ಉಡುಪಿ: ನಾವು ಕಷ್ಟಪಟ್ಟು ದುಡಿದು ಉನ್ನತಿಗೇರಿ ಸಂಪತ್ತು ಗಳಿಸಿದ ಮೇಲೆ ಅದನ್ನು ಬಡವರು, ಅಶಕ್ತರೊಂದಿಗೆ ಹಂಚಿಕೊಳ್ಳದಿದ್ದರೆ, ಅದು ಇನ್ನೊಬ್ಬರಿಂದ ಕಸಿದುಕೊಂಡಂತೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಮಾಸೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಇಂತಹ ಜೀವನ ಮೌಲ್ಯಗಳನ್ನು ಪ್ರತಿಪಾದಿಸುವ ಸಂದೇಶಗಳನ್ನು ಶ್ರೀಕೃಷ್ಣ ದೇವರು ಸಾರಿದ್ದಾರೆ. ಅದನ್ನು ಪ್ರತಿಯೊಬ್ಬರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಭಗವದ್ಗೀತೆಯು ವೇದ, ಉಪನಿಷತ್‌ಗಳ ಸಾರವನ್ನು ಹೊಂದಿದೆ. ದೈವತ್ವದ ಬಗ್ಗೆ ಅರಿತುಕೊಂಡರೆ ಭಗವದ್ಗೀತೆಯ ಸಂದೇಶವನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.
ಜಗತ್ತಿನೆಲ್ಲೆಡೆ ಭಾಷೆ, ಚರ್ಮದ ಬಣ್ಣ, ಆಚಾರಗಳಿಂದ ಜನರು ವಿಭಜನೆಗೊಂಡಿದ್ದಾಗ, 1948ರಲ್ಲಿ ವಿಶ್ವ ಸಂಸ್ಥೆಯು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು ಮಾಡಿತ್ತು. ಆದರೆ, ಸಾವಿರ ವರ್ಷಗಳ ಹಿಂದೆಯೇ ಭಾರತದಲ್ಲಿ ‘ಮಾನವ ದಿವ್ಯತಾ’ ಅಂದರೆ ಮಾನವ ಕುಲದ ದೈವತ್ವದ ಬಗ್ಗೆ ಚರ್ಚೆ ನಡೆದಿತ್ತು ಎಂದು ಪ್ರತಿಪಾದಿಸಿದರು.
ಈ ಮೂಲಕ ದೈವತ್ವದ ಮಾನವೀಕರಣ ನಮ್ಮಲ್ಲಿ ನಡೆದಿತ್ತು. ನಮ್ಮ ಅಧ್ಯಾತ್ಮ ನಾಯಕರು ನಮಗೆ ಈ ತತ್ವಶಾಸ್ತ್ರವನ್ನು ಸಾರಿದ್ದಾರೆ. ಇದು ಭಾರತೀಯ ನಾಗರಿಕತೆಯ ಅಮೂಲ್ಯ ಕೊಡುಗೆಯೂ ಹೌದು ಎಂದು ಹೇಳಿದರು.
1990ರಲ್ಲಿ ರಾಜತಾಂತ್ರಿಕ ಕೆಲಸಕ್ಕಾಗಿ ನಾನು ಇಂಡೋನೇಷ್ಯಾಕ್ಕೆ ಹೋಗಿದ್ದೆ. ಅಲ್ಲಿನ ಅಧ್ಯಕ್ಷರ ಭವನದ ಉದ್ಯಾನದಲ್ಲಿ ಶ್ರೀಕೃಷ್ಣ, ಅರ್ಜುನರ ಸಂವಾದ ಮೂರ್ತಿಯನ್ನು ಸ್ಥಾಪಿಸಲಾಗಿತ್ತು. ಅದನ್ನು ನೋಡಿ ಅಲ್ಲಿನ ಜನರಲ್ಲಿ ಅದು ಏನು ಎಂದು ಕೇಳಿದೆ. ಅದಕ್ಕೆ ಅವರೆಲ್ಲರೂ ಅದು ಶ್ರೀಕೃಷ್ಣ–ಅರ್ಜುನರ ಸಂವಾದ ಎಂಬ ಉತ್ತರ ನೀಡಿದರು. ಇಸ್ಲಾಂ ದೇಶದ ಜನರಾದ ನಿಮಗೆ ಈ ವಿಚಾರ ಹೇಗೆ ತಿಳಿಯಿತು ಎಂದು ಪ್ರಶ್ನಿಸಿದೆ. ಅದಕ್ಕೆ ಅವರು ಇಸ್ಲಾಂ ನಮ್ಮ ಧರ್ಮ, ಇದು ನಮ್ಮ ಸಂಸ್ಕೃತಿ ಎಂದು ಉತ್ತರಿಸಿದ್ದರು ಎಂಬುದನ್ನು ಸ್ಮರಿಸಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶೀಂದ್ರತೀರ್ಥ ಸ್ವಾಮೀಜಿ, ಎಚ್.ಎಸ್. ಬಲ್ಲಾಳ್, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.
ಸರಳ ಸುಂದರವಾದ ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳಿಗೂ ಮೂಲವಾಗಿದೆ. ಭಾರತೀಯ ಭಾಷೆಗಳಿಗಷ್ಟೇ ಅಲ್ಲ ಆಂಗ್ಲ ಭಾಷೆಗೂ ಅದುವೇ ಮೂಲ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು. ಶ್ರೀಕೃಷ್ಣ ಮಾಸೋತ್ಸವದ ಸಮಾರೋಪ ಸಮಾರಂಭದಲ್ಲಿ ಸಂಸ್ಕೃತ ಪಂಡಿತರಾದ ಆರಿಫ್ ಮೊಹಮ್ಮದ್ ಖಾನ್ ಅವರು ಪಾಲ್ಗೊಂಡಿರುವುದು ಅತೀವ ಸಂತಸ ತಂದಿದೆ. ಇದು ಕೇವಲ ಮಾಸೋತ್ಸವವಲ್ಲ ಮನಸ್ಸಿನಿಂದ ಮಾಸದ ಉತ್ಸವವಾಗಿದೆ. ಒಂದು ತಿಂಗಳ ಕಾಲ ಶ್ರೀಕೃಷ್ಣನನ್ನು ಬಗೆ ಬಗೆಯ ರೂಪದಲ್ಲಿ ಆರಾಧಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.