ಮಂಗಳವಾರ, ಸೆಪ್ಟೆಂಬರ್ 21, 2021
25 °C
ಜುಲೈ ಒಳಗೆ ಹೆಸರು ನೋಂದಾಯಿಸಿಕೊಳ್ಳದಿದ್ದರೆ ಒಂದು ಕಂತು ಕಡಿತ

ಕಿಸಾನ್ ಸಮ್ಮಾನ್: ಶೇ 100 ಗುರಿ ಸಾಧನೆ

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 1,28,329 ರೈತರು ನೋಂದಣಿ ಮಾಡಿಸಿಕೊಂಡಿದ್ದು, ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಮೂಲಕ ಉಡುಪಿ ಜಿಲ್ಲೆ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.

ಗುರಿ ಮೀರಿ ನೋಂದಣಿ: ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 1,27,350 ರೈತರ ನೋಂದಣಿ ಗುರಿ ಹೊಂದಲಾಗಿತ್ತು. ಅದರಂತೆ ಗುರಿ ತಲುಪಲಾಗಿದೆ. ಜಿಲ್ಲೆಯಲ್ಲಿ ಬಹು ಮಾಲೀಕತ್ವದ ಕೃಷಿ ಭೂಮಿ ಇರುವ ಕಾರಣ ಮತ್ತಷ್ಟು ರೈತರು ಯೋಜನೆಯಡಿ ಸೇರ್ಪಡೆಯಾಗಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೃಷಿ ಕುಟುಂಬಗಳು ಎಷ್ಟು?

ಜಿಲ್ಲೆಯಲ್ಲಿ 1,89,882 ಕೃಷಿ ಕುಟುಂಬಗಳು ಇವೆ. ಈ ಪೈಕಿ 62,500 ಕೃಷಿ ಕುಟುಂಬಗಳು ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆಧಾರ್ ಕಾರ್ಡ್‌ ಮಾಹಿತಿ ನೀಡದವರು, ತೆರಿಗೆ ಪಾವತಿದಾರರು, ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು, ಹೊರ ರಾಜ್ಯಗಳಲ್ಲಿ ವಾಸಮಾಡುವ ಜಮೀನು ಮಾಲೀಕರನ್ನು ಅನರ್ಹರು ಎಂದು ಗುರುತಿಸಿ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕೆಂಪೇಗೌಡ ತಿಳಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಡಿ ಫಲಾನುಭವಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅರ್ಹ ರೈತರು ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ಸಂಬಂಧಪಟ್ಟ ಗ್ರಾಮ ಪಂಚಾಯ್ತಿ, ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿ, ರೈತ ಸಂಪರ್ಕ ಕೇಂದ್ರ, ತೋಟಗಾರಿಕಾ ಇಲಾಖೆಯ ಕಚೇರಿಗಳಲ್ಲೂ ಅರ್ಜಿ ಸಲ್ಲಿಸಬಹುದು.

ಯಾವ ದಾಖಲೆ ಸಲ್ಲಿಸಬೇಕು?

ರೈತರು ಸ್ವಯಂಘೋಷಿತ ದೃಢೀಕರಣ ಪತ್ರ ಸಲ್ಲಿಸಬೇಕು. ಅರ್ಜಿಗಳು ಮೇಲಿನ ನಾಲ್ಕು ಕೇಂದ್ರಗಳಲ್ಲೂ ಲಭ್ಯವಿದೆ. ಅರ್ಜಿಯಲ್ಲಿ ಆಧಾರ್ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್‌ ಸಹಿತ ಬ್ಯಾಂಕ್ ಖಾತೆಯ ವಿವರ ಹಾಗೂ ಕೃಷಿ ಭೂಮಿಯ ಮಾಹಿತಿಯನ್ನು ನೀಡಬೇಕು. 

ಆನ್‌ಲೈನ್‌ನಲ್ಲೂ ನೋಂದಣಿ

ಮೊಬೈಲ್‌ನಲ್ಲಿ ಆ್ಯಂಡ್ರಾಯ್ಡ್‌ ಸೌಲಭ್ಯ ಹೊಂದಿರುವ ರೈತರು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬಹುದು. ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ಪಿಎಂ ಕಿಸಾನ್ ಎಂದು ಟೈಪಿಸಿದರೆ ಆ್ಯಪ್‌ ಸಿಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಂಡು ಸಿಟಿಜನ್ ಲಾಗಿನ್‌ನಲ್ಲಿ ಅಗತ್ಯ ವಿವರಗಳನ್ನು ತುಂಬಿ ಅಪ್‌ಲೋಡ್ ಮಾಡಿದರೆ ಮುಗಿಯಿತು. ಒಂದು ಮೊಬೈಲ್‌ನಿಂದ ಒಬ್ಬ ರೈತ ಮಾತ್ರ ಅರ್ಜಿ ಸಲ್ಲಿಸಬಹುದು. ಸ್ವೀಕೃತಗೊಂಡ ಆನ್‌ಲೈನ್ ಅರ್ಜಿಗಳನ್ನು ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ರೈತರಿಗೆ ಸಿಗುವ ಹಣ ಎಷ್ಟು?

ಯೋಜನೆಯಡಿ ವರ್ಷಕ್ಕೆ ₹ 6,000 ನೇರವಾಗಿ ಫಲಾನುಭವಿಯ ಖಾತೆಗೆ ಜಮೆಯಾಗಲಿದೆ. ತಲಾ 2,000ದಂತೆ ಮೂರು ಕಂತುಗಳಲ್ಲಿ ಹಣ ರೈತನ ಕೈಸೇರಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು