ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಕಠಿಣ ಕ್ರಮ

ಕೆಡಿಪಿ ಸಭೆಯಲ್ಲಿ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್‌
Last Updated 4 ನವೆಂಬರ್ 2019, 15:12 IST
ಅಕ್ಷರ ಗಾತ್ರ

ಉಡುಪಿ: ಅವೈಜ್ಞಾನಿಕ ಮೀನುಗಾರಿಕೆ ನಡೆಸುವ ಬುಲ್‌ಟ್ರಾಲ್‌ ಬೋಟ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರತಿದಿನ ಮಲ್ಪೆ ಬಂದರಿನಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಲ್ಪೆ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕಿರಣ್‌ ಹೇಳಿದರು.

ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದರು.

ಈಗಾಗಲೇ ನಿಷೇಧಿತ ಮೀನುಗಾರಿಕೆಯಲ್ಲಿ ತೊಡಗಿದ್ದ ನಾಲ್ಕು ಬುಲ್‌ಟ್ರಾಲ್‌ ಬೋಟ್‌ಗಳಿಗೆ ಡಿಸೇಲ್‌ ವಿತರಣೆ ಸ್ಥಗಿತಗೊಳಿಸಲಾಗಿದೆ. ಇಲಾಖೆಯ ಕಠಿಣ ಕ್ರಮದಿಂದ ಬುಲ್‌ಟ್ರಾಲ್‌ ಮೀನುಗಾರಿಕೆ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದರು.

ಉಡುಪಿ, ಬ್ರಹ್ಮಾವರ, ಕಾಪು ತಾಲ್ಲೂಕು ವ್ಯಾಪ್ತಿಯಲ್ಲಿ 2018ರಲ್ಲಿ ದೋಣಿ ಎಂಜಿನ್‌ ಖರೀದಿಸಿದ 40 ಮಂದಿಗೆ ಸಬ್ಸಿಡಿ ವಿತರಣೆ ಮಾಡಲಾಗಿದ್ದು, 163 ಮಂದಿಗೆ ಸಬ್ಸಿಡಿ ಬಿಡುಗಡೆ ಬಾಕಿ ಇದೆ. 2017ರಲ್ಲಿ ಎಂಜಿನ್‌ ಖರೀದಿಸಿದವರಿಗೆ ಸಬ್ಸಿಡಿ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಮೀನುಗಾರಿಕಾ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿದ್ದ ಮತ್ಸ್ಯಾಶ್ರಯ ಮನೆಗಳು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ವರ್ಗಾವಣೆಗೊಂಡಿದೆ. ಇದರಿಂದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಲು ತೊಂದರೆಯಾಗುತ್ತಿವೆ. ಶೀಘ್ರವೇ ಇದರ ಸಾಧಕ ಬಾಧಕದ ಕುರಿತು ಅಧ್ಯಯನ ಮಾಡಿ ವರದಿ ತಯಾರಿಸಿ ಮೀನುಗಾರಿಕಾ ಸಚಿವರಿಗೆ ಸಲ್ಲಿಸಬೇಕು ಎಂದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅಧಿಕಾರಿಗಳಿಗೆ ಸೂಚಿಸಿದರು.

ಹಿಂದೆ ಮೀನುಗಾರಿಕಾ ಬೋಟ್‌ಗಳಿಗೆ ವಿತರಣೆ ಮಾಡಲಾಗುತ್ತಿದ್ದ ಸಾಧ್ಯತಾ ಪತ್ರಗಳನ್ನು 2016ರಿಂದ ಸ್ಥಗಿತಗೊಳಿಸಲಾಗಿದೆ. ಇದರಿಂದ ಮೂರು ವರ್ಷಗಳಿಂದ ಬೋಟ್‌ಗಳಿಗೆ ಪರವಾನಿಗೆ ಸಿಗದೆ ತೊಂದರೆಯಾಗಿದೆ. ಅಧಿಕಾರಿಗಳು ಶಾಸಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್‌ ಪಡುಬಿದ್ರಿ ಆಗ್ರಹಿಸಿದರು.

ಕಾಪು ತಾಲ್ಲೂಕಿನಲ್ಲಿ ಪಶು ಚಿಕಿತ್ಸಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ಸಲ್ಲಿಸುವಂತೆ ಶಾಸಕರು ಅಧಿಕಾರಿಗೆ ಸೂಚಿಸಿದರು. ಪ್ರತಿವರ್ಷ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದ್ದು, ಖಾಲಿ ಹುದ್ದೆಗಳ ವಿವರವನ್ನು ಸಿದ್ಧಪಡಿಸಿ ನೀಡಲಾಗುವುದು ಎಂದು ಅಧಿಕಾರಿ ತಿಳಿಸಿದರು.

ರಾಜೀವ್‌ ಗಾಂಧಿ ವಸತಿ ನಿಗಮದಡಿ ಮಂಜೂರಾದ ಮನೆಗಳ ಕಾಮಗಾರಿ ಅನುದಾನ ಕೊರತೆಯಿಂದ ಅರ್ಧದಲ್ಲಿಯೇ ಸ್ಥಗಿತಗೊಂಡಿದೆ. ಪರಿಣಾಮ ಬಡವರಿಗೆ ತೊಂದರೆ ಆಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಚಂದ್ರಿಕಾ ಕೇಲ್ಕರ್‌ ಹೇಳಿದರು.

ರಾಜೀವ್‌ ಗಾಂಧಿ ವಸತಿ ನಿಗಮದಡಿ ಪ್ರತಿ ಗ್ರಾಮ ಪಂಚಾಯ್ತಿಗೆ 20 ನಿವೇಶನಗಳು ಹಂಚಿಕೆಯಾಗಿವೆ. ಮಂಜೂರಾದ ಮನೆಗಳಿಗೆ ಸರ್ಕಾರ ಅನುದಾನ ತಡೆ ಹಿಡಿದಿದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನೀತಾ ಗುರುರಾಜ್‌, ಉಪಾಧ್ಯಕ್ಷ ಭುಜಂಗ ಶೆಟ್ಟಿ, ಇಒ ಕೇಶವ ಶೆಟ್ಟಿಗಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT