ಬುಧವಾರ, ನವೆಂಬರ್ 13, 2019
17 °C
ಎಲ್ಲ ಇಲಾಖೆಗಳಿಂದ ಹೊಸ ಯೋಜನೆ ಅನುಷ್ಠಾನಕ್ಕೆ ಪ್ರಧಾನಿ ಸೂಚನೆ: ಸದಾನಂದ ಗೌಡ

ಅಭಿವೃದ್ಧಿಗೆ ತೆರೆದುಕೊಳ್ಳಲಿದೆ ಕಾಶ್ಮೀರ

Published:
Updated:
Prajavani

ಉಡುಪಿ: ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಪಣತೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿ ಇಲಾಖೆಯಿಂದಲೂ ಹೊಸ ಯೋಜನೆಯನ್ನು ಕಾಶ್ಮೀರದಲ್ಲಿ ಅನುಷ್ಠಾನಕ್ಕೆ ತರಬೇಕು ಎಂದು ಎಲ್ಲ ಸಚಿವರಿಗೆ ಸೂಚನೆ ನೀಡಿದ್ದಾರೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಹೇಳಿದರು.

ಮಣಿಪಾಲದ ಕಂಟ್ರಿಇನ್‌ ಹೋಟೆಲ್‌ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ 370ನೇ ವಿಧಿ ರದ್ಧತಿ ಜನಜಾಗೃತಿ ಸಭೆಯಲ್ಲಿ  ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಾಶ್ಮೀರವನ್ನು ಇತರೆ ರಾಜ್ಯಗಳ ಸರಿಸಮನಾಗಿ ನಿಲ್ಲುವಂತೆ ಮಾಡಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ ಎಂದರು.‌

ಕಾಶ್ಮೀರದಲ್ಲಿ ಐಐಟಿ, ಏಮ್ಸ್‌, ಕೈಗಾರಿಕೀಕರಣ, ಪ್ರವಾಸೋದ್ಯಮ ಅಭಿವೃದ್ಧಿ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗುವುದು.   ವಿಶೇಷ ಸ್ಥಾನಮಾನ ರದ್ದು ಮಾಡಿದ ಉದ್ದೇಶವೇ ಕಾಶ್ಮೀರ ಅಭಿವೃದ್ಧಿಗೆ ತೆರೆದುಕೊಳ್ಳಬೇಕು ಎಂಬುದು ಎಂದರು.

ವಿಶೇಷ ಸ್ಥಾನಮಾನದ ಫಲವಾಗಿ ಭಯೋತ್ಪಾದನೆ ಹೆಚ್ಚಾಗಿತ್ತು. ಭದ್ರತೆಯ ವಿಚಾರದಲ್ಲಿ ಗೃಹ ಇಲಾಖೆಗೆ ಕ್ರಮ ಕೈಗೊಳ್ಳಲು ಅವಕಾಶ ಇರಲಿಲ್ಲ. ಉಗ್ರರ ಸ್ವರ್ಗವಾಗಿತ್ತು. ಪಾಕಿಸ್ತಾನದ ಪರವಾಗಿದ್ದ ಕೆಲವರು ವಿಶೇಷ ಸ್ಥಾನಮಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದರು. ಅಭಿವೃದ್ಧಿಗೆ ಕೇಂದ್ರ ನೀಡುತ್ತಿದ್ದ ಅನುದಾನ ಅಲ್ಲಿನ ಎರಡು ಮೂರು ಕುಟುಂಬಗಳ ಪಾಲಾಗುತ್ತಿತ್ತು. ಈಗ ಇವೆಲ್ಲದಕ್ಕೂ ಬ್ರೇಕ್‌ ಬಿದ್ದಿದೆ ಎಂದರು.

ಕಣಿವೆ ರಾಜ್ಯ ಅಭಿವೃದ್ಧಿಗೆ ತೆರೆದುಕೊಳ್ಳಲಿದೆ. ಹೋಟೆಲ್‌ಗಳು, ವಿದ್ಯಾಸಂಸ್ಥೆಗಳು, ಕೈಗಾರಿಕೆಗಳು ತಲೆ ಎತ್ತಲಿವೆ. ಗುಂಡಿನ ಶಬ್ಧ ಮೊರೆಯುತ್ತಿದ್ದ ಜಾಗದಲ್ಲಿ ಶಾಂತಿ ನೆಲೆಸುತ್ತಿದೆ. ಉಗ್ರರ ಚಟುವಟಿಕೆಗಳಿಗೆ ಬ್ರೇಕ್‌ ಬಿದ್ದಿದೆ ಎಂದು ಸದಾನಂದ ಗೌಡರು ಹೇಳಿದರು.

ಕಾಶ್ಮೀರ ಬಿಜೆಪಿಗೆ ರಾಜಕೀಯ ವಿಷಯವಲ್ಲ; ದೇಶದ ಅಖಂಡತೆಯ ವಿಷಯ. ಹಾಗಾಗಿಯೇ 370ನೇ ವಿಧಿ ರದ್ಧತಿ ನಿಲುವಿಗೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪಕ್ಷಾತೀತ ಬೆಂಬಲ ದೊರೆಯಿತು. ಒಂದು ದೇಶ, ಒಂದು ಚುನಾವಣೆ, ಸಮಾನ ನಾಗರೀಕ ಸಂಹಿತೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲಿದೆ ಎಂದರು.‌

ಬಳಿಕ ನಡೆದ ಸಂವಾದದಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಅಖಂಡ ಭಾರತ ನಿರ್ಮಾಣವಾಗುವ ಕಾಲ ದೂರವಿಲ್ಲ. ಕಣಿವೆ ರಾಜ್ಯಕ್ಕೆ ವಿಶ್ವದ ಎಲ್ಲೆಡೆಯಿಂದ ಪ್ರವಾಸಿಗರುವ ಭೇಟಿನೀಡುವಂತೆ ಮಾಡಲಾಗುವುದು. ಅಲ್ಲಿರುವ ಪ್ರತಿಯೊಬ್ಬರೂ ಭಾರತ್ ಮಾತಾಕಿ ಜೈ ಎಂದು ಹೇಳುವಂತೆ ಮಾಡಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯೆ ತೇಜಸ್ವಿನಿ 370ನೇ ವಿಧಿ ರದ್ಧತಿ ಕುರಿತು ಮಾತನಾಡಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಶಾಸಕರಾದ ರಘುಪತಿ ಭಟ್‌, ಸುನೀಲ್ ಕುಮಾರ್‌, ಲಾಲಾಜಿ ಮೆಂಡನ್, ಸುಕುಮಾರ ಶೆಟ್ಟಿ, ಮುಖಂಡರಾದ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಇದ್ದರು.

ಪ್ರತಿಕ್ರಿಯಿಸಿ (+)