕ ಸುರೇಂದ್ರ ಅಡಿಗರು ಸತತ ಮೂರನೇ ಬಾರಿಗೆ ಕಸಾಪ ಚುಕ್ಕಾಣಿ ಹಿಡಿದಿದ್ದಾರೆ.

ಯಾರಿಗೆ ಎಷ್ಟು ಮತ:

ಪ್ರತಿಸ್ಪರ್ಧಿಗಳಾದ ಉಡುಪಿಯ ಸುಬ್ರಹ್ಮಣ್ಯ ಬಾಸ್ರಿ 400 ಹಾಗೂ ಬೈಂದೂರಿನ ಡಾ.ಸುಬ್ರಹ್ಮಣ್ಯ ಭಟ್‌ 394 ಮತಗಳನ್ನು ಪಡೆದರು. ಈ ಬಾರಿಯ ಕಸಾಪ ಚುನಾವಣೆಯಲ್ಲಿ ಭಾರಿ ಪೈಪೋಟಿ ಕಂಡುಬಂತು. ಕಣದಲ್ಲಿದ್ದ ಮೂವರು ಅಭ್ಯರ್ಥಿಗಳು ವಿಭಿನ್ನ ಪ್ರಚಾರದ ಮೂಲಕ ಮತದಾರರನ್ನು ಸೆಳೆಯಲು ಕಸರತ್ತು ನಡೆಸಿದ್ದರು. ಅಂತಿಮವಾಗಿ ವಿಜಯಲಕ್ಷ್ಮಿ ಸುರೇಂದ್ರ ಅಡಿಗರಿಗೆ ಒಲಿಯಿತು.

ತವರಿನಲ್ಲಿ ಎಲ್ಲರೂ ಶತಕ:

ಈ ಬಾರಿ ಕಣದಲ್ಲಿದ್ದ ಮೂವರು ಅಭ್ಯರ್ಥಿಗಳು ತವರು ನೆಲದಲ್ಲಿ ಶತಕ ಮತಗಳನ್ನು ಪಡೆದಿರುವುದು ವಿಶೇಷ. ಸುಬ್ರಹ್ಮಣ್ಯ ಬಾಸ್ರಿ ಉಡುಪಿಯಲ್ಲಿ 137 ಮತಗಳನ್ನು ಪಡೆದರೆ, ಸಾಲಿಗ್ರಾಮದಲ್ಲಿ ನೀಲಾವರ ಸುರೇಂದ್ರ ಅಡಿಗರು 117 ಮತಗಳನ್ನು ಪಡೆದರು. ಬೈಂದೂರಿನಲ್ಲಿ ಡಾ.ಸುಬ್ರಹ್ಮಣ್ಯ ಭಟ್‌ 127 ಮತಗಳನ್ನು ಪಡೆದು ತವರಿನಲ್ಲಿ ಶಕ್ತಿ ಪ್ರದರ್ಶನ ಮಾಡಿದರು.

ಚುನಾವಣೆಯಲ್ಲಿ 1,987 ಮತದಾರರು ಮತದಾನ ಮಾಡಲು ಅರ್ಹತೆ ಪಡೆದಿದ್ದರು. 1,614 ಪುರುಷ ಹಾಗೂ 373 ಮಹಿಳಾ ಮತದಾರರು ಇದ್ದರು. ಇವರಲ್ಲಿ 1,232 ಮತಗಳು ಚಲಾವಣೆಗೊಂಡು, 6 ಮತಗಳು ತಿರಸ್ಕೃತವಾಗಿ 1,226 ಮತಗಳು ಕ್ರಮ ಬದ್ಧವಾಗಿದ್ದವು. ಜಿಲ್ಲೆಯಲ್ಲಿ ಒಟ್ಟಾರೆ ಶೇ 62ರಷ್ಟು ಮತದಾನವಾಗಿದೆ.

ತಾಲ್ಲೂಕುವಾರ ಮತದಾನ ವಿವರ:

ಉಡುಪಿ ತಾಲ್ಲೂಕಿನಲ್ಲಿ 451 ಒಟ್ಟು ಮತಗಳ ಪೈಕಿ 235 ಮಂದಿ ಮತ ಚಲಾಯಿಸಿದ್ದು, ಶೇ 52.11ರಷ್ಟು ಮತದಾನವಾಗಿದೆ. ಕಾರ್ಕಳ ತಾಲ್ಲೂಕಿನಲ್ಲಿ 134 ಒಟ್ಟು ಮತಗಳಿದ್ದು, 88 (ಶೇ 65.67) ಮತ ಚಲಾವಣೆಯಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ 435 ಒಟ್ಟು ಮತಗಳ ಪೈಕಿ 240 (ಶೇ55.17), ಬ್ರಹ್ಮಾವರ ತಾಲ್ಲೂಕಿನಲ್ಲಿ 140 ಮತಗಳಲ್ಲಿ 91 (ಶೇ 65), ಸಾಲಿಗ್ರಾಮದಲ್ಲಿ 302 ಮತಗಳ ಪೈಕಿ 216 (ಶೇ 71.52), ಕಾಪು ತಾಲ್ಲೂಕಿನಲ್ಲಿ 136 ಮತಗಳ ಪೈಕಿ 76 (ಶೇ55.88), ಬೈಂದೂರು ತಾಲ್ಲೂಕಿನಲ್ಲಿ ಒಟ್ಟು 254 ಮತಗಳಲ್ಲಿ 176 (69.29), ಹೆಬ್ರಿ ತಾಲ್ಲೂಕಿನಲ್ಲಿ ಒಟ್ಟು 135 ಮತಗಳ ಪೈಕಿ 110 (ಶೇ81.48) ಮತಗಳು ಚಲಾವಣೆಯಾಗಿವೆ.

ಬೆಳಿಗ್ಗೆ 8 ರಿಂದ 12ಗಂಟೆಯವರೆಗೆ ಶೇ 37.2ರಷ್ಟು ಮತ ಚಲಾವಣೆಯಾದರೆ, 2 ಗಂಟೆಯ ಹೊತ್ತಿಗೆ ಶೇ 49.3ರಷ್ಟು ಹಾಗೂ ಸಂಜೆ 4ಕ್ಕೆ ಶೇ 62ರಷ್ಟು ಮತದಾನವಾಯಿತು.

ಸಂಭ್ರಮ:

ಗೆಲುವು ಖಚಿತವಾಗುತ್ತಿದ್ದಂತೆ ಉಡುಪಿ ತಾಲ್ಲೂಕು ಕಚೇರಿಗೆ ಆಗಮಿಸಿದ ನೀಲಾವರ ಸುರೇಂದ್ರ ಅಡಿಗರಿಗೆ ಹಿತೈಷಿಗಳು, ಆಪ್ತರು ಅಭಿನಂದನೆ ಸಲ್ಲಿಸಿ ಹಾರ ಹಾಕಿದರು. ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಗೆಲುವಿನ ಪ್ರಮಾಣಪತ್ರ ವಿತರಿಸಿ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಿಗೆ ತಾಲ್ಲೂಕು ಆಡಳಿತ ಸದಾ ಜತೆಗಿದ್ದು ಅಗತ್ಯ ಸಹಕಾರ ನೀಡಲಿದೆ ಎಂದರು.

‘ಶೀಘ್ರ ಕನ್ನಡ ಭವನ ನಿರ್ಮಾಣ’

ಕನ್ನಡ ಭವನ ನಿರ್ಮಾಣಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಸರ್ಕಾರ 11.5 ಸೆಂಟ್ಸ್ ನಿವೇಶನ ಮಂಜೂರಾಗಿದೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯಂತೆ ಅಲ್ಲಿ ಶೀಘ್ರ ಕನ್ನಡ ಭವನ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ.ಸುನಿಲ್ ಕುಮಾರ್, ಶಾಸಕ ರಘುಪತಿ ಭಟ್ ಅವರನ್ನು ಭೇಟಿಮಾಡಿ ಕನ್ನಡ ಭವನ ನಿರ್ಮಾಣ ವಿಚಾರವಾಗಿ ಚರ್ಚಿಸುತ್ತೇನೆ. ಹಿಂದಿನ ಅವಧಿಯಲ್ಲಿ ನಡೆದ ಕನ್ನಡ ಕಟ್ಟುವ ಕಾರ್ಯಗಳನ್ನು ಮತ್ತೆ ಮುಂದುವರಿಸಿಕೊಂಡು ಹೋಗುತ್ತೇನೆ. ಪ್ರತಿಸ್ಪರ್ಧಿಗಳಾದ ಸ್ನೇಹಿತರೂ ಆಗಿರುವ ಸುಬ್ರಹ್ಮಣ್ಯ ಬಾಸ್ರಿ ಹಾಗೂ ಡಾ.ಸುಬ್ರಹ್ಮಣ್ಯ ಭಟ್ ಅವರ ಜತೆ ಸೇರಿ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ. ಅವರ ಪ್ರಣಾಳಿಕೆಯಲ್ಲಿದ್ದ ಉತ್ತಮ ಅಂಶಗಳನ್ನು ಕೂಡ ಅನುಷ್ಠಾನಕ್ಕೆ ತರುತ್ತೇನೆ ಎಂದು ನೂತನ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು