ಶನಿವಾರ, ನವೆಂಬರ್ 23, 2019
17 °C
ಪ್ರಸಕ್ತ ಸಾಲಿನಲ್ಲಿ 300 ಹೆಕ್ಟೇರ್ ಬಿತ್ತನೆ: ಉತ್ತಮ ಇಳುವರಿ ನಿರೀಕ್ಷೆ

ಕೂರಿಗೆ ಬಿತ್ತನೆಯತ್ತ ಕರಾವಳಿ ರೈತರ ಚಿತ್ತ

Published:
Updated:
Prajavani

ಉಡುಪಿ: ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿ ಅನುಸರಿಸುತ್ತಿದ್ದ ಕರಾವಳಿ ರೈತರು ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಬಿತ್ತನೆ ಪದ್ಧತಿಯತ್ತ ಆಸಕ್ತಿ ತೋರಿದ್ದಾರೆ. ಈ ವರ್ಷ 300 ಹೆಕ್ಟೇರ್‌ನಲ್ಲಿ ಕೂರಿಗೆ ಬಿತ್ತನೆ ನಡೆದಿದ್ದು, ಉತ್ತಮ ಇಳುವರಿ ಸಿಗುವ ಲಕ್ಷಣಗಳು ಕಾಣುತ್ತಿವೆ.

ಕರಾವಳಿಯಲ್ಲಿ ಹಿಂದಿನಿಂದಲೂ ಸಾಂಪ್ರದಾಯಿಕ ಭತ್ತದ ನಾಟಿ ಪದ್ಧತಿ ಅನುಸರಿಸಲಾಗುತ್ತಿತ್ತು. ಆದರೆ, ಈ ವರ್ಷ ಮುಂಗಾರು ವಿಳಂಬವಾದ ಕಾರಣ ಕೂರಿಗೆ ಬಿತ್ತನೆ ಪದ್ಧತಿ ಮಾಡುವಂತೆ ರೈತರ ಜಮೀನುಗಳಿಗೆ ತೆರಳಿ ಪ್ರಾತ್ಯಕ್ಷಿಕೆ ನೀಡಲಾಗಿತ್ತು. ಪರಿಣಾಮ, ಹೆಚ್ಚಿನ ರೈತರು ಕೂರಿಗೆ ಪದ್ಧತಿಯತ್ತ ಒಲವು ತೋರಿದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಕೆಂಪೇಗೌಡ ಮಾಹಿತಿ ನೀಡಿದರು.

ಕುಂದಾಪುರ ತಾಲ್ಲೂಕಿನ ಉಳ್ತೂರು ಗ್ರಾಮದ ಬಹುತೇಕ ರೈತರು ಕೂರಿಗೆ ಬಿತ್ತನೆ ಮಾಡಿದ್ದಾರೆ. ಜತೆಗೆ, ಕೊಕ್ಕರ್ಣೆ, ಚೇರ್ಕಾಡಿ ಭಾಗದಲ್ಲೂ ಹೆಚ್ಚಿನ ಬಿತ್ತನೆಯಾಗಿದೆ. ಈಗಾಗಲೇ ಭತ್ತ ಕಟಾವಿಗೆ ಬಂದಿದ್ದು, ಉತ್ತಮ ಇಳುವರಿ ಸಿಗುವ ಆಶಾಭಾವ ಇದೆ ಎಂದರು.

ಖರ್ಚು ಕಡಿಮೆ: ಸಾಂಪ್ರದಾಯಿಕ ಭತ್ತ ನಾಟಿ ಪದ್ಧತಿಯಲ್ಲಿ ಖರ್ಚು ಹೆಚ್ಚು. ನಾಟಿಗೆ ತಿಂಗಳು ಮೊದಲು ನೇಜಿ ಸಸಿ ಸಿದ್ಧಮಾಡಬೇಕು. ಭೂಮಿ ಹದಮಾಡಿದ ಬಳಿಕ ನೇಜಿ ಕಿತ್ತು ನಾಟಿ ಮಾಡಬೇಕು. ನಾಟಿಗೆ ಕನಿಷ್ಠ 20 ರಿಂದ 25 ಆಳುಗಳು ಬೇಕು. ನೇಜಿಯಿಂದ ನಾಟಿವರೆಗೂ ಎಕರೆಗೆ ಕನಿಷ್ಠ ₹ 8 ರಿಂದ ₹ 10 ಸಾವಿರ ಖರ್ಚಾಗುತ್ತದೆ.

ಆದರೆ, ಕೂರಿಗೆ ಬಿತ್ತನೆಯಲ್ಲಿ ಸಸಿ ನರ್ಸರಿ ಮಾಡಿಟ್ಟುಕೊಳ್ಳಬೇಕಿಲ್ಲ. ಕೃಷಿ ಕಾರ್ಮಿಕರು ಹೆಚ್ಚು ಅಗತ್ಯವಿಲ್ಲ. ಮಳೆ ಬರುವ 15 ದಿನ ಮುನ್ನ ಒಣಭೂಮಿ ಉಳುಮೆ ಮಾಡಿ ಸಾಲಾಗಿ ಭತ್ತದ ಬೀಜಗಳನ್ನು ಚೆಲ್ಲಿದರೆ ಸಾಕು. ಒಂದು ಹದ ಮಳೆ ಬಿದ್ದರೂ ಪೈರು ಹುಟ್ಟಿಕೊಳ್ಳುತ್ತವೆ ಎಂದರು.

ಸಾಂಪ್ರದಾಯಿಕ ಪದ್ಧತಿಯಲ್ಲಿ ನೇಜಿ ಸಿದ್ಧಪಡಿಸಿದ 20 ದಿನಗಳಲ್ಲಿ ನಾಟಿ ಮಾಡಿದರೆ ಮಾತ್ರ ಉತ್ತಮ ಇಳುವರಿ ಸಿಗುತ್ತದೆ. ಆದರೆ, ಕರಾವಳಿಯಲ್ಲಿ ಕೃಷಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದ್ದು, ಕೆಲವರು ತಿಂಗಳಾದರೂ ನಾಟಿ ಮಾಡುವುದಿಲ್ಲ. ಪರಿಣಾಮ, ಪೈರು ಬಲಿತು ಇಳುವರಿ ಕುಂಠಿತವಾಗುತ್ತದೆ. ಆದರೆ, ಕೂರಿಗೆ ಪದ್ಧತಿಯಲ್ಲಿ ಈ ಸಮಸ್ಯೆ ಉದ್ಭವಿಸುವುದಿಲ್ಲ ಎನ್ನುತ್ತಾರೆ ಅಧಿಕಾರಿ ಕೆಂಪೇಗೌಡ. 

ಕೂರಿಗೆಯಲ್ಲಿ ನೇರವಾಗಿ ಭತ್ತದ ಬೀಜಗಳನ್ನು ಭೂಮಿಗೆ ಬಿತ್ತುವುದರಿಂದ ನಾಟಿಗೆ ಖರ್ಚಾಗುವ ಸಂಪೂರ್ಣ ಹಣ ಉಳಿತಾಯವಾಗುತ್ತದೆ. ಸಾಂಪ್ರದಾಯಿಕ ಪದ್ಧತಿ ಅನುಸರಿಸಿ ಎಕರೆಗೆ ₹ 5,000 ಸಾವಿರ ಲಾಭ ಪಡೆದರೆ, ಕೂರಿಗೆಯಲ್ಲಿ ₹ 15,000 ಲಾಭ ಪಡೆಯಬಹುದು ಎಂದು ಅಂಕಿ ಅಂಶ ನೀಡಿದರು.

ಯಂತ್ರೀಕೃತ ನಾಟಿಯತ್ತಲೂ ಒಲವು: ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿವರ್ಷ 400 ರಿಂದ 500 ಎಕ್ಟೇರ್‌ನಲ್ಲಿ ಯಾಂತ್ರೀಕೃತ ನಾಟಿ ನಡೆಯುತ್ತಿತ್ತು. ಈ ಬಾರಿ ರೈತರು 1,700 ಹೆಕ್ಟೇರ್‌ಗಿಂತಲೂ ಹೆಚ್ಚಿನ ಭೂಮಿಯಲ್ಲಿ ಯಾಂತ್ರೀಕೃತ ನಾಟಿ ಮಾಡಿದ್ದಾರೆ. ಕೃಷಿ ಕಾರ್ಮಿಕರ ಅಲಭ್ಯತೆ ಇದಕ್ಕೆ ಮುಖ್ಯ ಕಾರಣ ಎಂದರು.

ಪ್ರತಿಕ್ರಿಯಿಸಿ (+)