ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆ ಫಲಾನುಭವಿಗಳಿಗೆ ನೋಟಿಸ್ ಸಲ್ಲದು

ಬ್ಯಾಂಕ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಸೂಚನೆ
Last Updated 25 ಜನವರಿ 2023, 13:09 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಸಮರ್ಪಕ ಮರಳು ಲಭ್ಯವಾಗುತ್ತಿಲ್ಲ ಎಂಬ ದೂರುಗಳಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಮರಳು ಲಭ್ಯವಿರುವ ಸ್ಥಳಗಳನ್ನು ಗುರುತಿಸಿ ಮರಳು ತೆಗೆಯಲು ಮಂಜೂರಾತಿ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡಲು ಬಾಕಿ ಇದ್ದರೆ ತುರ್ತು ಸಂಪರ್ಕ ಕಲ್ಪಿಸಬೇಕು.

ವಸತಿ ಯೋಜನೆಯಡಿ ಮನೆ ನಿರ್ಮಾಣ ಸಾಲ ಮನ್ನಾ ಆಗಿದ್ದು ತಾಂತ್ರಿಕ ದೋಷಗಳ ಕಾರಣದಿಂದ ಸರ್ಕಾರದಿಂದ ಬ್ಯಾಂಕ್‌ಗಳಿಗೆ ಹಣ ಪಾವತಿಯಾಗದಿದ್ದರೆ ಫಲಾನುಭವಿಗಳಿಗೆ ಸಾಲ ಮರುಪಾವತಿಸಲು ಬ್ಯಾಂಕ್‌ಗಳು ನೋಟಿಸ್‌ ನೀಡಬಾರದು.

ಮೀನುಗಾರರ ನಿರ್ಮಿಸುವ ಮನೆಗಳಿಗೆ ಹಾಲಿ ಸಹಾಯಧವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಮೀನುಗಾರಿಕಾ ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು.

ವಿವೇಕ ಯೋಜನೆಯಡಿ ಮಂಜೂರಾದ 108 ಶಾಲಾ ಕೊಠಡಿಗಳ ಕಾಮಗಾರಿ ಪೂರ್ಣಗೊಂಡಿದ್ದು ಅನುದಾನ ವಾಪಸ್‌ ಹೋಗದಂತೆ ಎಚ್ಚರಿಕೆ ವಹಿಸಬೇಕು. ಕೊಠಡಿಗಳ ನಿರ್ಮಾಣಕ್ಕೆ ಸ್ಥಳದ ಸಮಸ್ಯೆ ಇದ್ದರೆ ಶಾಲಾ ಮುಖ್ಯಸ್ಥರು ಸಮಸ್ಯೆ ಬಗೆಹರಿಸಬೇಕು.

ನಗರೋತ್ಥಾನ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ನಗರ ಪ್ರದೇಶ ವ್ಯಾಪ್ತಿಯಲ್ಲಿ ಮಂಜೂರಾದ ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿಯಬೇಕು, ನಗರ ವಸತಿ ಯೋಜನೆಯಡಿ ಅರ್ಹ ಫಲಾನುಭವಿಗಳ ಆಯ್ಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಅಂಗಾರ ಸೂಚಿಸಿದರು.

ಗ್ರಾಮೀನ ವಸತಿ ಯೋಜನೆಯಡಿ ಬೈಂದೂರು, ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ 4000 ಮನೆಗಳ ಗುರಿ ನೀಡಲಾಗಿದ್ದು, ಅರ್ಹರಿಗೆ ಮನೆಗಳು ಸಿಗಬೇಕು. ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದದ ಕಾಮಗಾರಿಗಳು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳ್ಳಬೇಕು.

ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಾಮಗಾರಿ ಕಾಲಮಿತಿಯೊಳಗೆ ಪೂರ್ಣಗೊಳ್ಳಬೇಕು. ವಾರಾಹಿ ಕುಡಿಯುವ ನೀರಿನ ಯೋಜನೆ ಅನುಷ್ಠಾನದಿಂದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ.

468 ಕಾಲುಸಂಕಗಳ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ನಡೆಯುತ್ತಿದ್ದು 42 ಕಾಮಗಾರಿಗಳು ಮಾತ್ರ ಬಾಕಿ ಇವೆ. ಗ್ರಾಮ ಬಂಧು ಯೋಜನೆಯಡಿ 404 ಕಾಮಗಾರಿಗಳಲ್ಲಿ 136 ಪೂರ್ಣಗೊಂಡಿವೆ. ಮಳೆಗಾಲ ಆರಂಭವಾಗುವುದರ ಒಳಗೆ ಕಾಮಗಾರಿ ಮುಗಿಸಬೇಕು.

ಸಣ್ಣ ನೀರಾವರಿ ಇಲಾಖೆ ಶೀಘ್ರ ಕಿಂಡಿ ಅಣೆಕಟ್ಟುಗಳಿಗೆ ಹಲಗೆ ಜೋಡಿಸಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ಹೆಜಮಾಡಿ ಬಂದರು ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತುರ್ತಾಗಿ ಪೂರ್ಣಗೊಳ್ಳಬೇಕು ಎಂದು ಮೀನುಗಾರಿಕೆ ಹಾಗು ಬಂದರು ಇಲಾಖೆ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.

ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಲು ಜಿಲ್ಲೆಯ ಮಂಚೂಣಿ ಆಸ್ಪತ್ರೆಗಳು ಹಿಂದೇಟು ಹಾಕುತ್ತಿರುವ ದೂರುಗಳಿದ್ದು ಜನಸಾಮಾನ್ಯರಿಗೆ ಸರ್ಕಾರದ ಯೋಜನೆಯ ಸೌಲಭ್ಯ ಸಿಗುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು.

ಕುಂದಾಪುರ ಮೇಲ್ಸೇತುವೆ ಮೇಲೆ ದಾರಿದೀಪಗಳು ಉರಿಯುತ್ತಿಲ್ಲ. ಕೂಡಲೇ ಸಮಸ್ಯೆ ಸರಿಪಡಿಸಬೇಕು. ಮಣಿಪಾಲ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಭೂಸ್ವಾಧೀನ ಆದೇಶದಲ್ಲಿನ ನ್ಯೂನತೆಯಿಂದ ಸಮಸ್ಯೆಯಾಗಿದ್ದು ಯಥಾಸ್ಥಿತಿ ಕಾಪಾಡಲು ನ್ಯಾಯಾಲಯ ಆದೇಶ ನೀಡಿದೆ. ಮಳೆಗಾಲದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗದಂತೆ ಕಾಮಗಾರಿ ನಡೆಸಬೇಕು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎಚ್.ಪ್ರಸನ್ನ, ಶಾಸಕ ರಘುಪತಿ ಭಟ್‌, ಲಾಲಾಜಿ ಮೆಂಡನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT