ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರು: ಕಾಷ್ಠ ರಥದಲ್ಲಿ ಕಂಗೊಳಿಸಿದ ದೇವಿ

ನವರಾತ್ರಿಯ ಆಚರಣೆಯ ವೈಭವದ ರಥೋತ್ಸವ
Last Updated 15 ಅಕ್ಟೋಬರ್ 2021, 14:36 IST
ಅಕ್ಷರ ಗಾತ್ರ

ಕುಂದಾಪುರ: ಇಲ್ಲಿಗೆ ಸಮೀಪದ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ಗುರುವಾರ ಮಹಾ ನವರಾತ್ರಿ ಉತ್ಸವದ ಅಂಗವಾಗಿ ರಾತ್ರಿ 8ಕ್ಕೆ ನಡೆದ ದೇವಿಯ ವೈಭವದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಸ್ಥಾನದಲ್ಲಿ ವಿವಿಧ ಪೂಜೆ ಹಾಗೂ ಧಾರ್ಮಿಕ ಆಚರಣೆಗಳು ನಡೆದವು. ಗುರುವಾರ ಸಂಜೆ ದೇವಿಯ ಉತ್ಸವ ಮೂರ್ತಿಯ ಹೊರಕ್ಕೆ ತಂದು ಪ್ರದಕ್ಷಿಣಿ ಹಾಗೂ ಬಲಿ ಸೇವೆ ನಡೆಸಲಾಯಿತು. ದೇವಿಯನ್ನು ಅಲಂಕರಿಸಿದ ಮರದ ಪುಷ್ಪ ರಥದಲ್ಲಿ ಕುಳ್ಳಿರಿಸಲಾಯಿತು.

ರಥಾರೂಢ ದೇವಿಗೆ ದೇವಸ್ಥಾನದ ತಂತ್ರಿ ರಾಮಚಂದ್ರ ಅಡಿಗ ಪೂಜೆ ನೆರವೇರಿಸಿದರು. ಮಂಗಳಾರತಿ ಎತ್ತಿದ ಬಳಿಕ, ರಥ ಪೂಜೆ ನಡೆಸಲಾಯಿತು. ಸಾವಿರಾರು ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದರು. ದೇವಳದ ಒಳ ಪ್ರಾಂಗಣದಲ್ಲಿ ಸುತ್ತು–ಬಂದು ಮತ್ತೆ ರಥ ಮೂಲ ಸ್ಥಾನವನ್ನು ತಲುಪಿದ ಬಳಿಕ ರಥದ ಮೇಲಿನಿಂದ ಅರ್ಚಕರು ಎಸೆದ ನಾಣ್ಯವನ್ನು ಪಡೆದುಕೊಳ್ಳಲು ಭಕ್ತರು ಮುಗಿಬಿದ್ದರು. ಉತ್ಸವ ಮೂರ್ತಿಯನ್ನು ರಥದಿಂದ ಕೆಳಕ್ಕೆ ತರುವ ಕ್ಷಣಗಳಿಗಾಗಿ ಕಾಯುತ್ತಿದ್ದ ಭಕ್ತರು, ಕ್ಷಣ ಮಾತ್ರದಲ್ಲಿ ರಥಕ್ಕೆ ಅಲಂಕರಿಸಿದ್ದ ಹೂಗಳನ್ನು ಪ್ರಸಾದ ರೂಪದಲ್ಲಿ ಕಿತ್ತುಕೊಂಡು, ಅಲಂಕೃತ ರಥವನ್ನು ಬರಿದುಗೊಳಿಸಿದರು.

ಮರದ ರಥಕ್ಕೆ ಮನ್ನಣೆ: ರಥೋತ್ಸವದಲ್ಲಿ ದೇವಿಯನ್ನು ಮರದಿಂದ ಮಾಡಿದ ಪುಷ್ಪ ರಥದಲ್ಲಿ ಕುಳ್ಳಿರಿಸಿ ಪೂಜಿಸುವ ಕ್ರಮ ಹಲವು ವರ್ಷಗಳಿಂದ ಇತ್ತು. ಕಳೆದ ವರ್ಷ ಕೆಲವು ತಾಂತ್ರಿಕ ಕಾರಣಗಳಿಂದ ಚಿನ್ನದ ರಥದಲ್ಲಿ ರಥೋತ್ಸವ ಮಾಡಲಾಗಿತ್ತು. ಆದರೆ ಈ ಬಾರಿ ದೇವಸ್ಥಾನದ ಉತ್ಸವ ಆಚರಣೆಯ ಪರಂಪರೆಯಂತೆ ಚಿನ್ನದ ರಥದ ಬದಲು ಮರದ ರಥದಲ್ಲಿಯೇ ಉತ್ಸವ ಆಚರಣೆ ನಡೆಸಬೇಕು ಎಂದು ವ್ಯವಸ್ಥಾಪನಾ ಸಮಿತಿ ನಿಶ್ಚಿಯಿಸಿ, ಮರದ ರಥದಲ್ಲಿಯೇ ಮೂಕಾಂಬಿಕಾ ದೇವಿಯ ವೈಭವದ ರಥೋತ್ಸವ ನಡೆಯಿತು.

ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೇರಳದ ಅಪರಾಧ ವಿಭಾಗದ ಎಡಿಜಿಪಿ ಸತ್ಯಜಿತ್, ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಸುರೇಂದ್ರನ್, ಮಂಜೇಶ್ವರ ಉದ್ಯಮಿ ವಿಜಯ್ ರೈ ಇದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಉಪ ವಿಭಾಗಾಧಿಕಾರಿ ಕೆ.ರಾಜು, ಸಮಿತಿ ಸದಸ್ಯರಾದ ಗಣೇಶ್ ಕಿಣಿ ಬೆಳ್ವೆ, ಜಯಾನಂದ ಹೋಬಳಿದಾರ್, ಡಾ.ಅತುಲ್‌ಕುಮಾರ ಶೆಟ್ಟಿ, ಗೋಪಾಲಕೃಷ್ಣ ನಾಡಾ, ಕೆ.ಪಿ.ಶೇಖರ, ಸಂಧ್ಯಾ ರಮೇಶ್, ರತ್ನಾ ಕುಂದರ್, ಕಾರ್ಯನಿರ್ವಹಣಾಧಿಕಾರಿ ಪಿ.ಬಿ.ಮಹೇಶ್, ವಂಡಬಳ್ಳಿ ಜಯರಾಮ ಶೆಟ್ಟಿ, ರಮೇಶ್‌ ಗಾಣಿಗಾ ಕೊಲ್ಲೂರು, ಕಿಶೋರ ಹೆಗ್ಡೆ, ಬಿಜೆಪಿ ಯುವಮೋರ್ಚಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶರತಕುಮಾರ ಶೆಟ್ಟಿ ಉಪ್ಪುಂದ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ಕೆ.ವಿಕಾಶ್ ಹೆಗ್ಡೆ, ಬೈಂದೂರು ಸರ್ಕಲ್ ಇನ್‌ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಕೊಲ್ಲೂರು ಠಾಣಾಧಿಕಾರಿ ನಾಸೀರ್ ಹುಸೇನ್ ಇದ್ದರು.

ಸಚಿವ ಕೋಟ ಭೇಟಿ: ನವರಾತ್ರಿ ಉತ್ಸವದ ಅಂಗವಾಗಿ ಶುಕ್ರವಾರ ಸಂಜೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT