ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಕೋಳ್ಯೂರ ವೈಭವ 14ರಿಂದ

ಕೋಳ್ಯೂರು ರಾಮಚಂದ್ರ ರಾಯರ ನವತ್ಯಬ್ದ ಸಂಭ್ರಮದ ಅಂಗವಾಗಿ ನಿರಂತರ ಕಾರ್ಯಕ್ರಮ
Last Updated 11 ಅಕ್ಟೋಬರ್ 2021, 11:54 IST
ಅಕ್ಷರ ಗಾತ್ರ

ಉಡುಪಿ: ಕೋಳ್ಯೂರು ರಾಮಚಂದ್ರ ರಾಯರ ನವತ್ಯಬ್ದ ಸಂಭ್ರಮದ ಅಂಗವಾಗಿ ಅ.14 ರಿಂದ ನ.14ರವರೆಗೆ ಒಂದು ತಿಂಗಳ ಪರ್ಯಂತ ‘ಕೋಳ್ಯೂರು ವೈಭವ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 14ರಂದು ಬೆಳಿಗ್ಗೆ 11ಕ್ಕೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪ್ರತಿದಿನ ಮೇರು ಕಲಾವಿದರ ನೆನಪಿನಾರ್ಥ ಕಾರ್ಯಕ್ರಮ ನಡೆಯಲಿದೆ. ದಿನಕ್ಕೊಬ್ಬರು ಕಲಾಪೋಷಕರು, ಮೇಳದ ಯಜಮಾನರು, ಕೋಳ್ಯೂರು ಅವರ ಒಡನಾಡಿ ಕಲಾವಿದರು ಭಾಗವಹಿಸಿ ಮಾತನಾಡಲಿದ್ದಾರೆ.

ಪ್ರತಿದಿನ ಕೋಳ್ಯೂರು ಮುಖ್ಯ ಭೂಮಿಕೆಯಲ್ಲಿರುವ ಆಖ್ಯಾನವನ್ನು ಪ್ರದರ್ಶಿಸಲಾಗುವುದು. ನ.14 ರಂದು ಬೆಳಿಗ್ಗೆ 9ಕ್ಕೆ ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮಿಜಿ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಹಿರಿಯ ಕಲಾವಿದ ಪೆರ್ವೋಡಿ ನಾರಾಯಣ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕರ್ ಮಾತನಾಡಿ, ಅಂತರ ರಾಷ್ಟ್ರೀಯ ಕಲಾವಿದರು, ಹಿರಿಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 90 ಸ್ತ್ರೀವೇಷಧಾರಿಗಳನ್ನು ಕೋಳ್ಯೂರು ರಾಮಚಂದ್ರ ರಾಯರು ಗೌರವಿಸಲಿದ್ದಾರೆ. ಹಿರಿಯ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ, ಅರುವ ಕೊರಗಪ್ಪ ಶೆಟ್ಟಿ, ಎ.ಪಿ.ಮಾಲತಿ, ಮಂಟಪ ಪ್ರಭಾಕರ ಉಪಾಧ್ಯ, ಎಚ್.ಎಸ್.ಬಲ್ಲಾಳ್, ಪಿ. ಎಸ್.ಎಡಪಡಿತ್ತಾಯ, ಪದ್ಮಾ ಸುಬ್ರಹ್ಮಣ್ಯಂ, ವಿದ್ವಾನ್ ಪಪ್ಪು, ವೇಣುಗೋಪಾಲ್, ಕಲಾಮಂಡಲಂ ಗೋಪಿ, ರಾಜ್ ಕೆ.ಶೆಟ್ಟಿ, ಪೆರುವೋಡಿ ನಾರಾಯಣ ಭಟ್ ಭಾಗವಹಿಸಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕೋಳ್ಯೂರರ ಕುರಿತಾದ ಗ್ರಂಥ ಪ್ರಕಟಣೆಗೊಳ್ಳಲಿದೆ. ವಿದ್ವಾಂಸರ ಮತ್ತು ಯುವ ಕಲಾವಿದರ ಗೋಷ್ಠಿಗಳು ಸಂಪನ್ನಗೊಳ್ಳಲಿವೆ. ಕಥಕಳಿ-ಯಕ್ಷಗಾನ ಜುಗಲ್‍ಬಂದಿ ಪ್ರಸ್ತುತಗೊಳ್ಳಲಿದೆ. ಪ್ರತಿದಿನದ ಕಾರ್ಯಕ್ರಮಗಳು ಯೂ-ಟ್ಯೂಬ್‌ನಲ್ಲಿ ಪ್ರಸಾರವಾಗಲಿದ್ದು, ವೀಕ್ಷಿಸಬಹುದು. ಕ್ವೀನ್ ಆಫ್ ಯಕ್ಷಗಾನ ವೆಬ್‌ಸೈಟ್‌ ಲೋಕಾರ್ಪಣೆಗೊಳ್ಳಲಿದೆ ಎಂದರು.

‘ಕೋಳ್ಯೂರರ ಪರಿಚಯ’
ಮೋಹಿನಿಯಂಥ ಶೃಂಗಾರ ಪಾತ್ರದಿಂದ ತೊಡಗಿ, ಚಂದ್ರಮತಿ, ದಮಯಂತಿಯಂಥ ಕರುಣಾರಸದ ಪಾತ್ರಗಳನ್ನು ಪ್ರಮೀಳೆ, ಶಶಿಪ್ರಭೆಯಂಥ ವೀರರಸದ ಪಾತ್ರಗಳನ್ನು ಮಾಡಿ, ತುಳು ತಿಟ್ಟಿನಲ್ಲಿ ವಿಭಿನ್ನ ಮನೋಧರ್ಮದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೋಳ್ಯೂರು ರಾಮಚಂದ್ರ ರಾಯರಿಗೆ ಈಗ 90ರ ಸಡಗರ. ಕೋಳ್ಯೂರು ರಾಮಚಂದ್ರ ರಾಯರು ನಡೆದಾಡುತ್ತಿರುವ 150 ವರ್ಷಗಳ ಇತಿಹಾಸದ ದಾಖಲೆ ಪುಸ್ತಕದಂತಿದ್ದಾರೆ. ಯಕ್ಷಗಾನದ ವಿಶ್ವಕೋಶವಾಗಿರುವ ಕೇಂದ್ರ ಸಂಗೀತ ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿ.ವಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕೋಳ್ಯೂರು ಪುತ್ರ ಶ್ರೀಧರ ರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT