ಕುಂದಾಪುರ: ‘ವಂಡಾರು, ಕಾಸಾಡಿ ಶಾಲೆ ಸಮೀಪ 7 ಕಿ.ಮೀ. ಪ್ರದೇಶ ಅರಣ್ಯ ಭೂಮಿ ಸಮಸ್ಯೆಯಿಂದಾಗಿ ವಾರಾಹಿ ಯೋಜನೆ ಕಾಮಗಾರಿ ಪೂರ್ಣವಾಗಲಿಲ್ಲ. ಈ ಸಮಸ್ಯೆ ಇತ್ಯರ್ಥವಾದರೆ 4 ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುವ ವಿಶ್ವಾಸ ಇದೆ’ ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಇಲ್ಲಿನ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ವಾರಾಹಿ ನೀರಾವರಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಅವರು ಮಾತನಾಡಿದರು.
ಕುಂದಾಪುರ ಭಾಗದ 6,100 ಹೆಕ್ಟೇರ್ ಪ್ರದೇಶಕ್ಕೆ ಈಗಾಗಲೇ ವಾರಾಹಿ ಯೋಜನೆಯ ನೀರು ದೊರೆಯುತ್ತಿದೆ. ಬೈಂದೂರು ಭಾಗದ 1,900 ಹೆ. ಪ್ರದೇಶಕ್ಕೆ ನೀರು ದೊರೆಯಬೇಕಿದ್ದರೂ, ಇನ್ನೂ 1,600 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ಕಾಮಗಾರಿ ಬಾಕಿ ಇದೆ. ವಂಡಾರು ಸಮೀಪದ 16 ಹೆಕ್ಟೇರ್ ಮೀಸಲು ಅರಣ್ಯಭೂಮಿ ಕಾಮಗಾರಿಗಾಗಿ ಅಗತ್ಯ ಇದೆ. ಇದಕ್ಕೆ ಪರ್ಯಾವಾಗಿ 32 ಹೆಕ್ಟೇರ್ ಪ್ರದೇಶದಲ್ಲಿ ಗಿಡ ನೆಡಲು ಅರಣ್ಯ ಇಲಾಖೆಗೆ ಹಣ ಪಾವತಿಸಿ ಬದಲಿ ಜಾಗ ನೀಡಲಾಗಿದೆ. ಈಗಾಗಲೇ ಮುಗಿದಿರುವ ಕಾಮಗಾರಿ ಪ್ರದೇಶದ ಸಂತ್ರಸ್ತರಿಗೆ ಪರ್ಯಾಯ ಭೂಮಿ ನೀಡಿ, ಹಣ ನೀಡಿದ್ದರೂ, ಅರಣ್ಯ ಇಲಾಖೆ ದಾಖಲೆಗಳಲ್ಲಿ ಈ ಸಂಗತಿ ನಮೂದಾಗದ ಕಾರಣ ಮತ್ತಷ್ಟು ಗೊಂದಲ ಉಂಟಾಗಿದ್ದು, ಸರಿಪಡಿಸುವ ಕೆಲಸ ನಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆಯೂ ಬಾಕಿ ಇದೆ. 26 ಕಿ.ಮೀ. ಕಾಮಗಾರಿ ಪೈಕಿ 19 ಕಿ.ಮೀ. ಕಾಮಗಾರಿ ಆಗಿದೆ. ಇನ್ನಷ್ಟು ಕಾಮಗಾರಿಗೆ ₹350 ಕೋಟಿ ಮೊತ್ತದ ಅಂದಾಜು ಪಟ್ಟಿ ತಯಾರಿಸಲಾಗಿದೆ. ಒಟ್ಟು 15,702 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲು ₹487 ಕೋಟಿ ಯೋಜನಾ ವೆಚ್ಚವಾಗಿದ್ದು, ₹82 ಕೋಟಿ ಕಾಮಗಾರಿ ಬಾಕಿ ಇದೆ ಎಂದು ಅಧಿಕಾರಿಗಳು ವಿವರ ನೀಡಿದರು.
ವಾರಾಹಿ ನೀರಾವರಿ ಯೋಜನೆಯಡಿ ವಾರಾಹಿ ನದಿಗೆ ಸಿದ್ದಾಪುರದ ಬಳಿ ಹರಿಯಬ್ಬೆ ಎಂಬಲ್ಲಿ ಡೈವರ್ಶನ್ ವಿಯರ್‌ನ್ನು ನಿರ್ಮಿಸಿ, ಅವಿಭಜಿತ ಕುಂದಾಪುರ ಹಾಗೂ ಉಡುಪಿ ತಾಲ್ಲೂಕಿನ ಒಟ್ಟು 15,702 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ವಾರಾಹಿ ನೀರಾವರಿ ಯೋಜನೆಯ ಪರಿಷ್ಕೃತ ಯೋಜನಾ ಮೊತ್ತ ₹1789.50 ಕೋಟಿ ಆಗಿದ್ದು, ಆಗಸ್ಟ್ ಅಂತ್ಯಕ್ಕೆ ₹1302.80 ಕೋಟಿ ವೆಚ್ಚವಾಗಿದೆ. ವಾರಾಹಿ ನೀರಾವರಿ ಯೋಜನೆಯಡಿ ಉದ್ದೇಶಿತ 15,702 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದ ಪೈಕಿ 2022ರ ಸೆಪ್ಟೆಂಬರ್ ಅಂತ್ಯದವರೆಗೆ 6,110 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಪ್ರಸ್ತುತ ವಾರಾಹಿ ನೀರಾವರಿ ಯೋಜನೆಯಡಿ ಡೈವರ್ಶನ್ ವಿಯರ್, ವಾರಾಹಿ ಬಲದಂಡೆ ಸಾಮಾನ್ಯ ಕಾಲುವೆ ಸರಪಳಿ 18.725 ಕಿ.ಮೀ, ಎಡದಂಡೆ ನಾಲೆ 44.35 ಕಿ.ಮೀ ಕಾಮಗಾರಿ ಪೂರ್ಣಗೊಂಡಿದೆ. ವಾರಾಹಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿದ್ದು, ವಾರಾಹಿ ಎಡದಂಡೆ ನಾಲೆಯ ವಿತರಣಾ ನಾಲೆಗಳಾದ 29, 32, 45, 46 ಮತ್ತು 47ಕ್ಕೆ ಸಂಬಂಧಿಸಿದಂತೆ ಅಂದಾಜುಪಟ್ಟಿ ತಯಾರಿಕಾ ಹಂತದಲ್ಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ಅರಣ್ಯ ಭೂಮಿಯ ಸಮಸ್ಯೆ ಕುರಿತು ಸ್ಪಂದಿಸಿದ ಶಾಸಕ ಕೊಡ್ಗಿ ಅವರು, ಸದನದಲ್ಲಿ ಈ ಕುರಿತು ಬೃಹತ್ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಉತ್ತರ ನೀಡಿದ್ದು, ಅರಣ್ಯ ಭೂಮಿ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರ ಸ್ಪಂದಿಸಲಾಗುವುದು ಎಂದು ತಿಳಿಸಿದ್ದಾರೆ’ ಎಂದು ತಿಳಿಸಿದರು.
ಕರ್ನಾಟಕ ನೀರಾವರಿ ನಿಗಮದ ವಾರಾಹಿ ಯೋಜನಾ ವೃತ್ತದ ಅಧೀಕ್ಷಕ ಪ್ರವೀಣ್, ಕಾರ್ಯನಿರ್ವಾಹಕ ಎಂಜಿನಿಯರ್ ಎ. ದಾಸೇಗೌಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಎನ್.ಜಿ.ಭಟ್, ಅಶೋಕ್, ಸಹಾಯಕ ಎಂಜಿನಿಯರ್‌ಗಳಾದ ನಾಗೇಶ್, ನವೀನ್ ಕುಮಾರ್, ಕೆಆರ್‌ಡಿಎಲ್‌ನ ದಿನೇಶ್, ನಿರ್ಮಿತಿ ಕೇಂದ್ರದ ಗಣೇಶ ಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.