ಮಂಗಳವಾರ, ಮೇ 18, 2021
24 °C

ಅ.26ರಂದು 'ಕೋರಿ - ರೊಟ್ಟಿ' ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ರಾಕೆಟ್ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 'ಕೋರಿ - ರೊಟ್ಟಿ' ತುಳುಚಿತ್ರವು ಅ. 26ರಂದು ಉಡುಪಿ ಹಾಗೂ ದ.ಕ. ಜಿಲ್ಲೆಯಾದ್ಯಂತ ಒಟ್ಟು 12 ಚಿತ್ರಮಂದಿರ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಅನ್ಸರ್ ಅಹ್ಮದ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಟುಂಬಿಕ ಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಹಾಸ್ಯ, ಸಸ್ಪೆನ್ಸ್ ಹಾಗೂ ಮನೋರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೂ ಇಷ್ಟವಾಗಬಲ್ಲ ಹಾಗೂ ಕುಟುಂಬ ಸಮೇತರಾಗಿ ಒಟ್ಟಿಗೆ ಕುಳಿತುಕೊಂಡು ನೋಡಬಹುದಾದ ಒಂದು ಉತ್ತಮ ಚಿತ್ರವನ್ನು ನಿರ್ಮಿಸಿದ್ದೇವೆ ಎಂದರು.

ಈ ಚಿತ್ರವನ್ನು ರಜನೀಶ್ ಅವರು ನಿರ್ದೇಶಿಸಿ, ಸ್ವತಃ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಖ್ಯಾತ ಟಿವಿ ನಿರೂಪಕಿ ಅನುಶ್ರೀ ನಾಯಕಿ ನಟಿಯಾಗಿ ತೆರೆ ಹಂಚಿಕೊಂಡಿದ್ದಾರೆ. ತುಳುನಾಡಿನ ಹಾಸ್ಯ ದಿಗ್ಗಜರಾದ ನವೀನ್ ಡಿ. ಪಡೀಲ್, ಭೋಜರಾಜ ವಾಮಂಜೂರು ಹಾಗೂ ಅರವಿಂದ ಬೋಳಾರ್ ಪ್ರೇಕ್ಷಕರಿಗೆ ಹಾಸ್ಯ ರಸದೌತಣ ಉಣಬಡಿಸಲಿದ್ದು, ಇವರಿಗೆ ಮಂಜು ರೈ, ಇಳಾ ವಿಟ್ಲ ಇದ್ದಾರೆ. ಹರೀಶ್ ರೈ ಖಳನಟರಾಗಿ ಅಭಿನಯಿಸಿದ್ದಾರೆ ಎಂದು ತಿಳಿಸಿದರು.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡನ್ನು ಉತ್ತರ ಕರ್ನಾಟಕದ ಜಾನಪದ ಗೀತೆಯನ್ನು ತುಳುವಿಗೆ ಭಾಷಾಂತರಿಸಲಾಗಿದೆ. ತಮಿಳಿನ ವಿಕ್ರಂ ಸೆಲ್ವಂ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಸುಬ್ಬಯ್ಯ ಕುಟ್ಟಪ್ಪನವರು ಛಾಯಾಗ್ರಹಣ ನೀಡಿದ್ದು, ವಿಜಯಕುಮಾರ್ ರೈ ಅವರ ಸಂಕಲನವಿದೆ. ಭರತ್ ಕುಮಾರ್ ಹಾಗೂ ಕೃಷ್ಣದಾಸ್ ಸಾಹಿತ್ಯ ನೀಡಿದ್ದಾರೆ. ಸ್ಯಾಂಡಲ್ ವುಡ್ ನ ಕೌರವ್ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಹಿನ್ನೆಲೆ ಗಾಯಕರಾಗಿ ರಾಜೇಶ್ ಕೃಷ್ಣನ್, ಸುಹಾನ ಸೈಯದ್, ಸತೀಶ್ ಪಟ್ಲ ಹಾಗೂ ಸತೀಶ್ ಆರ್ಯ ಹಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಅ. 26ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಜ್ಯೋತಿ ಹಾಗೂ ಉಡುಪಿಯ ಕಲ್ಪನಾ ಚಿತ್ರಮಂದಿರಗಳಲ್ಲಿ ಚಿತ್ರದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮಹಮ್ಮದ್ ಇರ್ಫಾನ್, ನಿರ್ದೇಶಕ ರಜನೀಶ್, ಭರತ್ ಕುಮಾರ್, ಅನ್ವರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು